ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಮಮಂದಿರ ನಿರ್ಮಾಣವೇ ಸಮಸ್ಯೆಗೆ ಪರಿಹಾರ: ಆರೆಸ್ಸೆಸ್ (Ayodhya | RSS | Ram temple | Mohan Rao Bhagwat)
Bookmark and Share Feedback Print
 
ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಲು ಮುಸ್ಲಿಮರು ಅವಕಾಶ ನೀಡಿದರೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಕುರಿತ ಮಹತ್ವದ ತೀರ್ಪು ಹೊರಬೀಳಲು ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ ಎನ್ನುವಾಗ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಮೋಹನ್ ಭಾಗ್ವತ್ ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರದ ಪ್ರತೀಕವೇ ರಾಮನನ್ನು ಆಧರಿಸಿದೆ. ಸಮಾಜದಲ್ಲೂ ಈ ಕುರಿತು ಸಾಕಷ್ಟು ಗುಮಾನಿಗಳಿವೆ. ಅಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಿದರೆ ಸಮಸ್ಯೆಗಳು ಪರಿಹಾರ ಕಾಣಬಹುದು. ಮುಸ್ಲಿಮರು ರಾಮಮಂದಿರ ನಿರ್ಮಾಣವನ್ನು ಬೆಂಬಲಿಸಿದರೆ ಯಾರು ಕೂಡ ಏನೂ ಹೇಳಲಾರರು ಎಂದು ಭಾಗ್ವತ್ ತಿಳಿಸಿದರು.

ಈ ಕುರಿತು ನ್ಯಾಯಾಲಯ ತೀರ್ಪು ನೀಡಲಿದೆ. ನನ್ನ ಅಭಿಪ್ರಾಯವು ಪ್ರಶ್ನೆಯಲ್ಲ. ನಾವು ಶಾಂತಿಯನ್ನು ಬಯಸುತ್ತಿದ್ದೇವೆ. ಹಾಗಾಗಿ ಇಂತಹ ಸಲಹೆಯನ್ನು ನೀಡುತ್ತಿದ್ದೇನೆ ಎಂದು ಅವರು ತಿಳಿಸಿದರು.

ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಪ್ರತಿಯೊಬ್ಬ ಹಿಂದೂವಿನ ಬಯಕೆ. ನಮ್ಮ ಆಶಯವೂ ಅದೇ ಆಗಿದೆ. ಆದರೆ ನಾವು ನ್ಯಾಯಾಲಯದ ತೀರ್ಪಿಗಾಗಿ ಕಾಯುತ್ತೇವೆ. ಆ ತೀರ್ಪಿಗೆ ನಾವು ಕಾನೂನಿನ ಪರಿಧಿಯಲ್ಲಿ ಮತ್ತು ಪ್ರಜಾಪ್ರಭುತ್ವ ನೀತಿಗಳನ್ನು ಆಧರಿಸಿ ಪ್ರತಿಕ್ರಿಯೆ ನೀಡುತ್ತೇವೆ ಎಂದರು.

ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ಕುರಿತ ಮಹತ್ವದ ತೀರ್ಪನ್ನು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಸೆಪ್ಟೆಂಬರ್ 24ರಂದು ಅಪರಾಹ್ನ 3.30ಕ್ಕೆ ನೀಡಲಿದೆ. ಬಾಬ್ರಿ ಮಸೀದಿಯಿದ್ದ 2.77 ಎಕರೆ ವಿವಾದಿತ ಪ್ರದೇಶ ಯಾರಿಗೆ ಸೇರಿದೆ ಎಂಬ ಕುರಿತು ಲಕ್ನೋ ಪೀಠವು ತನ್ನ ತೀರ್ಪನ್ನು ಹೊರಗೆಡವಲಿದೆ.

ಈ ನಡುವೆ ಅಯೋಧ್ಯೆ ಕುರಿತ ತೀರ್ಪನ್ನು ಹೈಕೋರ್ಟ್ ಈಗ ನೀಡಬಾರದು, ಅದನ್ನು ಮುಂದಕ್ಕೆ ಹಾಕಬೇಕು ಎಂದು ಸೋಮವಾರ ನ್ಯಾಯಾಲಯದಲ್ಲಿ ಎರಡು ಅರ್ಜಿಗಳನ್ನು ದಾಖಲಿಸಲಾಗಿದೆ.

ಪ್ರಕರಣವನ್ನು ಸಂಧಾನದ ಮೂಲಕ ಮುಕ್ತಾಯಗೊಳಿಸಬೇಕು ಎಂದು ಒಂದು ಅರ್ಜಿ ಬಯಸಿದ್ದರೆ, ಬಹು ಧರ್ಮೀಯರನ್ನೊಳಗೊಂಡ ಲಕ್ನೋದ ಆರು ಸದಸ್ಯರ ತಂಡವೊಂದು ತೀರ್ಪನ್ನು ಮುಂದಕ್ಕೆ ಹಾಕಬೇಕು ಎಂದು ಮನವಿ ಮಾಡಿದೆ.

ನ್ಯಾಯಾಲಯವು ಯಾವುದೇ ತೀರ್ಪನ್ನು ನೀಡಿದರೂ ಹಿಂಸಾಚಾರಗಳು ನಡೆಯಬಹುದಾದ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ, ದೇಶಕ್ಕೆ ಕೆಟ್ಟ ಹೆಸರು ಬರುವುದನ್ನು ತಪ್ಪಿಸಲು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ ತೀರ್ಪನ್ನು ಮುಂದಕ್ಕೆ ಹಾಕಬೇಕು ಎಂದು ಒತ್ತಾಯಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ