ಕ್ರಿಶ್ಚಿಯನ್ನರಿಗೆ ಸಂಬಂಧಪಟ್ಟ ಆಸ್ತಿಗಳು ಮತ್ತು ವಿದ್ಯಾಸಂಸ್ಥೆಗಳ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ಪ್ರಮುಖ ಮುಸ್ಲಿಂ ನಾಯಕರು, ತಮ್ಮ ಧರ್ಮೀಯರು ಸಂಯಮ ಪ್ರದರ್ಶಿಸಬೇಕು ಮತ್ತು ಶಾಂತಿಯುತ ಪ್ರತಿಭಟನೆಯನ್ನಷ್ಟೇ ನಡೆಸಬೇಕು ಎಂದು ಕರೆ ನೀಡಿದ್ದಾರೆ.
ಅಮೆರಿಕಾದಲ್ಲಿ ಕುರಾನ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಜಮ್ಮು-ಕಾಶ್ಮೀರಗಳಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಪ್ರತಿಕ್ರಿಯಿಸಿರುವ ಎಂಐಎಂ ನಾಯಕ ಮತ್ತು ಸಂಸದ ಅಸಾದುದ್ದೀನ್ ಒವಾಯ್ಸಿ, ದಾಳಿಗಳನ್ನು ಖಂಡಿಸಿದ್ದಾರೆ.
ಜಗತ್ತಿನ ಯಾವುದೇ ಮೂಲೆಯಲ್ಲಿ ಯಾವುದೇ ಧರ್ಮದ ಆಸ್ತಿಗೆ ಅಥವಾ ಧಾರ್ಮಿಕ ಸ್ಥಳಗಳಿಗೆ ಅಥವಾ ಪವಿತ್ರ ಗ್ರಂಥಗಳಿಗೆ ಅಪಮಾನ ಅಥವಾ ದಾಳಿಗಳನ್ನು ನಡೆಸುವುದನ್ನು ನಾವು ಧರ್ಮಾತೀತವಾಗಿ ಖಂಡಿಸುತ್ತೇವೆ ಎಂದು ಅಖಿಲ ಭಾರತ ಮುಸ್ಲಿಂ ಮಜ್ಲಿಸ್ ಇ ಮುಶಾವರ್ತ್ ಅಧ್ಯಕ್ಷ ಸಯ್ಯದ್ ಸಬಾಬುದ್ದೀನ್ ಹೇಳಿದ್ದಾರೆ.
ಇಂತಹ ಯಾವುದೇ ಕೃತ್ಯಗಳು ಮತ್ತು ವರ್ತನೆಗಳನ್ನು ಇಸ್ಲಾಂನಲ್ಲಿ ಅವಕಾಶವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಾಶ್ಮೀರದ ಕೆಲವೆಡೆ ಮತ್ತು ಪಂಜಾಬ್‌ನ ಮಲೇರ್ ಕೋಟ್ಲಾದಲ್ಲಿ ಕ್ರೈಸ್ತ ಧರ್ಮೀಯರ ಪ್ರಾರ್ಥನಾ ಸ್ಥಳಗಳು, ಅವರ ಆಸ್ತಿಗಳು ಮತ್ತು ವಿದ್ಯಾಸಂಸ್ಥೆಗಳ ಮೇಲೆ ನಡೆಸಿರುವ ದಾಳಿಗಳನ್ನು ಸೇರಿದಂತೆ ಯಾವುದೇ ರೀತಿಯ ಪ್ರಚೋದನೆಯನ್ನು ನಾವು ಸಹಿಸುವುದಿಲ್ಲ ಎಂದಿರುವ ಮುಸ್ಲಿಂ ನಾಯಕರು, ಇಂತಹ ಕೃತ್ಯಗಳಲ್ಲಿ ಪಾಲ್ಗೊಂಡಿರುವವರನ್ನು ಕಾನೂನಿನ ಕಟಕಟೆಗೆ ತಂದು ಶಿಕ್ಷಿಸುವಂತೆ ಒತ್ತಾಯಿಸಿದರು.
ಇಂತಹ ದಾಳಿಗಳನ್ನು ನಡೆಸುವ ಬದಲು ಪರಿಸ್ಥಿತಿಯನ್ನು ತಹಬದಿಗೆ ತರುವ ಸಲುವಾಗಿ ಸಂಯಮ ಪ್ರದರ್ಶಿಸಬೇಕು, ತಮ್ಮ ಅಸಮಾಧಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಮತ್ತು ಶಾಂತಿಯುತ ಪ್ರತಿಭಟನೆಗಳನ್ನು ನಡೆಸಬೇಕು ಎಂದು ಭಾರತದಲ್ಲಿನ ಎಲ್ಲಾ ಮುಸ್ಲಿಂ ಬಾಂಧವರಲ್ಲಿ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಅವರು ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಮನವಿಗೆ ಜಮಾತ್ ಇ ಇಸ್ಲಾಮಿ ಹಿಂದ್ ಪ್ರಧಾನ ಕಾರ್ಯದರ್ಶಿ ನಸ್ರತ್ ಆಲಿ ಮತ್ತು ಇಂಟರ್ಫೈತ್ ಕೊಯೆಲೀಷನ್ ಎಂಡ್ ಝಕಾತ್ ಫೌಂಡೇಶನ್ ಆಫ್ ಇಂಡಿಯಾದ ಅಧ್ಯಕ್ಷ ಜಾಫರ್ ಮೆಹಮೂದ್ ಸಹಿ ಹಾಕಿದ್ದಾರೆ.
ಕುರಾನ್‌ಗೆ ಬೆಂಕಿ ಹಚ್ಚಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಪಂಜಾಬ್‌ನಲ್ಲಿ ಚರ್ಚ್ ಒಂದಕ್ಕೆ ಬೆಂಕಿ ಹಚ್ಚಲಾಗಿತ್ತು. ಅತ್ತ ಕಾಶ್ಮೀರದಲ್ಲಿ ಕೂಡ ಕ್ರೈಸ್ತರಿಗೆ ಸೇರಿದ ಸಂಸ್ಥೆಗಳ ಮೇಲೆ ದಾಳಿ ನಡೆಸಲಾಗಿತ್ತು. ಒಟ್ಟಾರೆ ಇದಕ್ಕೆ ಸಂಬಂಧಪಟ್ಟಂತೆ ಇದುವರೆಗೆ 18 ಮಂದಿ ಬಲಿಯಾಗಿದ್ದಾರೆ.