ಯುಪಿಎ ಸರಕಾರಕ್ಕೆ ರಾಷ್ಟ್ರೀಯ ಹಿತಾಸಕ್ತಿಯೇ ಇಲ್ಲ: ಆರೆಸ್ಸೆಸ್
ನವದೆಹಲಿ, ಮಂಗಳವಾರ, 14 ಸೆಪ್ಟೆಂಬರ್ 2010( 12:48 IST )
ಜಮ್ಮು-ಕಾಶ್ಮೀರದಲ್ಲಿ ನಿರಂತರ ಹಿಂಸಾಚಾರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ತನ್ನ ಮುಖ ಉಳಿಸಿಕೊಳ್ಳುವ ಸಲುವಾಗಿ ಪ್ರತ್ಯೇಕತಾವಾದಿಗಳನ್ನು ಪೋಷಿಸುತ್ತಿದೆ ಎಂದು ಆರೋಪಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಪರಿಸ್ಥಿತಿಯನ್ನು ನಿಭಾಯಿಸಲು ಕೇಂದ್ರವು ರಾಷ್ಟ್ರೀಯ ಹಿತಾಸಕ್ತಿಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದಿದೆ.
ಕಾಶ್ಮೀರದಲ್ಲಿನ ರಾಷ್ಟ್ರ ವಿರೋಧಿಗಳು ಮತ್ತು ಪ್ರತ್ಯೇಕತಾವಾದಿಗಳ ಎದುರು ಶರಣಾಗಲು ಮನಮೋಹನ್ ಸಿಂಗ್ ಸರಕಾರ ಯೋಜನೆ ರೂಪಿಸುತ್ತಿದೆ. ದುರದೃಷ್ಟಕರವೆಂದರೆ ಗೃಹಸಚಿವ ಪಿ. ಚಿದಂಬರಂ ಮತ್ತು ಪ್ರಧಾನ ಮಂತ್ರಿಯವರು ಪ್ರತ್ಯೇಕತಾವಾದಿಗಳನ್ನು ತೃಪ್ತಿಪಡಿಸುವ ಯತ್ನ ಮುಂದುವರಿಸಿದಂತೆ ಅತ್ತ ಕಾಶ್ಮೀರದಲ್ಲಿ ಹಿಂಸಾಚಾರದ ಕೆಚ್ಚು ಹೊತ್ತಿ ಉರಿಯುತ್ತಾ ಸರಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಸಂಘದ ಮುಖವಾಣಿ 'ಪಾಂಚಜನ್ಯ'ದಲ್ಲಿ ಸಂಪಾದಕೀಯ ಬರೆಯಲಾಗಿದೆ.
ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ರಾಷ್ಟ್ರೀಯ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಿಂತ ತನ್ನ ಸರಕಾರದ ಮುಖವನ್ನು ಉಳಿಸಿಕೊಳ್ಳುವುದೇ ಹೆಚ್ಚು ಆಸಕ್ತಿಯ ವಿಷಯವಾಗಿದೆ ಎಂದು ಆರೆಸ್ಸೆಸ್ ಇದೇ ಸಂದರ್ಭದಲ್ಲಿ ಜರೆದಿದೆ.
ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯಡಿ ಜಮ್ಮು-ಕಾಶ್ಮೀರದಿಂದ ಸೇನೆಯನ್ನು ಭಾಗಶಃ ವಾಪಸ್ ಪಡೆಯಬೇಕು ಎಂಬ ಸಲಹೆಗಳಿಗೂ ಸಂಪಾದಕೀಯದಲ್ಲಿ ಖಾರ ಪ್ರತಿಕ್ರಿಯೆ ನೀಡಲಾಗಿದೆ.
ಕಳೆದ 20 ವರ್ಷಗಳ ಅವಧಿಯಲ್ಲಿ ಪಾಕಿಸ್ತಾನ ಪ್ರಾಯೋಜಿತ ಜಿಹಾದಿ ಭಯೋತ್ಪಾದನೆಯನ್ನು ನಿಯಂತ್ರಿಸಲು ಸಹಾಯ ಮಾಡಿರುವ ಸೇನೆ ಮತ್ತು ಭದ್ರತಾ ಪಡೆಗಳ ಅಧಿಕಾರಗಳನ್ನು ಕಿತ್ತುಕೊಳ್ಳಲು ಸರಕಾರ ಈಗ ಯತ್ನಿಸುತ್ತಿದೆ. ರಕ್ಷಣಾ ಪಡೆಗಳ ಶಕ್ತಿಯನ್ನು ಕುಗ್ಗಿಸುವ ಮಾತು ಕೇಳಿ ಬರುತ್ತಿದ್ದಂತೆ, ಅತ್ತ ಈಶಾನ್ಯದಿಂದಲೂ ಮಿಲಿಟರಿಯನ್ನು ವಾಪಸ್ ಪಡೆದುಕೊಳ್ಳುವ ಬೇಡಿಕೆಗಳು ಬರುತ್ತಿವೆ ಎಂದು ಆರೆಸ್ಸೆಸ್ ಆತಂಕ ವ್ಯಕ್ತಪಡಿಸಿದೆ.
ಅದೇ ಹೊತ್ತಿಗೆ ಸರಕಾರಕ್ಕೆ ಸಂಘ ಪರಿವಾರವು ಗಂಭೀರ ಎಚ್ಚರಿಕೆಯನ್ನೂ ನೀಡಿದೆ. ಇದೇ ರೀತಿ ಪ್ರತ್ಯೇಕತಾವಾದಿಗಳ ಬೇಡಿಕೆಗಳಿಗೆಲ್ಲ ಸರಕಾರವು ಬಾಗುತ್ತಾ ಹೋದಲ್ಲಿ ಅವರು ಭಾರತದ ಎದುರು ತಲೆಬಾಗುವ ಬದಲು, ತಮ್ಮ ಅಸ್ತಿತ್ವವನ್ನು ಪ್ರತಿಪಾದಿಸಲು ಮುಂದಾಗಬಹುದು ಎಂದು ಆರೆಸ್ಸೆಸ್ ಅಭಿಪ್ರಾಯಪಟ್ಟಿದೆ.