ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮಂಗಳೂರು ವಿಮಾನ ದುರಂತ; ನಿದ್ರೆ ಮಾಡಿದ್ದ ಪೈಲಟ್! (Mangalore plane crash | Air India | Zlatko Glusica | H S Ahluwalia)
Bookmark and Share Feedback Print
 
ನವದೆಹಲಿ: 158 ಮಂದಿಯ ಸಾವಿಗೆ ಕಾರಣವಾದ ಮಂಗಳೂರು ವಿಮಾನ ದುರಂತದ ಹಿಂದಿನ ಕಾರಣಗಳು ಒಂದೊಂದೇ ಹೊರಗೆ ಬರುತ್ತಿವೆ. ಇದೀಗ ಕಾಕ್‌ಪಿಟ್‌ನಲ್ಲಿ ಪೈಲಟ್‌ಗಳು ನಡೆಸಿರುವ ಸಂಭಾಷಣೆಗಳು 'ಬ್ಲ್ಯಾಕ್‌ಬಾಕ್ಸ್'ನಿಂದ ತಿಳಿದು ಬಂದಿದ್ದು, ಅದರ ಪ್ರಕಾರ ಮುಖ್ಯ ಪೈಲಟ್ ವಿಮಾನ ಅಪಘಾತವಾಗುವ ಮೊದಲು ಸುಮಾರು ಎರಡು ಗಂಟೆಗಳಷ್ಟು ಹೊತ್ತು ನಿದ್ರಿಸಿದ್ದರಂತೆ!

ಕ್ಯಾಪ್ಟನ್ ಜ್ಲಾಟ್ಕೋ ಗ್ಲೂಸಿಕಾ ನಿದ್ರೆ ಮಾಡಿದ್ದೇ ದುರಂತಕ್ಕೆ ಏಕೈಕ ಕಾರಣವಲ್ಲ. ಅವರು ತೆಗೆದುಕೊಂಡ ಹಲವಾರು ನಿರ್ಧಾರಗಳು ಒಟ್ಟು ಸೇರಿದ್ದರಿಂದ ಹತ್ತಾರು ಕುಟುಂಬಗಳು ತಮ್ಮವರನ್ನು ಕಳೆದುಕೊಳ್ಳುವಂತಾಯಿತು.

* ವಿಮಾನವನ್ನು ಸಹಜವಾಗಿ ಇಳಿಸಿರಲಿಲ್ಲ. ನಿರ್ದಿಷ್ಟ ಮಾನದಂಡಗಳನ್ನು ಅನುಸರಿಸಿರಲಿಲ್ಲ.
* ಪ್ರಯಾಣದ 3.20 ಗಂಟೆಯ ಅವಧಿಯಲ್ಲಿ 1.50 ಗಂಟೆ ನಿದ್ದೆ ಮಾಡಿದ್ದ ಗ್ಲೂಸಿಕಾ.
* ಒಂದು ಸಾವಿರ ಅಡಿಯಲ್ಲಿ ಭೂಸ್ಪರ್ಶ ಮಾಡಬೇಕಾಗಿದ್ದ ವಿಮಾನವು ಭೂಸ್ಪರ್ಶ ಮಾಡಿದ್ದು 4638ನೇ ಅಡಿಯಲ್ಲಿ.
* ಭೂಸ್ಪರ್ಶದ ಹೊತ್ತಿನಲ್ಲಿ ವಿಮಾನವು ಅತಿವೇಗದ ಸ್ಥಿತಿಯಲ್ಲಿತ್ತು.
* ಮುಂದುಗಡೆ 800 ಅಡಿಗಳಷ್ಟೇ ಬಾಕಿ ಉಳಿದಿವೆ ಎನ್ನುವಾಗ ಪೈಲಟ್ ಟೇಕ್-ಆಫ್ ಮಾಡಲು ನಿರ್ಧರಿಸಿದ್ದರು.
* ಈ ಹೊತ್ತಿನಲ್ಲಿ ಮುಖ್ಯ ಪೈಲಟ್ ಗ್ಲೂಸಿಕಾ ಅವರಿಗೆ ಸಹ ಪೈಲಟ್ ಎಚ್ಚರಿಕೆ ನೀಡಿದ್ದರು.

ಸೆರ್ಬಿಯಾ ಮೂಲದ ಬ್ರಿಟೀಷ್ ಪ್ರಜೆ ಕ್ಯಾಪ್ಟನ್ ಜ್ಲಾಕ್ಟೋ ಗ್ಲೂಸಿಕಾ ಮತ್ತು ಸಹ ಪೈಲಟ್ ಮುಂಬೈಯ ಕ್ಯಾಪ್ಟನ್ ಅಹ್ಲುವಾಲಿಯಾ ಅವರು ಚಲಾಯಿಸುತ್ತಿದ್ದ ವಿಮಾನ ಅಪಘಾತಕ್ಕೀಡಾದ ನಂತರ 'ಕಪ್ಪು ಪೆಟ್ಟಿಗೆ'ಯನ್ನು ಪತ್ತೆ ಮಾಡಿ, ಅದರಲ್ಲಿನ ದಾಖಲೆಗಳನ್ನು ಪರಿಶೀಲಿಸಲು ತಜ್ಞರಿಗೆ ವಹಿಸಿಕೊಡಲಾಗಿತ್ತು.
PTI

ಅದರ ವರದಿಯನ್ನೀಗ ನ್ಯಾಯಾಲಯಕ್ಕೆ ನೀಡಲಾಗಿದೆ. ವಿಮಾನ ಅಪಘಾತಕ್ಕೆ ಕಾರಣವಾದ ಹತ್ತು ಹಲವು ಅಂಶಗಳು ಈ ಕಾಕ್‌ಪಿಟ್ ಸಂಭಾಷಣೆ ಮತ್ತು ಅಲ್ಲಿ ನಡೆದಿರುವ ಪ್ರಸಂಗಗಳಿಂದ ಬಹಿರಂಗವಾಗಿದೆ.

2.05 ಗಂಟೆಗಳ ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್‌ನಲ್ಲಿ (ಸಿವಿಸಿ) ದಾಖಲಾಗಿರುವ ಧ್ವನಿ ಮುದ್ರಿಕೆಯ ಪ್ರಕಾರ ವಿಮಾನವು ಸರಿಯಾದ ಪಥದಲ್ಲಿ ಇಳಿಯದೇ ಇದ್ದ ಆರಂಭದಲ್ಲೇ ವಿಮಾನದ ಕಂಪ್ಯೂಟರುಗಳು ವಿಮಾನವನ್ನು ಮೇಲಕ್ಕೆತ್ತುವಂತೆ ಎಚ್ಚರಿಕೆ ನೀಡಿದ್ದವು. ಆದರೆ ಇದನ್ನು ಮುಖ್ಯ ಪೈಲಟ್ ಗ್ಲೂಸಿಕಾ ಗಂಭೀರವಾಗಿ ಪರಿಗಣಿಸಿರಲಿಲ್ಲ.

ಈ ಸಂದರ್ಭದಲ್ಲಿ ಸಹ ಪೈಲಟ್ ಅಹ್ಲುವಾಲಿಯಾ ಕೂಡ 'ಗೋ ಅರೌಂಡ್' (ಇನ್ನಷ್ಟು ಸುತ್ತು ಹಾಕಿ) ಎಂದು ಗ್ಲೂಸಿಕಾ ಅವರಿಗೆ ಸಲಹೆ ನೀಡಿದ್ದರು. ಅದನ್ನೂ ನಿರ್ಲಕ್ಷಿಸಲಾಗಿತ್ತು.

ಪೈಲಟ್‌ಗಳಿಗೆ ನೀಡಿರುವ ನಿರ್ದೇಶನಗಳ ಪ್ರಕಾರ ವಿಮಾನವನ್ನು ಕಡಿಮೆ ಎತ್ತರದಲ್ಲಿರುವಾಗ ಇಳಿಸಬೇಕು. ಅಂದರೆ ಸುಮಾರು 2000 ಅಡಿ ಎತ್ತರದಿಂದ ಇಳಿಸಬೇಕಾಗಿದ್ದ ವಿಮಾನವನ್ನು ಪೈಲಟ್ 4,400 ಅಡಿಗಳಷ್ಟು ಎತ್ತರದಲ್ಲಿದ್ದಾಗಲೇ ಇಳಿಸಲು ಮುಂದಾಗಿದ್ದರು. ಈ ಸಂಬಂಧ ಕಂಪ್ಯೂಟರುಗಳು, ಸಹ-ಪೈಲಟ್ ನೀಡಿದ್ದ ಎಚ್ಚರಿಕೆಗಳನ್ನು ಗ್ಲೂಸಿಕಾ ಪರಿಗಣಿಸಿರಲಿಲ್ಲ.

ಬಳಿಕ ವಿಮಾನ ರನ್‌ವೇಯಲ್ಲಿನ ಒಂದು ಸಾವಿರ ಅಡಿಯಲ್ಲಿನ ಬಿಂದುವಿನಲ್ಲಿ ಭೂಸ್ಪರ್ಶ ಮಾಡಬೇಕಿತ್ತು. ಆದರೆ ಸುಮಾರು ಮೂರುವರೆ ಸಾವಿರ ಅಡಿಯಷ್ಟು ಮುಂದಕ್ಕೆ ಅಂದರೆ, 4638ನೇ ಅಡಿಯಲ್ಲಿ ವಿಮಾನವನ್ನು ಭೂಸ್ಪರ್ಶ ಮಾಡಿಸಲಾಗಿತ್ತು.

ಇದಾದ ಕೆಲ ಕ್ಷಣಗಳಲ್ಲಿ ಅಂದರೆ ಮುಂದುಗಡೆ ಕೇವಲ 800 ಅಡಿ ರನ್‌ವೇ (ಈ ರನ್‌ವೇ ಉದ್ದ 8038 ಅಡಿ) ಮಾತ್ರ ಬಾಕಿ ಉಳಿದಿದೆ ಎನ್ನುವಾಗ ಸಹ ಪೈಲಟ್ ಅಹ್ಲುವಾಲಿಯಾ ಮತ್ತೆ ಎಚ್ಚರಿಕೆ ನೀಡಿದ್ದಾರೆ. 'ಇನ್ನು ರನ್‌ವೇ ಬಾಕಿ ಉಳಿದಿಲ್ಲ' ಎಂದು ಅಹ್ಲುವಾಲಿಯಾ ಹೇಳಿರುವುದು ವಿಮಾನದ ಧ್ವನಿಮುದ್ರಿಕೆಯಲ್ಲಿ ದಾಖಲಾಗಿದೆ.

ಈ ಹೊತ್ತಿನಲ್ಲಾದರೂ ವಿಮಾನಕ್ಕೆ ಗ್ಲೂಸಿಕಾ ಬ್ರೇಕ್ ಹಾಕುತ್ತಿದ್ದರೆ, ದೊಡ್ಡ ದುರಂತವನ್ನು ತಪ್ಪಿಸಬಹುದಿತ್ತು. ಆದರೆ ಎಲ್ಲ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದ ಮುಖ್ಯ ಪೈಲಟ್ ಅತಿ ವೇಗದಿಂದ ಸಾಗುತ್ತಿದ್ದ ವಿಮಾನವನ್ನು ಮತ್ತೆ ಮೇಲಕ್ಕೆತ್ತುವ ನಿರ್ಧಾರಕ್ಕೆ ಬಂದಿದ್ದರು.

ಇದಾದ ಕೆಲವೇ ಕ್ಷಣಗಳಲ್ಲಿ ಭಾರೀ ಸ್ಫೋಟದ ಸದ್ದು ಕಪ್ಪು ಪೆಟ್ಟಿಗೆಯಲ್ಲಿ ದಾಖಲಾಗಿದೆ. ಕ್ಯಾಪ್ಟನ್ ಗ್ಲೂಸಿಕಾ ರನ್‌ವೇಯಲ್ಲಿದ್ದ ವಿಮಾನವನ್ನು ಮತ್ತೆ ಮೇಲಕ್ಕೆತ್ತಲು ಯತ್ನಿಸಿದ್ದು ವಿಫಲವಾಗಿದ್ದರಿಂದ ಪತನವಾಗಿ ದುರಂತ ಸಂಭವಿಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ