ನಾಲ್ಕು ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಮುಖ್ಯಮಂತ್ರಿ ಅರ್ಜುನ್ ಮುಂಡಾ ನೇತೃತ್ವದ ಬಿಜೆಪಿ-ಜೆಎಂಎಂ ಸರಕಾರವು ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತು ಪಡಿಸಿದೆ.
82 ಸದಸ್ಯರನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಮುಂಡಾ ಅವರು 15 ಮತಗಳ ಅಂತರದಿಂದ ವಿಶ್ವಾಸ ಮತ ಸಾಬೀತುಪಡಿಸಿದರು. 45 ಶಾಸಕರು ಬಿಜೆಪಿ ನೇತೃತ್ವದ ಮೈತ್ರಿ ಕೂಟದ ಪರ ಮತ ಚಲಾಯಿಸಿದರೆ, 30 ಸದಸ್ಯರು ವಿರೋಧವಾಗಿ ಮತ ಹಾಕಿದರು.
ಜೂನ್ 1ರಂದು ಜಾರಿಗೆ ಬಂದಿದ್ದ ರಾಷ್ಟ್ರಪತಿ ಆಳ್ವಿಕೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮತ್ತೆ ಜತೆಯಾಗಿದ್ದ ಬಿಜೆಪಿ ಮತ್ತು ಜೆಎಂಎಂಗಳು ಸೆಪ್ಟೆಂಬರ್ 11ರಂದು ಸರಕಾರ ರಚಿಸಿದ್ದವು. ಅದರಂತೆ ಇಂದು ನೂತನ ಸಚಿವಾಲಯದ ಪರ ಉಪ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ನಿಲುವಳಿ ಮಂಡಿಸಿದರು.
ಏಪ್ರಿಲ್ ತಿಂಗಳಲ್ಲಿ ಲೋಕಸಭೆಯಲ್ಲಿ ಬಿಜೆಪಿ ಮತ್ತು ಎಡಪಕ್ಷಗಳು ನಿಲುವಳಿ ಗೊತ್ತುವಳಿ ಮಂಡಿಸಿದಾಗ ಸರಕಾರದ ಪರ ಮತ ಚಲಾಯಿಸಿದ್ದ ಜಾರ್ಖಂಡ್ ಮುಕ್ತಿ ಮೋರ್ಚಾದ ಶಿಬೂ ಸೊರೆನ್ ಅವರಿಂದಾಗಿ ರಾಜ್ಯ ಸರಕಾರದಿಂದ ಬಿಜೆಪಿ ಬೆಂಬಲ ಹಿಂದಕ್ಕೆ ಪಡೆದುಕೊಂಡಿತ್ತು.
ಬಹುಮತ ಸಾಬೀತುಪಡಿಸಲು ವಿಫಲರಾಗಿದ್ದ ಸೊರೆನ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ನಂತರ ಮತ್ತೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂಬ ಮಾತುಕತೆ ನಡೆದಿತ್ತಾದರೂ, ರಾಜಕೀಯ ಪ್ರಕ್ಷುಬ್ಧತೆ ಮುಂದುವರಿದಿತ್ತು. ಬಳಿಕ ಕೇಂದ್ರವು ರಾಷ್ಟ್ರಪತಿ ಆಳ್ವಿಕೆ ಹೇರಿತ್ತು.
ವಾರದ ಹಿಂದಷ್ಟೇ ರಾಜ್ಯಪಾಲ ಎಂ.ಒ.ಎಚ್. ಫಾರೂಕ್ ಅವರನ್ನು ಭೇಟಿ ಮಾಡಿದ್ದ 42ರ ಹರೆಯದ ಮುಂಡಾ, ಸರಕಾರ ರಚಿಸುವ ಪ್ರಸ್ತಾಪ ಮಂಡಿಸಿದ್ದರು.