ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈದ್ ಆಚರಣೆ: ಜಮ್ಮು ಕಾಶ್ಮೀರ ಸಚಿವ ಮನೆ ಮೇಲೆ ದಾಳಿ (Peerzada mohammad sayeed|jammu and kashmir protest|eid celebrations|education minister)
ಜಮ್ಮು ಕಾಶ್ಮೀರದ ಶಿಕ್ಷಣ ಸಚಿವ ಪೀರ್ಜಾದ ಮಹಮ್ಮದ್ ಸಯೀದ್ ಅವರ ಅನಂತನಾಗ್ ಜಿಲ್ಲೆಯಲ್ಲಿರುವ ಪಿತ್ರಾರ್ಜಿತ ಮನೆ ಮೇಲೆ ಗುಂಪೊಂದು ದಾಳಿ ಮಾಡಿದ ಘಟನೆ ನಡೆದಿದೆ. ಪೊಲೀಸರು ಅಶ್ರುವಾಯು ಪ್ರಯೋಗಿಸಿ ಗುಂಪನ್ನು ಚದುರಿಸಿದ್ದಾರೆ.
55 ಕಿಮೀ ದೂರದ ಕೋಕೆರ್ನಾಗ್ ಪ್ರದೇಶದ ದಮ್ಹಾಲ್ ಕುಶಿಪೋರಾದ ಬಳಿ ದೊಡ್ಡ ದೊಡ್ಡ ಗಾತ್ರದ ಕಲ್ಲುಗಳನ್ನು ಹೊತ್ತೊಯ್ದು ಸಯೀದ್ ಮನೆ ಮೇಲೆ ತೂರುತ್ತಿದ್ದ ಸಂದರ್ಭ ಅಶ್ರುವಾಯು ದಾಳಿ ನಡೆಸಿ ಚದುರಿಸಿದ್ದೇವೆ. ಆದರೆ ಈ ದುಷ್ಕೃತ್ಯ ನಡೆಸಿದವರ ಗುರುತು ಮಾತ್ರ ಪತ್ತೆಯಾಗಿಲ್ಲ. ದಾಳಿ ಕೋರರ ಪೈಕಿ ಒಬ್ಬರಿಗೆ ಗಾಯಗಳಾಗಿದ್ದು, ಅವರ ಸಮರ್ಪಕ ವಿವರ ಲಭ್ಯವಾಗಿಲ್ಲ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಚಿವ ಸಯೀದ್ ಈದ್ ಪ್ರಯುಕ್ತ ತಮ್ಮ ಪೂರ್ವಜರ ಈ ಮನೆಗೆ ಬಂದಿದ್ದರು. ಹಾಗೂ ದಾಳಿ ನಡೆದ ಸಂದರ್ಭ ಮನೆಯಲ್ಲಿ ಇದ್ದರು. ಆದರೆ ಸಚಿವರಿಗಾಗಲೀ, ಅವರ ಕುಟುಂಬದವರಿಗಾಗಲೀ ಯಾವುದೇ ತೊಂದರೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈದ್ ಉಲ್ ಫಿತ್ರ್ ಮೆರವಣಿಗೆಯ ಸಂದರ್ಭದಲ್ಲಿ ಶನಿವಾರವೂ ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ ಮರುಕಳಿಸಿದ್ದು, ಆಕ್ರೋಶಿತ ಗುಂಪು ಹಲವು ಸರಕಾರಿ ಕಟ್ಟಡ, ಪೊಲೀಸ್ ಫೋಸ್ಟ್‌ಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿತ್ತು. ಇದರಿಂದ ಮುಂಜಾಗರೂಕತೆಗಾಗಿ ಮತ್ತೆ ನಗರದಲ್ಲಿ ಕರ್ಫ್ಯೂ ಹೇರಲಾಗಿತ್ತು.