ಶ್ರೀನಗರದಲ್ಲಿ ಭುಗಿಲೆದ್ದ ಹಿಂಸಾಚಾರ: ಕಟ್ಟಡ, ವಾಹನಕ್ಕೆ ಬೆಂಕಿ
ಶ್ರೀನಗರ, ಶನಿವಾರ, 11 ಸೆಪ್ಟೆಂಬರ್ 2010( 15:39 IST )
ಈದ್ ಉಲ್ ಫಿತ್ರ್ ಮೆರವಣಿಗೆಯ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಮರುಕಳಿಸಿದ್ದು, ಆಕ್ರೋಶಿತ ಗುಂಪು ಹಲವು ಸರಕಾರಿ ಕಟ್ಟಡ, ಪೊಲೀಸ್ ಫೋಸ್ಟ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ಶನಿವಾರ ನಡೆದಿದೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಶ್ರೀನಗರದ ಲಾಲ್ ಚೌಕ್ ಸಮೀಪದ ಅಪರಾಧ ತನಿಖಾ ದಳ ಕಚೇರಿ, ವಿದ್ಯುತ್ ಇಲಾಖೆಯ ಎರಡು ಕಚೇರಿಗಳಿಗೆ ಆಕ್ರೋಶಿತ ಗುಂಪು ಬೆಂಕಿ ಹಚ್ಚಿರುವ ಘಟನೆ ನಡೆದಿದೆ. ಹಜ್ರತ್‌ಬಾಲ್ ಮಸೀದಿ ಸಮೀಪ ನಡೆದ ಘರ್ಷಣೆಯನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದರು.
ಸಾರ್ವಜನಿಕರ ಆಸ್ತಿ ಪಾಸ್ತಿ ಹಾನಿಗೊಳಿಸುವುದನ್ನು ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಹೆಚ್ಚಿನ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯಲ್ಲಿ ಯಾರೂ ಗಾಯಗೊಂಡಿರುವ ಬಗ್ಗೆ ವರದಿಯಾಗಿಲ್ಲ.
ಈದ್ಗಾದಲ್ಲಿ ಈದ್ ಸಮಾರಂಭ ನಡೆಯುತ್ತಿದ್ದು, ಸುಮಾರು ಎರಡು ಲಕ್ಷಕ್ಕೂ ಅಧಿಕ ಮಂದಿ ಪ್ರಾರ್ಥನೆಯಲ್ಲಿ ತೊಡಗಿದ್ದರು. ನಂತರ ಇತ್ತೀಚೆಗೆ ಕಾಶ್ಮೀರದಲ್ಲಿ ಭದ್ರತಾ ಪಡೆ, ಪೊಲೀಸರು ಅಮಾಯಕ ಜನರನ್ನು ಕೊಲ್ಲುತ್ತಿರುವುದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಹುರಿಯತ್ ಕಾನ್ಫ್‌ರೆನ್ಸ್‌ನ ಮಿರ್‌ವಾಜ್ ಉಮರ್ ಫಾರೂಕ್ ಲಾಲ್ ಚೌಕ್‌ದವರೆಗೆ ಮೆರವಣಿಗೆ ನಡೆಸಿ 30 ನಿಮಿಷಗಳ ಕಾಲ ಪ್ರತಿಭಟನೆ ನಡೆಸುವುದಾಗಿ ಕೋರಿದ್ದರು. ಆದರೆ ಪೊಲೀಸರು ಇದಕ್ಕೆ ಅವಕಾಶ ನೀಡದಿದ್ದಾಗ ಆಕ್ರೋಶಿತ ಗುಂಪು ಪೊಲೀಸ್ ವಾಹನ, ಸರಕಾರಿ ಕಚೇರಿಗಳಿಗೆ ಬೆಂಕಿ ಹಚ್ಚಿ ದಾಂಧಲೆ ನಡೆಸಿರುವುದಾಗಿ ಅಧಿಕಾರಿಗಳು ವಿವರಿಸಿದ್ದಾರೆ.