ಹಲವು ಪ್ರೀತಿಗಳನ್ನು ಕಂಡವರಿಗೆ ಇದೊಂಥರಾ ಹೊಸ ಬಾಲಿವುಡ್ ಚಿತ್ರವಿದ್ದ ಹಾಗೆ. ಇಬ್ಬರ ನಡುವೆ ಪ್ರೀತಿಯಿತ್ತು, ಮನೆಯವರು ಒಪ್ಪದೇ ಇದ್ದಾಗ ಹುಡುಗಿಗೆ ಬೇರೆ ಮದುವೆಯಾಗಿತ್ತು. ಆದರೆ ಪ್ರೀತಿ ಮತ್ತೆ ಪರಾರಿಯಾಗುವಂತೆ ಮಾಡಿದ ಬಳಿಕ ಪ್ರಿಯಕರ ಕೈಕೊಟ್ಟ. ಅದು ಅತ್ಯಾಚಾರ ಪ್ರಕರಣವಾಯಿತು. ಅಷ್ಟರಲ್ಲಿ ಗಂಡನೂ ಕಾಲ್ಕಿತ್ತಿದ್ದ. ಕೊನೆಗೆ ಈಗ ಪ್ರಿಯಕರನನ್ನೇ ಅತ್ತೂ ಕರೆದು ಮದುವೆಯಾಗುತ್ತಿದ್ದಾಳೆ.
ಇದು ನಡೆದಿರುವುದು ದೆಹಲಿಯ ಕಲಾಯಾ ಪ್ರದೇಶದಲ್ಲಿ. ಇಲ್ಲಿನ ಜುನೈದ್ ಖಾನ್ ಮತ್ತು ರೆಹಾನಾ ಎಂಬವರು ಪರಸ್ಪರ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಮದುವೆಯ ವಿಚಾರಕ್ಕೆ ಬಂದಾಗ ಜುನೈದ್‌ಗೆ ಮಗಳನ್ನು ಕೊಡಲು ಹುಡುಗಿಯ ಹೆತ್ತವರು ನಿರಾಕರಿಸಿ, ಇನ್ನೊಬ್ಬನ ಜತೆ ದಾಂಪತ್ಯಕ್ಕೆ ತಳ್ಳಿದ್ದರು.
ಆದರೂ ರೆಹಾನಾಳನ್ನು ಮರೆಯದ ಜುನೈದ್ ಆಕೆಯ ಗಂಡನ ಮನೆಗೆ ಹೋಗಿ ಕದ್ದು-ಮುಚ್ಚಿ ಮಾತನಾಡಿಸಿ ಬರುತ್ತಿದ್ದ. ಇದು ಮತ್ತೆ ಗಾಢವಾಗುತ್ತಿದ್ದಂತೆ ಪರಾರಿಯಾಗುವ ನಿರ್ಧಾರಕ್ಕೂ ಬಂದರು.
ಯೋಜನೆಯಂತೆ ಪರಾರಿಯಾದ ವಿವಾಹಿತ ಯುವತಿ ರೆಹಾನಾ ಮತ್ತು ಜುನೈದ್, ಕೆಲವು ಕಾಲ ಜತೆಗಿದ್ದರು. ತಿಂಗಳಾಗುತ್ತಿದ್ದಂತೆ ವರಸೆ ಬದಲಾಯಿಸಿದ್ದ ಜುನೈದ್, ಮದುವೆಯಾಗುವುದಿಲ್ಲ ಎಂದು ರೆಹಾನಾಳನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದ.
ಅತ್ತ ಹೆತ್ತವರು ನೋಡಿ ಮದುವೆ ಮಾಡಿಸಿದ ಗಂಡನನ್ನು ಪ್ರಿಯಕರನನ್ನು ನಂಬಿ ತೊರೆದು ಬಂದಿದ್ದ ರೆಹಾನಾಳಿಗೆ ದಿಕ್ಕೇ ತೋಚದಾಗ ಹೊಳೆದದ್ದು ಪೊಲೀಸ್ ಠಾಣೆ. ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ದೂರು ಕೊಟ್ಟಳು. ಅದರಂತೆ ಪೊಲೀಸರು ಜುನೈದ್‌ನನ್ನು ಬಂಧಿಸಿದರು.
ಈ ಹೊತ್ತಿಗೆ ಅತ್ತ ಮಾಜಿ ಪ್ರಿಯಕರನ ಜತೆ ಪರಾರಿಯಾಗಿರುವ ಕಾರಣವನ್ನು ಮುಂದೊಡ್ಡಿದ ರೆಹಾನಾಳ ಗಂಡ ವಿಚ್ಛೇದನವನ್ನೂ ನೀಡಿದ. ಅತ್ತ ದರಿ, ಇತ್ತ ಪುಲಿ ಎಂಬ ಸ್ಥಿತಿಗೆ ತಲುಪಿದ ಯುವತಿಯ ಸಹಾಯಕ್ಕೆ ಹೆತ್ತವರೂ ಬರಲಿಲ್ಲ.
ಕೊನೆಗುಳಿದ ದಾರಿಯೆಂದರೆ ಜುನೈದ್ ಜತೆ ರಾಜಿ ಸಂಧಾನ. ಈ ಮಾತುಕತೆಯ ಪ್ರಕಾರ ಜುನೈದ್ ಮದುವೆಗೆ ಒಪ್ಪಿದರೆ ಕೇಸ್ ವಾಪಸ್ ಪಡೆದುಕೊಳ್ಳಬಹುದು.
'ಮೊದಲು ಜುನೈದ್ ಅತ್ಯಾಚಾರ ಮಾಡಿದ್ದಾನೆ ಎಂದು ಹೇಳಿದ್ದ ಹುಡುಗಿ ರೆಹಾನಾ ಈಗ, ಜುನೈದ್ ಒಳ್ಳೆಯ ಹುಡುಗ, ಆತನ ವಿರುದ್ಧದ ಕೇಸ್ ವಾಪಸ್ ತೆಗೆದುಕೊಳ್ಳಿ' ಎಂದು ಹೇಳುತ್ತಿದ್ದಾಳೆ ಎಂದು ಘಟನೆಯ ಕುರಿತು ಪೊಲೀಸರು ವಿವರಣೆ ನೀಡಿದ್ದಾರೆ.