ಉತ್ತರ ಹಾಗೂ ಪೂರ್ವ ರಾಜ್ಯಗಳಲ್ಲಿ ಭಾರೀ ಮಳೆಯ ಪರಿಣಾಮದಿಂದಾಗಿ 13 ಮಂದಿ ಸಾವಿಗೀಡಾಗಿದ್ದು, ಭಾರೀ ಪ್ರವಾಹ ಭೀತಿ ಎದುರಾಗಿದೆ. ನವದೆಹಲಿ, ಹರಿಯಾಣ, ಅರುಣಾಚಲ ಪ್ರದೇಶ, ಅಸ್ಸಾಂ ಹಾಗೂ ಹಲವೆಡೆ ಭಾರೀ ಮಳೆ ಸುರಿದ ಪರಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ಯಮುನಾ ನದಿಯಲ್ಲಿ ನೀರು ಉಕ್ಕೇರುತ್ತಿದ್ದು, ಪ್ರವಾಹ ಭೀತಿ ಎದುರಾಗಿದೆ.
ಅರುಣಾಚಲ ಪ್ರದೇಶದಲ್ಲಿ ಎಂಟು ಮಂದಿ ಭೂಕುಸಿತದ ಪರಿಣಾಮ ಜೀವಂತವಾಗಿ ಮಣ್ಣಿನಡಿಯಲ್ಲಿ ಸಿಲುಕಿ ಸಾವಿಗೀಡಾದರು. ಉತ್ತರ ಸಿಯಾಂಗ್ ಜಿಲ್ಲೆಯಲ್ಲಿ ಅಣೆಕಟ್ಟು ಒಡೆದ ಪರಿಣಾಮ ವ್ಯಾಪಕ ಪ್ರವಾಹ ಏರ್ಪಟ್ಟು, ಹಲವಾರು ಮನೆಗಳು ಇದರ ಕೆಟ್ಟ ಪರಿಣಾಮ ಎದುರಿಸಬೇಕಾಯಿತು. ಹೀಗಾಗಿ ಪ್ರಾಣ ರಕ್ಷಣೆಗಾಗಿ ಹಲವರನ್ನು ಬೇರೆಡೆ ಸ್ಥಳಾಂತರಿಸಲಾಯಿತು. ದೆಹಲಿ ನಗರದಲ್ಲೂ ಮಲೆ ವ್ಯಾಪಕವಾಗಿ ಸುರಿಯುತ್ತಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಭಾರೀ ಮಳೆಯ ಪರಿಣಾಮವಾಗಿ 1.5 ಲಕ್ಷ ಮಂದಿ ಪ್ರವಾಹ ಭೀತಿ ಎದುರಿಸುತ್ತಿದ್ದು ಉತ್ತರ ಭಾಗದ ಅಸ್ಸಾಂನಲ್ಲಿ ಬಹುತೇಕರನ್ನು ಸೂಕ್ತ ಪ್ರದೇಶಗಳಿಗೆ ಈಗಾಗಲೇ ಸ್ಥಳಾಂತರಿಸಲಾಗಿದೆ. ಧೇಮಜಿ ಜಿಲ್ಲೆಯಲ್ಲಿ 60 ಹಳ್ಳಿಗಳಲ್ಲಿ 30,000 ಮಂದಿ ಪ್ರವಾಹದಿಂದ ಸಂಕಷ್ಟಕ್ಕೀಡಾಗಿದ್ದಾರೆ. ಮನೆ ಕುಸಿದ ಪರಿಣಾಮ ಒಬ್ಬ ಮಹಿಳೆ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಕಾಝಿರಂಗ ರಕ್ಷಿತಾರಣ್ಯದಲ್ಲೂ ಪ್ರಾಣಿಗಳೂ ಪ್ರವಾಹ ಭೀತಿ ಎದುರಿಸುತ್ತಿರುವುದರಿಂದ ಎತ್ತರದ ಪ್ರದೇಶಗಳಲ್ಲಿ ರಕ್ಷಣೆ ಪಡೆಯುತ್ತಿವೆ.