ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈಗಿನ ಭಯೋತ್ಪಾದನೆಯದ್ದು ಯಾವ ಬಣ್ಣ?: ಮೋದಿ ಪ್ರಶ್ನೆ (Kashmir valley | Narendra Modi | P Chidambaram | saffron terrorism)
Bookmark and Share Feedback Print
 
'ಕೇಸರಿ ಭಯೋತ್ಪಾದನೆ' ಎಂಬ ಉಕ್ತಿ ಬಳಸಿದ್ದ ಕೇಂದ್ರ ಗೃಹಸಚಿವ ಪಿ. ಚಿದಂಬರಂ ಅವರನ್ನು ಮತ್ತೆ ಎಳೆದು ತಂದಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಪ್ರಸಕ್ತ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವುದು ಯಾವ ಬಣ್ಣದ ಭಯೋತ್ಪಾದನೆ ಎಂದು ಬಣ್ಣಿಸುವಂತೆ ಒತ್ತಾಯಿಸಿದ್ದಾರೆ.

ನಮ್ಮ ಗೃಹಸಚಿವ ಚಿದಂಬರಂ ಅವರ ಪ್ರಕಾರ ಈಗ ಭಯೋತ್ಪಾದನೆಗೂ ಹಲವು ಬಣ್ಣಗಳಿವೆ. ಹಾಗಾಗಿ ಈಗ ಕಾಶ್ಮೀರದ ಜನತೆ ಎದುರಿಸುತ್ತಿರುವ ಭಯೋತ್ಪಾದನೆಯ ಬಣ್ಣ ಯಾವುದು ಎಂದು ಅವರಲ್ಲಿ ಕೇಳಲು ನಾನು ಬಯಸುತ್ತಿದ್ದೇನೆ. ಸಾವಿರಾರು ಕಾಶ್ಮೀರಿ ಪಂಡಿತರು ಎದುರಿಸುತ್ತಿರುವ ಹಿಂಸಾಚಾರದ ಬಣ್ಣ ಯಾವುದು ಎಂದು ಬಿಜೆಪಿ ಯುವ ವಾಹಿನಿ ಆಯೋಜಿಸಿದ್ದ ವಿಚಾರಗೋಷ್ಠಿಯೊಂದನ್ನು ಉದ್ದೇಶಿಸಿ ಮೋದಿ ಪ್ರಶ್ನಿಸಿದರು.

ರಾಜ್ಯ ಪೊಲೀಸ್ ಮಹಾನಿರ್ದೇಶಕರುಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಚಿದಂಬರಂ, ದೇಶದಲ್ಲಿ ನಡೆದ ಹಲವು ಬಾಂಬ್ ಸ್ಫೋಟಗಳ ಹಿಂದೆ ಕೇಸರಿ ಭಯೋತ್ಪಾದನೆಯಿರುವುದು ಕಂಡು ಬಂದಿದೆ. ಇದನ್ನು ಮಟ್ಟ ಹಾಕಲು ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಂಘಟಿತವಾಗಿ ಕೆಲಸ ಮಾಡಬೇಕಾಗಿದೆ ಎಂದಿದ್ದರು.

ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡ ನಂತರ ನೇರವಾಗಿ ಕಾಂಗ್ರೆಸ್ ವಿರುದ್ಧವೂ ಮೋದಿ ಈ ಸಂದರ್ಭದಲ್ಲಿ ಹರಿ ಹಾಯ್ದರು.

ಕಾಶ್ಮೀರಿ ಪಂಡಿತರ ವಿರುದ್ಧ ಕಣಿವೆ ರಾಜ್ಯದಲ್ಲಿ ಹಿಂಸಾಚಾರ ನಡೆಸಲಾಗುತ್ತಿದೆ. ಅವರು ಅಸಹಾಯಕರಾಗುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಏನು ಹೇಳುತ್ತಿದೆ. ಯುಪಿಎ ಸರಕಾರದಲ್ಲಿ ಏನಾದರೂ ಉತ್ತರ ಇದೆಯೇ? ಅವರ ರಕ್ಷಣೆಗಾಗಿ ಏನಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ತನ್ನ ಮತ ಬ್ಯಾಂಕ್ ರಾಜಕಾರಣ ಮತ್ತು ಭಯೋತ್ಪಾದನೆಯ ಮೇಲಿನ ನೀತಿಗಳಿಂದಾಗಿ ದೇಶವನ್ನು ದುರಂತದೆಡೆಗೆ ಸಾಗಿಸುತ್ತಿದೆ ಎಂದು ಆರೋಪಿಸಿದ ಮೋದಿ, ಪ್ರಗತಿಯತ್ತ ಸಾಗುತ್ತಿರುವ ಗುಜರಾತಿನ ಗೌರವಕ್ಕೆ ಧಕ್ಕೆ ತರಲು ಯತ್ನಿಸುವವರಿಗೆ ಜನತೆ ಸೂಕ್ತ ಸಂದರ್ಭದಲ್ಲಿ ಸಮರ್ಥ ಉತ್ತರವನ್ನು ನೀಡಲಿದ್ದಾರೆ ಎಂದರು.

ಅದೇ ಹೊತ್ತಿಗೆ ತನ್ನ ಸರಕಾರವು ರಾಜ್ಯದ ಅಭಿವೃದ್ಧಿ ಮತ್ತು ಶಾಂತಿಯನ್ನು ಮುಂದುವರಿಸಲು ಕಳೆದ ಒಂದು ದಶಕದಿಂದ ಶ್ರಮವಹಿಸುತ್ತಿದೆ ಎಂದು ಈ ಕುರಿತು ವಿವರಣೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ