ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ ದಾಳಿ ಹಿಂದೆ ಪಾಕಿಸ್ತಾನವಿಲ್ಲ; ಸಲ್ಮಾನ್ ತಿಪ್ಪರಲಾಗ (Salman Khan | Pakistan | Mumbai attacks | BJP)
Bookmark and Share Feedback Print
 
2008ರ ನವೆಂಬರ್ 26ರಂದು ಮುಂಬೈ ಮೇಲೆ ನಡೆದ ದಾಳಿಯಲ್ಲಿ ಗಣ್ಯರು ಗುರಿಯಾಗಿದ್ದರಿಂದ ಅದು ಭಾರೀ ಪ್ರಚಾರ ಪಡೆದುಕೊಂಡಿತು. ಅಷ್ಟಕ್ಕೂ ಈ ದಾಳಿ ಹಿಂದೆ ಪಾಕಿಸ್ತಾನ ಸರಕಾರ ಇಲ್ಲವೆಂಬ ಸತ್ಯ ಎಲ್ಲರಿಗೂ ತಿಳಿದಿದೆ ಎಂದು ಬಾಲಿಶ ಹೇಳಿಕೆ ನೀಡಿದ್ದ ಬಾಲಿವುಡ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್ ಕೊನೆಗೂ ಕ್ಷಮೆ ಯಾಚಿಸಿದ್ದಾರೆ.

ಪಾಕಿಸ್ತಾನದ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಅವರು, 'ಮುಂಬೈ ದಾಳಿಯ ನಂತರ ಈ ಕುರಿತು ದೊಡ್ಡ ಮಟ್ಟದ ಅತಿಶಯವನ್ನು ಸೃಷ್ಟಿಸಲಾಯಿತು. ಇದಕ್ಕೆ ಕಾರಣ ಶ್ರೀಮಂತರ ನೆಲೆಗಳು ಗುರಿಯಾಗಿದ್ದುದು. ದಾಳಿಗಳು ರೈಲುಗಳಲ್ಲಿ ಮತ್ತು ಸಣ್ಣ ಪುಟ್ಟ ನಗರಗಳಲ್ಲೂ ನಡೆಯುತ್ತಿದೆ. ಆದರೆ ಅದರ ಕುರಿತು ಯಾರೊಬ್ಬರೂ ಹೆಚ್ಚು ಮಾತನಾಡುತ್ತಿಲ್ಲ' ಎಂದಿದ್ದರು.

ಪ್ರತಿಯೊಬ್ಬರೂ ಮುಂಬೈ ದಾಳಿಯನ್ನು ಭಾರೀ ಭೀತಿಯೆಂಬಂತೆ ಪರಿಗಣಿಸಿರುವುದಕ್ಕೆ ಕಾರಣ ತಾಜ್ ಮತ್ತು ಒಬೆರಾಯ್‌ಗಳಂತಹ ಐಷಾರಾಮಿ ಹೊಟೇಲುಗಳು ಗುರಿಯಾಗಿರುವುದು. ದಾಳಿ ನಡೆದುದು ನಮ್ಮ ಭದ್ರತಾ ವೈಫಲ್ಯದಿಂದ ಎಂದು ನಟ ಅಭಿಪ್ರಾಯಪಟ್ಟಿದ್ದರು.

ಇಷ್ಟಕ್ಕೇ ನಿಲ್ಲದ ಸಲ್ಮಾನ್ ಪ್ರವರ, ಪಾಕಿಸ್ತಾನವನ್ನು ನಿರಪರಾಧಿ ಎಂಬಷ್ಟಕ್ಕೆ ಹೋಗಿತ್ತು.

'ಈ ದಾಳಿಯ ಹಿಂದೆ ಪಾಕಿಸ್ತಾನ ಸರಕಾರವಿಲ್ಲ ಎನ್ನುವುದು ಪ್ರತಿಯೊಬ್ಬರಿಗೂ ಗೊತ್ತು, ಇದೊಂದು ಭಯೋತ್ಪಾದನಾ ದಾಳಿ. ನಮ್ಮ ಭದ್ರತೆಯು ವಿಫಲವಾಗಿತ್ತು. ಈ ಹಿಂದೆಯೂ ಹಲವು ದಾಳಿಗಳು ನಡೆದಿವೆ. ಅವೆಲ್ಲವೂ ಪಾಕಿಸ್ತಾನದಿಂದ ನಡೆದುದಲ್ಲ. ನಮ್ಮೊಳಗಿನವರಿಂದಲೂ ನಡೆದಿತ್ತು' ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ದಯವಿಟ್ಟು ಕ್ಷಮಿಸಿ: ಸಲ್ಮಾನ್
ತನ್ನ ಹೇಳಿಕೆ ತೀವ್ರ ವಿವಾದಕ್ಕೀಡಾಗುತ್ತಿರುವಂತೆ ಸ್ಪಷ್ಟನೆ ನೀಡಿರುವ ಸಲ್ಮಾನ್, ತನ್ನದು ತಪ್ಪಾಯಿತು. ಯಾರಿಗಾದರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ ಎಂದು ಹೇಳಿದ್ದಾರೆ.

ಪ್ರತಿಯೊಬ್ಬ ಮಾನವನ ಜೀವವೂ ಅಮೂಲ್ಯ. ಅದು ಮುಂಬೈ ದಾಳಿಯಾಗಿರಬಹುದು ಅಥವಾ ಅಮೆರಿಕಾದ ಮೇಲಿನ ದಾಳಿಯಾಗಿರಬಹುದು. ನಾನು ನೀಡಿರುವ ಸಂದರ್ಶನವನ್ನು ಸರಿಯಾದ ರೀತಿಯಲ್ಲಿ ಬಿತ್ತರಿಸದೆ ವಿವಾದಕ್ಕೆ ಕಾರಣವಾಯಿತು. ಮೂರು ವಾರಗಳ ಹಿಂದೆ ನೀಡಿದ್ದ ಸಂದರ್ಶನವದು. ಈಗ ಈದ್ ಮತ್ತು ಗಣೇಶೋತ್ಸವ ಸಂದರ್ಭದಲ್ಲಿ ಅದನ್ನು ಪ್ರಸಾರ ಮಾಡಲಾಗಿದೆ ಎಂದು ಪಾಕ್ ಚಾನೆಲ್ ವಿರುದ್ಧ ನಟ ಅಸಮಾಧಾನ ವ್ಯಕ್ತಪಡಿಸಿದರು.

ನನ್ನ ಹೇಳಿಕೆ ಸ್ಪಷ್ಟವಾಗಿದೆ. ಪ್ರತಿಯೊಬ್ಬ ಮನುಷ್ಯನ ಜೀವವೂ ಅಮೂಲ್ಯ. ಕೆಲವೇ ದಾಳಿಗಳನ್ನು ಗುರಿಯಾಗಿಟ್ಟುಕೊಂಡು ಹೆಚ್ಚಿನ ಮಹತ್ವ ನೀಡುವುದು ಯಾಕೆ? ಯಾವುದೇ ರೀತಿಯ ಭಯೋತ್ಪಾದನೆಯೂ ಕ್ಷಮಾರ್ಹವಲ್ಲ. ಭಯೋತ್ಪಾದಕನಿಗೆ ದೇಶವಿಲ್ಲ, ಆತನಿಗೆ ಧರ್ಮಲೂ ಇಲ್ಲ. ಅದು ಪುಕ್ಕಲರ ಕೆಲಸ. ನಮ್ಮ ದೇಶದ ರಕ್ಷಣಾ ಪಡೆಗಳ ಬಗ್ಗೆ ನನಗೆ ಯಾವತ್ತೂ ಅಪಾರ ನಂಬಿಕೆಯಿದೆ. ನಾನು ನೀಡಿರುವ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ದಯವಿಟ್ಟು ಕ್ಷಮಿಸಿ ಎಂದರು.

ಬೇಜವಾಬ್ದಾರಿಯುತ ಹೇಳಿಕೆ: ಬಿಜೆಪಿ
ಸಲ್ಮಾನ್ ವಿವಾದಿತ ಹೇಳಿಕೆ ನೀಡುತ್ತಿದ್ದಂತೆ ವಾಗ್ದಾಳಿ ನಡೆಸಿದ ಬಿಜೆಪಿ, ತಕ್ಷಣವೇ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿತು. ಅದಾದ ಸ್ವಲ್ಪವೇ ಹೊತ್ತಿನಲ್ಲಿ ಬಾಲಿವುಡ್ ನಟ ವಿಷಾದ ವ್ಯಕ್ತಪಡಿಸಿದರು.

ಸಲ್ಮಾನ್ ನೀಡಿರುವ ಅನಗತ್ಯ ಮತ್ತು ಬೇಜವಾಬ್ದಾರಿಯುತ ಹೇಳಿಕೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಅದೂ ಅವರು ಹೇಳಿಕೆ ನೀಡಿರುವುದು ಪಾಕಿಸ್ತಾನದ ಚಾನೆಲ್‌ಗೆ. ಕೇವಲ ಗಣ್ಯರನ್ನು ಗುರಿ ಮಾಡಲಾಗಿತ್ತು ಎಂದು ಅವರು ಹೇಗೆ ಹೇಳುತ್ತಾರೆ? ರೈಲ್ವೇ ನಿಲ್ದಾಣದಲ್ಲಿ ಜನತೆ ಮತ್ತು ಭದ್ರತಾ ಸಿಬ್ಬಂದಿಗಳು ಬಲಿಯಾಗಿರುವುದು ಅವರಿಗೆ ತಿಳಿದಿಲ್ಲವೇ? ಅದಕ್ಕಿಂತಲೂ ಹೆಚ್ಚಾಗಿ ಪಾಕಿಸ್ತಾನ ಸರಕಾರ ಮತ್ತು ಐಎಸ್‌ಐಗೆ ಕ್ಲೀನ್ ಚಿಟ್ ನೀಡಲು ಸಲ್ಮಾನ್‌ಗೆ ಯಾವುದೇ ಅಧಿಕಾರವಿಲ್ಲ ಎಂದು ಬಿಜೆಪಿ ವಕ್ತಾರ ಸೈಯದ್ ಶಹನಾವಾಜ್ ಹುಸೇನ್ ಆಕ್ರೋಶ ವ್ಯಕ್ತಪಡಿಸಿದ್ದರು.

ಸಲ್ಮಾನ್ ಹೇಳಿಕೆಯಿಂದ ಪಾಕಿಸ್ತಾನಕ್ಕೆ ಪುಷ್ಠಿ ಬಂದಂತಾಗಿದೆ. ಇದು ಭಾರತದ ವಾದಕ್ಕೂ ಹಿನ್ನಡೆಯಾದಂತಾಗಿದೆ. ಭಾರತೀಯ ತಾರೆಯೊಬ್ಬ ಇಂತಹ ಅಪರಾತಪರ ಹೇಳಿಕೆ ನೀಡಿ ಅಭಿಮಾನಿಗಳಿಗೆ ನಿರಾಸೆಯನ್ನುಂಟು ಮಾಡಿದ್ದಾರೆ. ಈಗ ಒಂದು ವೇಳೆ ಪೋಟಾ ಕಾಯ್ದೆ ಇದ್ದಿದ್ದಿದ್ದರೆ, ಸಲ್ಮಾನ್ ಜೈಲಿನಲ್ಲಿರುತ್ತಿದ್ದರು. ಅವರು ಇಂತಹ ಹೇಳಿಕೆ ನೀಡುವುದನ್ನು ಬಿಟ್ಟು, ತನ್ನ ಸಿನಿಮಾಗಳ ಬಗ್ಗೆ ಗಮನ ಹರಿಸಲಿ ಎಂದಿದ್ದರು.

ಶಿವಸೇನೆ ಕಿಡಿ...
ಸಲ್ಮಾನ್ ಹೇಳಿಕೆ ದುರದೃಷ್ಟಕರ ಎಂದು ಹೇಳಿರುವ ಶಿವಸೇನೆ, ಬಾಲಿವುಡ್ ನಟನ ವಿರುದ್ಧ ತೀವ್ರವಾಗಿ ಟೀಕಿಸಿದೆ.

ಮುಂಬೈ ದಾಳಿ ದೇಶದ ವಿರುದ್ಧ ಸಾರಿದ ಯುದ್ಧವಾಗಿತ್ತು. ಅಂದು ಸಿಎಸ್‌ಟಿಯಲ್ಲಿ ಅಂಬಾನಿ ತಂಗಿರಲಿಲ್ಲ. ಅಥವಾ ಕಾಮಾ ಲೇನ್‌ನಲ್ಲಿ ಟಾಟಾ ಅಥವಾ ಬಿರ್ಲಾ ಇರಲಿಲ್ಲ. ಇವೆರಡೂ ಕಡೆಗಳಲ್ಲಿ ಬಲಿಯಾದವರು ಜನಸಾಮಾನ್ಯರು. ಭಾರತೀಯ ಚಾನೆಲ್‌ಗಳನ್ನು ಬಹಿಷ್ಕರಿಸಿರುವ ಪಾಕಿಸ್ತಾನಕ್ಕೆ, ಆ ದೇಶದ ಚಾನೆಲ್‌ಗೆ ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಸೇನೆಯ ನಾಯಕ ಸಂಜಯ್ ರಾವುತ್ ಹೇಳಿದ್ದರು.

ತಕ್ಷಣವೇ ಸಲ್ಮಾನ್ ಕ್ಷಮೆ ಯಾಚಿಸಬೇಕು ಎಂದು ರಾವುತ್ ಆಗ್ರಹಿಸಿದ್ದರು.

ಹೇಳಿಕೆ ತಪ್ಪು: ಕಾಂಗ್ರೆಸ್
ಮಹಾರಾಷ್ಟ್ರ ಮುಖ್ಯಮಂತ್ರಿ ಅಶೋಕ್ ಚೌಹಾನ್ ಸೇರಿದಂತೆ ಕಾಂಗ್ರೆಸ್‌ನಿಂದಲೂ ಸಲ್ಮಾನ್ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ದಾಳಿ ಯೋಜನೆ ರೂಪುಗೊಂಡಿರುವುದು ಪಾಕಿಸ್ತಾನದಲ್ಲಿ ಎಂಬುದು ಎಲ್ಲರಿಗೂ ತಿಳಿದಿರುವಾಗ, ಅವು ಇಂತಹ ಹೇಳಿಕೆಯನ್ನು ಹೇಗೆ ನೀಡುತ್ತಾರೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಸಲ್ಮಾನ್ ನೀಡಿರುವ ಹೇಳಿಕೆ ಸರಿಯಾದುದಲ್ಲ. ಇಲ್ಲಿ ಶ್ರೀಮಂತರು ಕೊಲ್ಲಲ್ಪಟ್ಟರು ಎಂದು ಹೇಳಲಾಗದು. ಇಲ್ಲಿ ಹಲವಾರು ಮಂದಿ ಜೀವ ಕಳೆದುಕೊಂಡರು ಎಂಬುದೇ ಸರಿಯಾದುದು ಎಂದು ಕಾಂಗ್ರೆಸ್ ವಕ್ತಾರ ಅನಂತ್ ಗಾಡ್ಗಿಲ್ ಹೇಳಿದ್ದಾರೆ.

ಮಗ ತಪ್ಪು ಮಾಡಿದ್ದಾನೆ: ಸಲ್ಮಾನ್ ತಂದೆ
ಸಲ್ಮಾನ್ ವಿವಾದಿತ ಹೇಳಿಕೆ ನೀಡುತ್ತಿದ್ದಂತೆ ಮುಂದೆ ಬಂದಿದ್ದ ಅವರ ತಂದೆ ಸಲೀಂ ಖಾನ್, ಮಗ ನೀಡಿರುವ ಹೇಳಿಕೆ ನೂರಕ್ಕೆ ನೂರು ತಪ್ಪಾದುದಾಗಿದೆ, ಆತ ತಕ್ಷಣವೇ ಕ್ಷಮೆ ಕೇಳಬೇಕೆಂದು ಹೇಳಿದ್ದರು.

ನನ್ನ ಮಗ ಮಾತುಗಾರ ಅಥವಾ ರಾಜಕಾರಣಿಯಲ್ಲ. ಹಾಗಾಗಿ ಆತ ಆಯ್ದುಕೊಂಡ ಶಬ್ದಗಳಲ್ಲಿ ವ್ಯತ್ಯಾಸವಾಗಿದೆ. ಆತ ನೀಡಿರುವ ಹೇಳಿಕೆ ಶುದ್ಧ ತಪ್ಪು. ಖಂಡಿತಾ ಆತ ಮುಂದೆ ಬಂದು ಕ್ಷಮೆ ಕೇಳಬೇಕು ಮತ್ತು ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದರು.

ಬಾಲಿಶ ಹೇಳಿಕೆ: ಉಜ್ವಲ್ ನಿಕ್ಕಂ
ಸಲ್ಮಾನ್ ಖಾನ್ ನೀಡಿರುವುದು ಸಂಪೂರ್ಣವಾಗಿ ಬಾಲಿಶವಾದ ಹೇಳಿಕೆ. ದಾಳಿಯನ್ನು ಪಾಕಿಸ್ತಾನದಲ್ಲೇ ರೂಪಿಸಲಾಗಿತ್ತು ಎಂದು ನ್ಯಾಯಾಲಯದಲ್ಲಿನ ವಿಚಾರಣೆಯೇ ರುಜುವಾತುಪಡಿಸಿದೆ. ಇದೊಂದು ಯುದ್ಧದ ಭಾಗವಾಗಿತ್ತು ಎಂದು ನಿರೂಪಿಸಲಾಗಿದೆ. ಆದರೂ ಇಂತಹ ಹೇಳಿಕೆಯನ್ನು ನಟ ನೀಡಿರುವುದು ದುರದೃಷ್ಟಕರ ಎಂದು ಮುಂಬೈ ದಾಳಿಯಲ್ಲಿ ಸರಕಾರದ ಪರ ವಾದಿಸಿದ್ದ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ಖಂಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ