ಶಾಂತಿನಿಕೇತನ್, ಬುಧವಾರ, 15 ಸೆಪ್ಟೆಂಬರ್ 2010( 09:39 IST )
PTI
ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗಿರುವ 'ಯುವರಾಜ' ರಾಹುಲ್ ಗಾಂಧಿ ಇದೀಗ ತನಗೆ ಪ್ರಧಾನಿಯಾಗುವುದೊಂದೇ ಜೀವಮಾನದ ಗುರಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಆ ಮೂಲಕ ತನಗೆ ಹಲವು ಗುರಿಗಳಿದ್ದು ಅವುಗಳ ಪೈಕಿ ಪ್ರಧಾನ ಮಂತ್ರಿಯಾಗುವುದೂ ಒಂದು ಗುರಿ ಎಂದು ಪರೋಕ್ಷವಾಗಿ ರಾಹುಲ್ ಗಾಂಧಿ ಹೇಳಿದ್ದಾರೆ. ರವೀಂದ್ರನಾಥ ಠಾಗೋರ್ ಸಂಸ್ಥಾಪಿತ ವಿಶ್ವ ಭಾರತಿ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಭಾರೀ ಯುವ ಸಮೂಹವನ್ನು ಆಕರ್ಷಿಸಿದ ರಾಹುಲ್ ಗಾಂಧಿ ಯುವ ಜನರನ್ನು ಉದ್ದೇಶಿಸಿ ಮಾತನಾಡುತ್ತಾ ಈ ವಿಚಾರ ಸ್ಪಷ್ಟಪಡಿಸಿದರು.
ಪ್ರಧಾನಿಯಾದ ಮೇಲೆ ನೀವು ಶಿಕ್ಷಣ ವ್ಯವಸ್ಥೆಯಲ್ಲಿ ಹೇಗೆ ಸುಧಾರಣೆ ತರುತ್ತೀರಿ ಎಂದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ರಾಹುಲ್, ಪ್ರಧಾನಿಯಾಗುವುದೊಂದೇ ನನ್ನ ಭವಿಷ್ಯದ ಗುರಿಯಲ್ಲ. ಪ್ರಧಾನಿ ಹುದ್ದೆಯೊಂದರಿಂದ ಮಾತ್ರ ಇಂತಹ ಬದಲಾವಣೆ ಸಾಧ್ಯ ಎಂಬುದನ್ನು ನೀವು ಹೇಗೆ ಹೇಳುತ್ತೀರಿ? ಬದಲಾವಣೆ ನಿಮ್ಮಿಂದಲೂ ಸಾಧ್ಯ. ನಾವೆಲ್ಲರೂ ಒಂದಾದರೆ ಬದಲಾವಣೆ ತರಲು ಸಾಧ್ಯ ಎಂದರು.
ತಮ್ಮ ವಿಶ್ವವಿದ್ಯಾನಿಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ಉಪನ್ಯಾಸಕರ ನಿರುತ್ಸಾಹ ಮತ್ತಿತರ ವಿಚಾರಗಳನ್ನು ವಿದ್ಯಾರ್ಥಿಗಳು ಪದೇ ಪದೇ ರಾಹುಲ್ ಮುಂದೆ ತರಲು ಯತ್ನಿಸಿದರೂ, ರಾಹುಲ್ ಗಾಂಧಿ ಜಾಣತನದಿಂದ ಅವುಗಳಿಂದ ಜಾರಿಕೊಳ್ಳಲು ಯತ್ನಿಸಿದರು. ಆದರೆ ಮತ್ತದೇ ಪ್ರಶ್ನೆ ಎದುರಾದಾಗ ಉತ್ತರಿಸಿದ ರಾಹುಲ್, ನಿಮ್ಮಲ್ಲಿ ಸ್ವಲ್ಪ ವಿವೇಕವಿದೆ ಎಂಬುದು ನನಗೆ ಅರ್ಥವಾಗುತ್ತದೆ. ಆದರೆ, ಇಂಥವುಗಳನ್ನೆಲ್ಲ ನನ್ನ ಬಳಿ ಹೇಳಿದರೆ ಏನು ಪ್ರಯೋಜನ ಹೇಳಿ. ದೂರುವುದು ತುಂಬಾ ಸುಲಭ. ನೀವು ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ನಿಮಗೆ ಚಪ್ಪಾಳೆ ಬೀಳುತ್ತದೆ ನಿಜ. ಆದರೆ ಅದಕ್ಕೆ ಉತ್ತರ ಹುಡುಕಲು ಹೊರಟರೆ ಪರಿಹಾರ ಕಷ್ಟ. ನೀವಾಗಿಯೇ ಇಲ್ಲಿ ಒಗ್ಗಟ್ಟಾಗಿ ಕೆಲವು ಸುಧಾರಣೆ ತರಲು ಯಾಕೆ ಮುಂದಾಗುತ್ತಿಲ್ಲ ಎಂದು ವಿದ್ಯಾರ್ಥಿಗಳಿಗೇ ಮರು ಪ್ರಶ್ನೆ ಹಾಕಿದರು.