ಅತ್ಯಾಚಾರ ಆರೋಪ ಹೊತ್ತಿರುವ ವ್ಯಕ್ತಿಗೆ ಆತನ ಬಡತನವನ್ನು ಆಧಾರವಾಗಿಟ್ಟುಕೊಂಡು ಶಿಕ್ಷೆಯನ್ನು ಕಡಿಮೆ ಮಾಡಲಾಗದು ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376ರ ಅಡಿಯಲ್ಲಿ ಅತ್ಯಾಚಾರಿಗೆ ಕನಿಷ್ಠ ಶಿಕ್ಷೆಯೆಂದರೆ ಏಳು ವರ್ಷಗಳ ಕಠಿಣ ಶಿಕ್ಷೆ. ಅರ್ಹ ಮತ್ತು ವಿಶೇಷ ಕಾರಣಗಳಿಗಾಗಿ ನ್ಯಾಯಾಧೀಶರು ಶಿಕ್ಷೆಯನ್ನು ಕಡಿಮೆ ಮಾಡಬಹುದಾಗಿದೆ.
ಆದರೆ ಇಲ್ಲಿ ತಪ್ಪಿತಸ್ಥನ ಸಾಮಾಜಿಕ-ಆರ್ಥಿಕ ಮಟ್ಟವು ಅಪ್ರಸ್ತುತವಾಗುತ್ತದೆ ಎಂದು ಕಳೆದ ವಾರವಷ್ಟೇ ಬಾಂಬೆ ಹೈಕೋರ್ಟಿನ ನಾಗ್ಪುರ ಪೀಠದ ನ್ಯಾಯಮೂರ್ತಿ ಎ.ಪಿ. ಭಾಂಗಲೆಯವರು ತನ್ನ ತೀರ್ಪಿನಲ್ಲಿ ಹೇಳಿದ್ದಾರೆ.
ಭಂಡಾರ ಜಿಲ್ಲೆಯ ವಾರ್ತಿ ಎಂಬಲ್ಲಿನ ತನ್ನ ಗ್ರಾಮದಲ್ಲಿ 22ರ ಹರೆಯದ ಯುವತಿಯೊಬ್ಬಳನ್ನು ಅತ್ಯಾಚಾರ ಎಸಗಿದ ಆರೋಪ ಹೊತ್ತಿದ್ದ ಸತಿನಾಥ್ ರಾವುತ್ ಎಂಬ ಕಾರ್ಮಿಕನ ಪ್ರಕರಣದಲ್ಲಿ ಮೇಲಿನಂತೆ ನ್ಯಾಯಾಧೀಶರು ಉಲ್ಲೇಖಿಸಿದ್ದರು.
ತನ್ನ ಮೂರರ ಹರೆಯ ಮಗಳೊಂದಿಗೆ ಮನೆಯಲ್ಲಿ ಏಕಾಂಗಿಯಾಗಿದ್ದ ಸಂದರ್ಭದಲ್ಲಿ ಮಹಿಳೆಯ ಮನೆಗೆ ನುಗ್ಗಿದ್ದ ರಾವುತ್, ಬೆದರಿಸಿ ಆಕೆಯನ್ನು ಅತ್ಯಾಚಾರ ಮಾಡಿದ್ದ. ಈ ಸಂಬಂಧ 2007ರ ಫೆಬ್ರವರಿಯಲ್ಲಿ ಭಂಡಾರದಲ್ಲಿನ ಸೆಷನ್ಸ್ ಕೋರ್ಟ್ ತಪ್ಪಿತಸ್ಥನಿಗೆ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.
ನಂತರ ಆತ ಹೈಕೋರ್ಟ್ ಮೊರೆ ಹೋಗಿದ್ದ. ಐವರು ಮಕ್ಕಳು ಮತ್ತು ಅನಾರೋಗ್ಯ ಪೀಡಿತೆ ತಾಯಿಯನ್ನು ಹೊಂದಿರುವ ದೊಡ್ಡ ಕುಟುಂಬ ನನ್ನನ್ನು ನಂಬಿಕೊಂಡಿರುವ ಕಾರಣ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ರಾವುತ್ ನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದ.
ಆತನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಪರಿಗಣಿಸಿ ಸೆಷನ್ಸ್ ಕೋರ್ಟ್ ಶಿಕ್ಷೆಯನ್ನು ಇನ್ನಷ್ಟು ಕಡಿಮೆ ಮಾಡಬಹುದಿತ್ತು ಎಂದು ಆತನ ವಕೀಲರು ವಾದಿಸಿದ್ದರು.
ಆದರೆ ಸೆಷನ್ಸ್ ಕೋರ್ಟ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದ ಹೈಕೋರ್ಟ್, ಸುಪ್ರೀಂ ಕೋರ್ಟ್ ನೀಡಿರುವ ಹಲವು ತೀರ್ಪುಗಳ ಪ್ರಕಾರ ತಪ್ಪಿತಸ್ಥನ ಆರ್ಥಿಕ-ಸಾಮಾಜಿಕ ಪರಿಸ್ಥಿತಿ, ಆತನ ಧರ್ಮ, ಜಾತಿ, ನಂಬಿಕೆಗಳು ಇಲ್ಲಿ ಗಣನೆಗೆ ಬರುವುದಿಲ್ಲ; ಆತ ಎಸಗಿರುವ ಘೋರ ಕೃತ್ಯಕ್ಕೆ ನೀಡಿರುವ ಶಿಕ್ಷೆ ಸರಿಯಾಗಿಯೇ ಇದೆ. ಸಮಾಜವು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂಬ ಆಶಯ ಹೊಂದಿರುವುದನ್ನು ಈ ನ್ಯಾಯಾಲಯ ಪರಿಗಣಿಸುತ್ತದೆ ಎಂದು ಹೇಳಿದೆ.