ಕೇಂದ್ರಪಾರಾ, ಶನಿವಾರ, 11 ಸೆಪ್ಟೆಂಬರ್ 2010( 10:04 IST )
ಇದೊಂದು ಅಚ್ಚರಿಯ ಘಟನೆ, ವ್ಯಕ್ತಿಯೊಬ್ಬ ಸತ್ತು ಹತ್ತು ವರ್ಷ ಕಳೆದಿದ್ದರೂ ಕೂಡ ಸತ್ತ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿರುವ ಘಟನೆ ಒಡಿಶಾದ ಕೇಂದ್ರಪಾರಾ ಜಿಲ್ಲೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಲ್ಲಿನ ಬಾಲಾಭದ್ರಪ್ರಸಾದ್ ಗ್ರಾಮದ ಕಾಶೀನಾಥ್ ಬಸಂತಿಯಾ ಎಂಬುವರ ವಿರುದ್ಧ ಸೆಕ್ಷನ್ 107ರ (ಶಾಂತಿ ಭಂಗ) ಅಡಿಯಲ್ಲಿ ಪೊಲೀಸರು ಕ್ರಿಮಿನಲ್ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು. ಇದು ಪೊಲೀಸರಿಂದ ಆದ ಗುರುತರವಾದ ಲೋಪವಾಗಿದೆ. ಈ ಬಗ್ಗೆ ತನಿಖೆ ನಡೆಯಲಿದೆ ಎಂದು ಕೇಂದ್ರಪಾರಾ ಪೊಲೀಸ್ ವರಿಷ್ಠಾಧಿಕಾರಿ ನರಸಿಂಗ ಭೋಲ್ ತಿಳಿಸಿದ್ದಾರೆ.
ಈ ಪ್ರಕರಣದ ಕುರಿತು ಮಧ್ಯಪ್ರವೇಶಿಸಬೇಕೆಂದು ಕೋರಿ ಕಾಶೀನಾಥ್ ಪುತ್ರ ಅಮೂಲ್ಯ ಬಸಂತಿಯಾ ಅವರು ಒಡಿಶಾದ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ಮನವಿ ಮಾಡಿಕೊಂಡಿದ್ದಾರೆ.
ನಮ್ಮ ತಂದೆ 2000ನೇ ಇಸವಿ ನವೆಂಬರ್ 11ರಂದು ಸಾವನ್ನಪ್ಪಿದ್ದರು. ಆದರೆ ಪೊಲೀಸರು ಅದ್ಯಾವ ರೀತಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದರೋ ತಿಳಿದಿಲ್ಲ. ಅಷ್ಟೇ ಅಲ್ಲ ಈ ಆರೋಪದಲ್ಲಿ ನಮ್ಮ ಕುಟುಂಬದ ಏಳು ಮಂದಿ ಸದಸ್ಯರ ಹೆಸರನ್ನು ಸೇರಿಸುವ ಹುನ್ನಾರವನ್ನು ಪೊಲೀಸರು ನಡೆಸಿದ್ದಾರೆ ಎಂದು ಅಮೂಲ್ಯ ಆರೋಪಿಸಿದ್ದಾರೆ.
ಸಾವನ್ನಪ್ಪಿರುವ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿರುವ ವಿಷಯವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು. ತನಿಖೆಯಲ್ಲಿ ಯಾವ ಅಧಿಕಾರಿ ತಪ್ಪಿತಸ್ಥರೆಂದು ಕಂಡು ಬರುತ್ತದೋ ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭೋಲ್ ತಿಳಿಸಿದ್ದಾರೆ.