ಅಮೆರಿಕಾದಲ್ಲಿ ಕುರಾನ್ ಅಪಮಾನ ಎಸಗಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಪಂಜಾಬ್‌ನ ಮಲೇರ್‌ಕೋಟ್ಲಾ ಎಂಬ ನಗರದಲ್ಲಿ ಕಿಡಿಗೇಡಿಗಳು ಚರ್ಚ್ ಒಂದಕ್ಕೆ ಬೆಂಕಿ ಹಚ್ಚಿದ್ದಾರೆ. ಘಟನೆ ನಂತರ ಅಲ್ಲಲ್ಲಿ ಹಿಂಸಾಚಾರಗಳು ಕಾಣಿಸಿಕೊಂಡ ಭಾನುವಾರ ರಾತ್ರಿಯಿಂದಲೇ ಇಲ್ಲಿ ನಿಷೇಧಾಜ್ಞೆ ಹೇರಲಾಗಿದೆ ಎಂದು ವರದಿಗಳು ಹೇಳಿವೆ.
ಅಮೆರಿಕಾದ ಮಿಚಿಗನ್ ರಾಜ್ಯದಲ್ಲಿ ಪವಿತ್ರ ಕುರಾನ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಪ್ರತಿಭಟಿಸಿ ಮೆರವಣಿಗೆ ನಡೆಸಿದ ಗುಂಪೊಂದು ಚರ್ಚ್‌ವೊಂದಕ್ಕೆ ದಾಳಿ ನಡೆಸಿ, ಅಲ್ಲಿನ ಪೀಠೋಪಕರಣಗಳಿಗೆ ಬೆಂಕಿ ಹಚ್ಚಿತು.
ಈ ಹೊತ್ತಿನಲ್ಲಿ ಬೆಂಕಿಯನ್ನು ನಂದಿಸಲು ಬಂದಿದ್ದ ಅಗ್ನಿಶಾಮಕ ದಳವನ್ನು ಕೂಡ ಆಕ್ರೋಶಿತ ಮುಸ್ಲಿಮರು ತಡೆದರು. ಅಸಹಾಯಕರಾದ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸಪಟ್ಟರು ಎಂದು ವರದಿಗಳು ಹೇಳಿವೆ.
ವಿಶ್ವ ವ್ಯಾಪಾರ ಕೇಂದ್ರಕ್ಕೆ ದಾಳಿ ನಡೆದು ಒಂಬತ್ತು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆ ದಿನ ಅಮೆರಿಕಾದ ಪಾದ್ರಿಯೊಬ್ಬರು ಪವಿತ್ರ ಕುರಾನ್‌ಗೆ ಬೆಂಕಿ ಹಚ್ಚಲು ನಿರ್ಧರಿಸಿದ್ದರು. ಆದರೆ ಜಗತ್ತಿನಾದ್ಯಂತದಿಂದ ಒತ್ತಡ ಹೆಚ್ಚಿದ್ದರಿಂದ ತನ್ನ ನಿರ್ಧಾರವನ್ನು ಪಾದ್ರಿ ಬದಲಾಯಿಸಿದ್ದರು. ಆದರೆ ಪಂಜಾಬ್‌ನಲ್ಲಿ ಈ ಕುರಿತು ವ್ಯತಿರಿಕ್ತ ವದಂತಿಗಳು ಹರಡಿದ್ದವು. ಅದೇ ಕಾರಣದಿಂದ ಹಿಂಸಾಚಾರ ಸಂಭವಿಸಿದೆ ಎಂದು ಹೇಳಲಾಗಿದೆ.
ಬರ್ನಾಲಾ ಜಿಲ್ಲೆಯಲ್ಲಿರುವ ಈ ಚರ್ಚಿನಲ್ಲಿನ ಮರದ ಹಲಗೆಗಳಿಗೆ ಬೆಂಕಿ ಹಚ್ಚಲಾಗಿದೆ. ಪೊಲೀಸರ ಬೈಕುಗಳೂ ಪ್ರತಿಭಟನಾಕಾರರ ಆಕ್ರೋಶಕ್ಕೆ ಬಲಿಯಾಗಿವೆ. ಘಟನೆ ಹಿನ್ನೆಲೆಯಲ್ಲಿ ನಗರದಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಭಾರೀ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ವರದಿಗಳು ಹೇಳಿವೆ.
ಅಮೆರಿಕಾದಲ್ಲಿ ಕುರಾನ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಯನ್ನೊಳಗೊಂಡ ಎಸ್ಎಂಎಸ್ ಪರಸ್ಪರ ರವಾನೆಯಾಗತೊಡಗಿದ ನಂತರ ಈ ರೀತಿಯ ಉದ್ವಿಗ್ನತೆ ಕಾಣಿಸಿಕೊಂಡಿದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ ಎಂದು ಇಲ್ಲಿನ ಪೊಲೀಸ್ ಮುಖ್ಯಸ್ಥ ಹರಚರಣ್ ಸಿಂಗ್ ಭುಲ್ಲಾರ್ ತಿಳಿಸಿದ್ದಾರೆ.