ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಶ್ಮೀರಿಗಳ ನಗ್ನ ವೀಡಿಯೋ; ಮುಂದುವರಿದ ನಿಗೂಢತೆ (Mystery video | naked men | security personnel | Kashmir)
Bookmark and Share Feedback Print
 
ನಾಲ್ವರು ಕಾಶ್ಮೀರಿಗಳನ್ನು ಬೆತ್ತಲೆ ಮಾಡಿ ಭದ್ರತಾ ಸಿಬ್ಬಂದಿಗಳು ಚಿತ್ರಹಿಂಸೆ ನೀಡುತ್ತಿರುವ ಮೂರು ನಿಮಿಷಗಳ ಅವಧಿಯ ವೀಡಿಯೋವೊಂದು ಕಣಿವೆ ರಾಜ್ಯದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗುತ್ತಿದೆ. ಆದರೆ ಇತ್ತ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹಸಚಿವ ಪಿ. ಚಿದಂಬರಂ, ವೀಡಿಯೋ ನಂಬಲರ್ಹವಾದುದಲ್ಲ ಎಂದು ಹೇಳಿದ್ದಾರೆ.

ಯೂಟ್ಯೂಬ್ ಮತ್ತು ಫೇಸ್‌ಬುಕ್‌ಗಳಲ್ಲಿ ಕಾಣಿಸಿಕೊಂಡಿರುವ ಈ ವೀಡಿಯೋಗಳನ್ನು ಅಪ್‌ಲೋಡ್ ಮಾಡಿದ್ದು ಯಾರು, ಘಟನೆ ನಡೆದಿರುವುದು ಎಲ್ಲಿ ಮತ್ತು ವೀಡಿಯೋವನ್ನು ಚಿತ್ರೀಕರಿಸಿರುವುದು ಯಾವಾಗ ಎಂಬ ಮಾಹಿತಿಗಳು ಲಭ್ಯವಿಲ್ಲ.

ಈ ಕುರಿತು ತನಿಖೆಗೆ ಮುಂದಾಗಿರುವ ಪೊಲೀಸರು, ಅಕ್ರಮವಾಗಿ ವೀಡಿಯೋ ಪ್ರಕಟಿಸರುವ ಆರೋಪದ ಮೇಲೆ ಯೂಟ್ಯೂಬ್ ಮತ್ತು ಫೇಸ್‌ಬುಕ್‌ಗಳ ಮೇಲೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.

ಮೂರು ನಿಮಿಷಗಳ ಈ ವೀಡಿಯೋದಲ್ಲಿ ಸಮವಸ್ತ್ರ ಧರಿಸದ ಸೈನಿಕರು ನಾಲ್ಕು ಮಂದಿ ಕಾಶ್ಮೀರಿಗಳನ್ನು ನಗ್ನರನ್ನಾಗಿ ಮಾಡಿ ಚಿತ್ರಹಿಂಸೆ ನೀಡುತ್ತಿರುವ ದೃಶ್ಯಗಳಿವೆ. ನಗ್ನರಾಗಿರುವವರನ್ನು ಅಪಹಾಸ್ಯ ಮಾಡುವ ಧ್ವನಿಯೂ ಇಲ್ಲಿ ದಾಖಲಾಗಿದೆ. ಬೆತ್ತಲೆಯಾಗಿರುವವರನ್ನು ಎಳೆದುಕೊಂಡು ಹೋಗುತ್ತಿರುವ ಮುಂದಿನ ವ್ಯಕ್ತಿ, ಹಿಂದೆ ಇದ್ದವರಿಗೆ ಸರಿಯಾಗಿ ಚಿತ್ರೀಕರಿಸುವಂತೆ ಹೇಳುತ್ತಿರುವುದು ಕೇಳುತ್ತಿದೆ.

ಇದನ್ನು ಚಿತ್ರೀಕರಿಸಿದ್ದು ಸ್ವತಃ ಪೊಲೀಸರು ಎಂದು ಹೇಳಿರುವ ಫೇಸ್‌ಬುಕ್‌ನಲ್ಲಿನ 'ಸಿಟಿಜನ್ಸ್ ಆಫ್ ಕಾಶ್ಮೀರ್' ಖಾತೆಯು ಕೆಲ ದಿನಗಳ ಹಿಂದಷ್ಟೇ ಅಪ್‌ಲೋಡ್ ಮಾಡಿತ್ತು.

ಈ ವೀಡಿಯೋ ತುಣುಕಿಗೆ 'Indian Army repeating Abu Ghraib in Kashmir' ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಈ ರೀತಿಯ ಕೃತ್ಯ ನಡೆಸಿರುವುದು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಯೋಧರು ಎಂದೂ ಹೇಳಲಾಗಿದ್ದು, ವೀಡಿಯೋವನ್ನು ವೆಬ್‌ಸೈಟಿನಲ್ಲಿ ಪ್ರಸಾರ ಮಾಡುವ ಮೊದಲು ಅದಕ್ಕೆ ಹಿನ್ನೆಲೆಯಾಗಿ ಭಾರತದ ರಾಷ್ಟ್ರಗೀತೆಯನ್ನು ಸೇರಿಸಲಾಗಿದೆ.

ಸರಕಾರ, ಸೇನೆ ಮತ್ತು ಪೊಲೀಸರ ಪ್ರಕಾರ ಈ ವೀಡಿಯೋದಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ. ಭಾರತದ ಘನತೆಗೆ ಕಪ್ಪುಚುಕ್ಕೆಯನ್ನಿಡಲು ದುಷ್ಕರ್ಮಿಗಳು ಹೂಡಿರುವ ತಂತ್ರವಿದು ಎಂದು ಪೊಲೀಸರು ಹೇಳಿದ್ದು, ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ಈ ವೀಡಿಯೋ ನಂಬಲರ್ಹ ಎನ್ನುವುದಕ್ಕೆ ಇದುವರೆಗೂ ಯಾವುದೇ ಸಾಕ್ಷ್ಯಗಳು ದೊರೆತಿಲ್ಲ. ಅದರಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಗಳು ಯಾರೆಂಬುದನ್ನೂ ಪತ್ತೆ ಹಚ್ಚುವುದು ಸಾಧ್ಯವಾಗಿಲ್ಲ. ಹಾಗಾಗಿ ಅದನ್ನು ಪ್ರಸಾರ ಮಾಡುವುದು ಸುರಕ್ಷಿತವಲ್ಲ ಎಂದು ಚಿದಂಬರಂ ಹೇಳಿಕೆ ನೀಡಿದ ಬೆನ್ನಿಗೆ ಪ್ರತಿಕ್ರಿಯಿರುವ ಜಮ್ಮು-ಕಾಶ್ಮೀರ ಪೊಲೀಸರು, ಎರಡು ವೆಬ್‌ಸೈಟುಗಳ ವಿರುದ್ಧ ಕೇಸು ದಾಖಲಿಸಲಾಗುತ್ತಿದೆ ಎಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ