ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜಾರ್ಖಂಡ್-ಮುಂಡಾ ಪ್ರಮಾಣವಚನ ಸ್ವೀಕಾರ: ಆಡ್ವಾಣಿ ಗೈರು (Arjun Munda | Jharkhand | harkhand Mukti Morcha | L K Advani)
Bookmark and Share Feedback Print
 
ಜಾರ್ಖಂಡ್‌ನ 8ನೇ ಮುಖ್ಯಮಂತ್ರಿಯಾಗಿ ಬಿಜೆಪಿಯ ಅರ್ಜುನ್ ಮುಂಡಾ ಅವರು ಶನಿವಾರ ಪ್ರಮಾಣವಚನ ಸ್ವೀಕರಿಸುವ ಮೂಲಕ ರಾಷ್ಟ್ರಪತಿ ಆಡಳಿತ ಅಂತ್ಯಗೊಂಡಂತಾಗಿದೆ. ಆದರೆ ಪಕ್ಷದ ಹಿರಿಯ ಮುಖಂಡರಾದ ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ ಗೈರು ಹಾಜರಾಗಿದ್ದು ಪಕ್ಷದೊಳಗಿನ ಅಸಮಾಧಾನ ಹೊರಬಿದ್ದಂತಾಗಿದೆ.

ಜೆಎಂಎಂ-ಬಿಜೆಪಿ ಮೈತ್ರಿಕೂಟ ಸರಕಾರದ ನೂತನ ಮುಖ್ಯಮಂತ್ರಿ ಅರ್ಜುನ್ ಮುಂಡಾ ಅವರಿಗೆ ರಾಜಭವನದಲ್ಲಿ ರಾಜ್ಯಪಾಲ ಎಂಓಎಚ್ ಫಾರೂಕ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು. ಏತನ್ಮಧ್ಯೆ ಸಮಾರಂಭಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಹಾಗೂ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಗೈರುಹಾಜರಾಗಿದ್ದರು.

ಮುಂಡಾ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿ ಮಾಜಿ ಅಧ್ಯಕ್ಷ ರಾಜನಾಥ್ ಸಿಂಗ್, ಛತ್ತೀಸ್‌ಗಡ್ ಮುಖ್ಯಮಂತ್ರಿ ರಮಣ್ ಸಿಂಗ್ ಮತ್ತು ಉತ್ತರಖಂಡ್ ಮುಖ್ಯಮಂತ್ರಿ ರಮೇಶ್ ಫೋಖ್ರಿಯಾಲ್ ಭಾಗವಹಿಸಿದ್ದರು.

ಜಾರ್ಖಂಡ್ ಮುಕ್ತಿ ಮೋರ್ಚಾದ ಬೆಂಬಲದೊಂದಿಗೆ ಅರ್ಜುನ್ ಮುಂಡಾ ಅವರು ನೂತನ ಮುಖ್ಯಮಂತ್ರಿಯಾಗುತ್ತಿರುವ ಬಗ್ಗೆ ಪಕ್ಷದೊಳಗೆ ಯಾವುದೇ ರೀತಿಯ ಭಿನ್ನಾಭಿಪ್ರಾಯ ಇಲ್ಲ ಎಂದು ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಸ್ಪಷ್ಟಪಡಿಸಿದರು.

ಜಾರ್ಖಂಡ್‌ನಲ್ಲಿ ಸರಕಾರ ರಚಿಸುವ ಕುರಿತು ಪಕ್ಷದಲ್ಲಿ ಯಾವುದೇ ರೀತಿಯ ಅಪಸ್ವರ ಇಲ್ಲ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ ಎಂದು ರಾಜನಾಥ್ ಆರೋಪಿಸಿದರು.

ಬಿಜೆಪಿ ಜೆಎಂಎಂ ಬೆಂಬಲದೊಂದಿಗೆ ಜಾರ್ಖಂಡ್‌ನಲ್ಲಿ ಮತ್ತೆ ಸರಕಾರ ರಚಿಸಿ, ಅರ್ಜುನ್ ಮುಂಡಾ ಅವರು ಮುಖ್ಯಮಂತ್ರಿಯಾದ ಬೆಳವಣಿಗೆ ಬಗ್ಗೆ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಆಡ್ವಾಣಿ ಅವರು ಅಸಮಾಧಾನಗೊಂಡಿರುವುದಾಗಿ ಮಾಧ್ಯಮಗಳ ವರದಿ ತಿಳಿಸಿತ್ತು.

ಬಿಜೆಪಿಯ 18, ಜೆಎಂಎಂನ 18, ಎಜೆಎಸ್‌ಯುನ ಐದು, ಜೆಡಿಯುವಿನ ಇಬ್ಬರು ಮತ್ತು ಇಬ್ಬರು ಪಕ್ಷೇತರರು ಸೇರಿದಂತೆ ಒಟ್ಟು 43 ಶಾಸಕರ ಬೆಂಬಲದ ಮೈತ್ರಿಕೂಟದ ನೂತನ ಸರಕಾರ ಅಸ್ತಿತ್ವಕ್ಕೆ ಬಂದಿದ್ದು, ಮುಂಡಾ ಜಾರ್ಖಂಡ್‌ನ ಮುಖ್ಯಮಂತ್ರಿಯಾಗಿ ಮೂರನೇ ಬಾರಿ ಗದ್ದುಗೆ ಏರಿದಂತಾಗಿದೆ.

ನಿನ್ನೆಯಷ್ಟೇ ಮಾಜಿ ಮುಖ್ಯಮಂತ್ರಿ ಮುಂಡಾ ಅವರನ್ನು ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ರಘುವರ ದಾಸ್ ಅವರು ಈ ಸ್ಥಾನವನ್ನು ತೊರೆದ ನಂತರ ಮುಂಡಾರನ್ನು ಆರಿಸಲಾಗಿತ್ತು.

ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಮತ್ತು ಎಡಪಕ್ಷಗಳು ಲೋಕಸಭೆಯಲ್ಲಿ ಮಂಡಿಸಿದ್ದ ಖಂಡನಾ ನಿರ್ಣಯದಲ್ಲಿ ಜೆಎಂಎಂ ವರಿಷ್ಠ ಶಿಬು ಸೊರೆನ್ ಅವರು ಸರಕಾರದ ಪರ ಮತ ಚಲಾಯಿಸಿದ ನಂತರ ಜಾರ್ಖಂಡ್‌ನಲ್ಲಿನ ಜೆಎಂಎಂ ಮತ್ತು ಬಿಜೆಪಿ ಮೈತ್ರಿ ಸರಕಾರ ಉರುಳಿ ಬಿದ್ದಿತ್ತು. ಬಳಿಕ ಜಾರ್ಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ