ದೇಶದಲ್ಲಿ ಜನಸಂಖ್ಯೆ ನಿಯಂತ್ರಿಸಲು ಕೇಂದ್ರ ಆರೋಗ್ಯ ಸಚಿವಾಲಯವು ವಿನೂತನ ತಂತ್ರವೊಂದಕ್ಕೆ ಮೊರೆ ಹೋಗುವ ಬಗ್ಗೆ ಚಿಂತನೆ ನಡೆಸುತ್ತಿದೆ. ಎಲ್ಲಾ ಮನೆಗಳಿಗೂ ಕಾಂಡೋಮ್ ಪೂರೈಸುವುದೇ ಜನಸಂಖ್ಯೆ ನಿಯಂತ್ರಣಕ್ಕೆ ಉತ್ತಮ ಪರಿಹಾರ ಎನ್ನುವುದು ಸಚಿವಾಲಯದ ವಿಶ್ವಾಸ.
ಇಂತಹ ಒಂದು ಯೋಜನೆಯನ್ನು ಸಿದ್ಧಗೊಂಡಿರುವುದರ ಹಿಂದಿನ ಕೈ ಆರೋಗ್ಯ ಸಚಿವ ಗುಲಾಮ್ ನಬೀ ಆಜಾದ್. ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ತರಬೇಕೆಂಬ ವಾದವನ್ನು ತಳ್ಳಿ ಹಾಕಿರುವ ಅವರು ಕಾಂಡೋಮ್ ವಿತರಣೆಯ ಮೂಲಕ ಪರಿಹಾರ ಕಂಡುಕೊಳ್ಳುವ ಭರವಸೆಯಿಂದಿದ್ದಾರೆ.
PR
ಭಾರತದ ಆರು ಲಕ್ಷ ಗ್ರಾಮಗಳ ಪ್ರತಿಯೊಂದು ಮನೆಗಳಿಗೂ ಕಾಂಡೋಮ್ ತಲುಪಬೇಕೆಂಬುದು ಆಜಾದ್ ಬಯಕೆ. 2011ರ ಹೊತ್ತಿಗೆ 119 ಕೋಟಿಗೆ ತಲುಪಲಿರುವ ದೇಶದ ಜನಸಂಖ್ಯೆಯನ್ನು ನಿಯಂತ್ರಿಸಲು ಈ ರೀತಿಯಾಗಿ ಮನೆ ಬಾಗಿಲಲ್ಲೇ ಕಾಂಡೋಮ್ ಸಿಗುವಂತಾದರೆ ಸಹಾಯವಾಗಬಹುದು ಎಂದು ಆರೋಗ್ಯ ಇಲಾಖೆಯ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2001ರ ಜನಗಣತಿ ಪ್ರಕಾರ ಭಾರತದ ಜನಸಂಖ್ಯೆ 102 ಕೋಟಿಗಳಾಗಿದ್ದವು. ಇದು 2030ರ ಹೊತ್ತಿಗೆ ಚೀನಾದ ಜನಸಂಖ್ಯೆಯನ್ನೂ ಮೀರಿಸಲಿದೆ ಎಂದು ಅಂದಾಜಿಸಲಾಗಿದೆ.
ಕಾಂಡೋಮ್ ವಿತರಣೆಯ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಲಾಗುತ್ತದೆ ಎಂದಿರುವ ಅವರಲ್ಲಿ, ಇದು ಎಷ್ಟರ ಮಟ್ಟಿಗೆ ಸಾಧ್ಯ ಎಂದು ಪ್ರಶ್ನಿಸಿದಾಗ, 'ಎಲ್ಲಾ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡು ಯೋಜನೆ ಸಿದ್ಧಪಡಿಸಲಾಗುತ್ತಿದೆ' ಎಂದರು.
ಕಾಂಡೋಮ್ ಅಗತ್ಯವಿದ್ದಾಗ ಅದು ದೊರಕುವಂತಿರಬೇಕು. ಅದನ್ನು ಗಮನದಲ್ಲಿಟ್ಟುಕೊಂಡು ಯೋಜನೆ ರೂಪಿಸಲಾಗುತ್ತಿದೆ. ಈ ಸಂಬಂಧ ರಾಷ್ಟ್ರೀಯ ಗ್ರಾಮಾಂತರ ಆರೋಗ್ಯ ಮಿಷನ್ (ಎನ್ಆರ್ಎಚ್ಎಂ) ಅಂಗ ಸಂಸ್ಥೆಯಾಗಿರುವ ಸಾಮಾಜಿಕ ಆರೋಗ್ಯ ಕಾರ್ಯಕರ್ತರ (ಆಶಾ - ಎಎಸ್ಎಚ್ಎ) ಸಹಕಾರ ಪಡೆಯಲು ಆರೋಗ್ಯ ಸಚಿವಾಲಯ ಯೋಚಿಸುತ್ತಿದೆ ಎಂದು ಮೂಲಗಳು ಹೇಳಿವೆ.
25ರಿಂದ 45 ವರ್ಷಗಳ ನಡುವಿನ ವಿವಾಹಿತ ಅಥವಾ ವಿಧವೆ ಅಥವಾ ವಿಚ್ಛೇದಿತ ಗ್ರಾಮಸ್ಥ ಮಹಿಳೆ 'ಆಶಾ' ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸಮಾಜ ಮತ್ತು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ನಡುವೆ ಸಂವಹನ ಕಲ್ಪಿಸುವ ಜವಾಬ್ದಾರಿ ಇವರದ್ದಾಗಿದೆ.
ಇವರನ್ನೇ ಮನೆ-ಮನೆಗೆ ಕಾಂಡೋಮ್ ವಿತರಿಸಲು ನಿಯೋಜಿಸುವ ಸಾಧ್ಯತೆಗಳಿವೆ. ಇದರ ಬಳಕೆಯ ಕುರಿತೂ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.