ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಉಚಿತ ಆಹಾರ ನೀಡಿ ಎಂದರೆ ಸರಕಾರ ಮೊಬೈಲ್ ನೀಡಿದೆ! (BPL | Rajasthan | cell phones | Sachin Pilot)
Bookmark and Share Feedback Print
 
ಸರಕಾರಿ ಗೋದಾಮುಗಳಲ್ಲಿ ಆಹಾರ ವಸ್ತುಗಳನ್ನು ಕೊಳೆಸುವ ಬದಲು ಬಡತನ ರೇಖೆಗಿಂತ ಕೆಳಗಿದ್ದವರಿಗೆ ಉಚಿತವಾಗಿ ಹಂಚಿ ಎಂದು ಸರ್ವೋಚ್ಚ ನ್ಯಾಯಾಲಯವು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರಕ್ಕೆ ಆದೇಶ ನೀಡಿದ್ದರೆ, ಕೇಂದ್ರ ಸಚಿವರೊಬ್ಬರು ಉಚಿತವಾಗಿ ಮೊಬೈಲ್ ಹಂಚಲು ಮುಂದಾಗಿದ್ದಾರೆ.

ಇದು ನಡೆದಿರುವುದು ರಾಜಸ್ತಾನದಲ್ಲಿ. ಅಗತ್ಯ ವಸ್ತುಗಳೆಂಬ ನಿಟ್ಟಿನಲ್ಲಿ ಆಹಾರಕ್ಕಿಂತ ಮೊಬೈಲ್ ಫೋನುಗಳೇ ಅನಿವಾರ್ಯ ಎಂಬ ಭಾವನೆ ಕೇಂದ್ರಕ್ಕೆ ಬಂದಿರಬೇಕು. ಅದೇ ನಿಟ್ಟಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ 1000 ಕುಟುಂಬಗಳಿಗೆ ಉಚಿತ ಮೊಬೈಲ್‌ಗಳನ್ನು ಹಂಚಲಾಗಿದೆ!

ಇದನ್ನೂ ಓದಿ: 'ಉಚಿತ' ಸಲಹೆಯಲ್ಲ, ಆದೇಶ; ಕೇಂದ್ರಕ್ಕೆ ಸುಪ್ರೀಂ ತರಾಟೆ

/newsworld/news/national/1008/31/1100831037_1.htm

ಕಾಂಗ್ರೆಸ್ ಮುಖಂಡ ಹಾಗೂ ಕೇಂದ್ರ ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆಯ ರಾಜ್ಯ ಸಚಿವ ಸಚಿನ್ ಪೈಲಟ್ ಅವರು ತನ್ನ ಕ್ಷೇತ್ರ ಅಜ್ಮೀರ್‌ನಲ್ಲಿ ಈ ರೀತಿಯಾಗಿ ಮೊಬೈಲ್ ಹಂಚಲಾಗಿದೆ ಎಂದು ವರದಿಗಳು ಹೇಳಿವೆ.

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಬಿಎಸ್ಎನ್ಎಲ್ ಸಂಪರ್ಕ ಹೊಂದಿರುವ ಮೊಬೈಲುಗಳನ್ನು ಉಚಿತವಾಗಿ ಹಂಚಲಾಗಿದೆ. ಈ ರೀತಿ ಮೊಬೈಲ್ ಪಡೆದುಕೊಂಡಿರುವ ಗಿರಾಸಿ ದೇವಿ ಎಂಬವರಿಗೆ ಬಯಸದೆ ಬಂದಿರುವ ಕೊಡುಗೆಯನ್ನು ಏನು ಮಾಡಬೇಕೆಂದೇ ತಿಳಿಯುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದರ ಬದಲು ನಮಗೆ ಆಹಾರ ವಸ್ತುಗಳೋ ಅಥವಾ ಕೆಲಸವನ್ನಾದರೂ ನೀಡಬಹುದಿತ್ತು. ಈ ಮೊಬೈಲ್ ಫೋನುಗಳನ್ನು ಹಿಡಿದುಕೊಂಡು ನಾವೇನು ಮಾಡಬೇಕಿದೆ ಎಂದು ದೇವಿ ಪ್ರಶ್ನಿಸಿದ್ದಾರೆ.

ಇದೇ ರೀತಿ ಹಲವು ಮಂದಿ ಸರಕಾರ ಮತ್ತು ಬಿಎಸ್ಎನ್ಎಲ್ ನಿರ್ಧಾರವನ್ನು ಟೀಕಿಸಿದ್ದಾರೆ. ಇದು ತಮಗೆ ಕೊಡುಗೆಯಾಗಿರುವುದಕ್ಕಿಂತ, ತಲೆನೋವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಮೊಬೈಲುಗಳೆಂದರೆ ನಮ್ಮ ಖರ್ಚುಗಳಿಗೆ ಮತ್ತಷ್ಟು ಸೇರ್ಪಡೆಯಾಗುವ ಪರಿಕರ. ಗೋದಾಮುಗಳಲ್ಲಿ ಆಹಾರ ವಸ್ತುಗಳು ಕೊಳೆತು ಹೋಗುತ್ತಿವೆ. ಅದನ್ಯಾಕೆ ಹಂಚುವ ಕೆಲಸಕ್ಕೆ ಸರಕಾರ ಮುಂದಾಗುತ್ತಿಲ್ಲ ಎಂದು ಬಿಪಿಎಲ್ ಕಾರ್ಡ್‌ದಾರ ಗೋವಿಂದ ಕೇಳುತ್ತಾರೆ.

ಇಂತಹ ಟೀಕೆಗಳು ಬರಬಹುದು ಎಂಬ ನಿರೀಕ್ಷೆಯೋ ಅಥವಾ ಇನ್ನಿತರ ಕಾರ್ಯಕ್ರಮಗಳ ಅಡ್ಡಿಯೋ, ಸಚಿವ ಸಚಿನ್ ಪೈಲಟ್ ಮೊಬೈಲ್ ಹಂಚುವ ಕಾರ್ಯಕ್ರಮದಿಂದ ಕೊನೆಯ ಕ್ಷಣದಲ್ಲಿ ತಪ್ಪಿಸಿಕೊಂಡಿದ್ದರು.

ಆದರೂ ಬಡವರಿಗೆ ಆಹಾರ ವಸ್ತುಗಳ ಬದಲು ಮೊಬೈಲ್ ಹಂಚುವ ನಿರ್ಧಾರವನ್ನು ಕಾಂಗ್ರೆಸ್ ಸಚಿವ ಪೈಲಟ್ ಸಮರ್ಥಿಸಿಕೊಂಡಿದ್ದಾರೆ.

ದೂರವಾಣಿ ಕ್ರಾಂತಿಯಲ್ಲಿ ತಾವೂ ಭಾಗಿಯಾಗಬೇಕೆಂದು ಬಡತನ ರೇಖೆಗಿಂತ ಕೆಳಗಿನವರಲ್ಲಿ ಭಾವನೆ ಮೂಡಿಸುವ ಯತ್ನ ನಡೆಸಲು ಆರಂಭಿಸಿರುವ ಬಿಎಸ್ಎನ್ಎಲ್ ಕಾರ್ಯ ಪ್ರಶಂಸನೀಯ ಎಂದು ಅವರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ