ಮಹಿಳೆಯರಲ್ಲಿ ಆಸಕ್ತಿಯಿದೆ, 'ಡೇಟಿಂಗ್' ಮಾಡಲು ಸಿದ್ಧನಿದ್ದೇನೆ -- ಹೀಗೆಂದು ಸಾಮಾಜಿಕ ಸಂಪರ್ಕತಾಣ 'ಫೇಸ್‌ಬುಕ್'ನಲ್ಲಿ ಸಂಕ್ಷಿಪ್ತ ಪ್ರೊಫೈಲ್ ಹೊಂದಿರುವುದು ಗೋವಾದ ಶೈಕ್ಷಣಿಕ ಸಚಿವ ಅತಾನಸಿಯೋ ಮೋನ್ಸೆರೆಟ್.
ಆದರೆ ಇದು ಸಚಿವರ ನಿಜವಾದ ಖಾತೆಯಲ್ಲ. ಯಾರೋ ಕುಚೋದ್ಯಕ್ಕಾಗಿ ಸಚಿವರ ಹೆಸರಿಗೆ ಮಸಿ ಬಳಿಯುವ ಉದ್ದೇಶದಿಂದ ಸೃಷ್ಟಿಸಿರುವ ನಕಲಿ ಖಾತೆ ಎಂದು ತಿಳಿದು ಬಂದಿದ್ದು, ಇದರ ಹಿಂದಿನ ರೂವಾರಿಯನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
ಸಚಿವ ಮೋನ್ಸೆರೆಟ್ ಅವರ ನಕಲಿ ಖಾತೆಯನ್ನು ತೆರೆದು ಅವರ ಬಗ್ಗೆ ಕೆಟ್ಟ ಅಭಿಪ್ರಾಯ ಬರುವಂತೆ ಮಾಡಲಾಗಿದೆ. ಅವರಿಗೆ ಪರಿಚಯವಿರುವ ಹಲವರ ಸಂಪರ್ಕಕ್ಕೆ ಬಂದು ಅವರ ವಿರುದ್ಧ ಮಾನ ಹಾನಿಕರ ಮಾತುಗಳನ್ನೂ ಕಾಮೆಂಟ್ ಮಾಡಲಾಗಿದೆ. ಇದು ಕರ್ಟೊರಿಮ್ ಶಾಸಕ, ಮೋನ್ಸೆರೆಟ್ ಸ್ನೇಹಿತ ರೆಗಿನಾಲ್ಡೋ ಲೊರೆನ್ಸೋ ಅವರ ಗಮನಕ್ಕೆ ಬಂದ ನಂತರ ಬಹಿರಂಗವಾಗಿತ್ತು.
ನಾನು ಕಂಪ್ಯೂಟರ್ ವಿಚಾರದಲ್ಲಿ ಬಹುತೇಕ ಅನಕ್ಷರಸ್ಥ. ಇಂತಹ ಸೈಟುಗಳಲ್ಲಿ ವ್ಯವಹರಿಸುವುದು ನನಗೆ ತಿಳಿದಿಲ್ಲ. ನನ್ನ ಹೆಸರಿನಲ್ಲಿ ಬೇರೆ ಯಾರೋ ಖಾತೆಯನ್ನು ತೆರೆದು, ಇತರರ ಜತೆ ಮಾತುಕತೆ ನಡೆಸುತ್ತಿರಬಹುದು. ನನ್ನ ಶಾಸಕ ಸ್ನೇಹಿತರೊಬ್ಬರು ಇದನ್ನು ಗಮನಕ್ಕೆ ತಂದಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದರ ಜತೆ ಮಾತನಾಡಿರುವ ಸಚಿವರು ತಿಳಿಸಿದ್ದಾರೆ.
ನಿಂದನಾತ್ಮಕ ಉದ್ದೇಶ ಹೊಂದಿರುವ ನಕಲಿ ಖಾತೆದಾರನಿಗೆ ಹಾಸ್ಯಪ್ರಜ್ಞೆಯೂ ಅಪಾರವಾಗಿರುವಂತೆ ಖಾತೆಯನ್ನು ಗಮನಿಸಿದಾಗ ತಿಳಿಯುತ್ತದೆ. ಆತ ಸ್ಪಾನಿಷ್ ಗಾಯ ಜ್ಯೂಲಿಯೋ ಇಗ್ನೇಷಿಯಸ್ ಅವರ 'ಟು ಆಲ್ ದಿ ಗರ್ಲ್ಸ್ ಐ ಹ್ಯಾವ್ ಲವ್ಡ್ ಬಿಫೋರ್' ಎಂಬ ಹಾಡನ್ನು ಯೂಟ್ಯೂಬಿನಿಂದ ಶಿಕ್ಷಣ ಸಚಿವರ ನಕಲಿ ಖಾತೆಗೆ ಲಿಂಕಿಸಿ ಮಜಾ ತೆಗೆದುಕೊಂಡಿದ್ದಾನೆ.
ಈ ಪುಟಕ್ಕೆ ಭೇಟಿ ನೀಡಿದ್ದ ಜೋಸೆಫಿನ್ ಎಸ್. ಅರಾವಜೋ ಎಂಬ ಮಹಿಳೆ ವೀಡಿಯೋ ಕುರಿತು ಪ್ರತಿಕ್ರಿಯೆ ನೀಡುತ್ತಾ, ಇದು 'ಎಂಜೆಲ್‌ಬರ್ಟ್ಸ್' ಅವರ ಹಾಡು ಎಂದು ಹೇಳಿದ್ದಕ್ಕೆ ಮರಳಿ ಕಾಮೆಂಟ್ ಮಾಡಿದ್ದ ಖಾತೆದಾರ, 'ಡಾರ್ಲಿಂಗ್, ಇದು ಇಗ್ನೇಷಿಯಸ್ ಹಾಡಿರುವ ಹಾಡು' ಎಂದಿದ್ದ.
ಈ ಸಂಬಂಧ ಕಾಂಗ್ರೆಸ್ ನಾಯಕ ಈಗಾಗಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಫೇಸ್‌ಬುಕ್ ಪುಟದ ಫ್ರಿಂಟ್‌ಔಟ್ ಸಮೇತ ದೂರು ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.