ಬಿಹಾರ ವಿಧಾನಸಭಾ ಚುನಾವಣೆ ಆರಂಭಕ್ಕೆ ವಾರವಷ್ಟೇ ಬಾಕಿ ಉಳಿದಿದೆ ಎನ್ನುವ ಹೊತ್ತಿನಲ್ಲಿ ಆಡಳಿತ ಪಕ್ಷ ಸಂಯುಕ್ತ ಜನತಾದಳ ಮತ್ತು ಬಿಜೆಪಿ ನಡುವೆ ಭಿನ್ನಮತ ಉಂಟಾಗಿದೆ. ಕೇಸರಿ ಪಕ್ಷವು ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ರಾಜ್ಯದಲ್ಲಿ ಪ್ರಚಾರಕ್ಕೆ ಕರೆ ತರುವ ಬಗ್ಗೆ ಯೋಚನೆ ಮಾಡಿರುವುದೇ ಇದರ ಹಿಂದಿನ ಕಾರಣ.
ಅಲ್ಪಸಂಖ್ಯಾತರ ಮತಬ್ಯಾಂಕ್ ಸೂರೆ ಮಾಡುವ ಗುರಿಯನ್ನಿಟ್ಟುಕೊಂಡಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಪಕ್ಷಕ್ಕೆ ಮೋದಿ ಬಿಹಾರದಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದರೆ ತೊಂದರೆಯಾಗಬಹುದು ಎಂಬ ನಿಟ್ಟಿನಲ್ಲಿ ಇದೀಗ ಮೈತ್ರಿ ಮುಂದುವರಿಸುವ ಕುರಿತು ಮರು ಚಿಂತನೆ ನಡೆಸುತ್ತಿದೆ ಎಂದು ವರದಿಗಳು ಹೇಳಿವೆ.
ಮೋದಿಯವರು ಬಿಹಾರದಲ್ಲಿ ಚುನಾವಣಾ ಪ್ರಚಾರ ಮಾಡುವುದು ನಮಗೆ ಇಷ್ಟವಿಲ್ಲ ಎನ್ನುವುದು ಬಿಜೆಪಿ ಉನ್ನತ ನಾಯಕತ್ವಕ್ಕೆ ತಿಳಿದಿದೆ. ಈ ಹಿಂದೆಯೂ ಗುಜರಾತ್ ಮುಖ್ಯಮಂತ್ರಿಯವರ ಪ್ರಚಾರವಿಲ್ಲದೆ ಲೋಕಸಭೆಯಲ್ಲಿ ನಾವು ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದ್ದೇವೆ ಎಂದು ಮೈತ್ರಿ ಕುರಿತು ಮರುಪರಿಶೀಲನೆ ನಡೆಸುವ ಹಾದಿಯಲ್ಲಿರುವ ಜೆಡಿಯು ನಾಯಕ ಶಿವಾನಂದ್ ತಿವಾರಿ ಹೇಳಿದ್ದಾರೆ.
ಇದನ್ನು ಬಹಿರಂಗವಾಗಿಯೇ ಅವರು ಹೇಳಿಕೊಂಡಿದ್ದಾರೆ. ಹಾಗಾಗಿ ಆಡಳಿತ ಮೈತ್ರಿಕೂಟ ಒಡೆದು ಹೋಗುವ ಸಾಧ್ಯತೆಗಳೂ ಇವೆ ಎಂದು ಹೇಳಲಾಗುತ್ತಿದೆ.
ಗುಜರಾತ್ ಮುಖ್ಯಮಂತ್ರಿಯವರ ಬಗ್ಗೆ ಬಿಜೆಪಿಯು ತುಳಿಯುತ್ತಿರುವ ಹಾದಿಯ ಹಿನ್ನೆಲೆಯಲ್ಲಿ ನಾವು ನಮ್ಮ ಸ್ವಂತ ಬಲದಲ್ಲಿ ಚುನಾವಣೆಯನ್ನು ಎದುರಿಸುವುದು ಮತ್ತು ಬಿಜೆಪಿ ಜತೆಗಿನ ಮೈತ್ರಿಯನ್ನು ಮರು ಪರಿಶೀಲನೆ ನಡೆಸುವ ಬಗ್ಗೆ ನಾನು ನಮ್ಮ ನಾಯಕತ್ವಕ್ಕೆ ಮನವಿ ಮಾಡಲಿದ್ದೇನೆ ಎಂದು ತಿವಾರಿ ತಿಳಿಸಿದ್ದಾರೆ.
ಆದರೆ ಮೋದಿ ಪ್ರಚಾರ ಮಾಡುತ್ತಾರೆ ಎಂಬ ವರದಿಗಳನ್ನು ಜೆಡಿಯು ಮುಖ್ಯಸ್ಥ ಶರದ್ ಯಾದವ್ ತಳ್ಳಿ ಹಾಕಿದ್ದಾರೆ.
ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿಯವರು ನೀಡಿದ್ದ ಹೇಳಿಕೆಯೇ ಬಿಹಾರದಲ್ಲಿ ಇಷ್ಟೊಂದು ರಾಜಕೀಯ ಬೆಳವಣಿಗೆಗಳು ನಡೆಯಲು ಕಾರಣವಾಗಿದೆ.
ಮೋದಿ ನಮ್ಮ ಪ್ರಮುಖ ನಾಯಕರಲ್ಲೊಬ್ಬರು. ಖಂಡಿತಾ ಅವರು ಬಿಹಾರದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದರು.
ಆದರೆ ಇದು ವಿವಾದಕ್ಕೀಡಾಗಬಹುದು ಎಂಬುದನ್ನು ಪಕ್ಕನೆ ಅರ್ಥೈಸಿಕೊಂಡ ನಖ್ವಿ, ಯಾರು ಪ್ರಚಾರ ಮಾಡುತ್ತಾರೆ ಎಂಬುದನ್ನು ಈಗಲೇ ನಿರ್ಧರಿಸುವುದು ಸಾಧ್ಯವಿಲ್ಲ. ಈ ಕುರಿತು ಅಂತಿಮ ನಿರ್ಧಾರವನ್ನು ರಾಜ್ಯ ಮತ್ತು ರಾಷ್ಟ್ರ ನಾಯಕರ ಜತೆ ಚರ್ಚಿಸಿದ ನಂತರವಷ್ಟೇ ತೆಗೆದುಕೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು.