ಪ್ರವಾದಿ ಮೊಹಮ್ಮದ್ ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಆರೋಪದ ಮೇಲೆ ಮೂಲಭೂತವಾದಿ ಮತಾಂಧರಿಂದ ಕೈ ಕಳೆದುಕೊಂಡು ನಂತರ ಉಪನ್ಯಾಸಕ ಹುದ್ದೆಯಿಂದಲೂ ಕಿತ್ತೆಸೆಯಲ್ಪಟ್ಟಿದ್ದ ಟಿ.ಜೆ. ಜೋಸೆಫ್ ಅವರಿಗಿದ್ದ ಏಕೈಕ ಆಸರೆ ಚರ್ಚು ಕೂಡ ಕೈಕೊಡುವ ಮೂಲಕ ದಾಷ್ಟ್ಯತೆ ಮೆರೆದಿದೆ.
ತನ್ನ ಜಾತ್ಯತೀತ ಬದ್ಧತೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೋಸೆಫ್ ಅವರು ಮಾಡಿಕೊಂಡಿರುವ ಮನವಿಯನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಕೇರಳ ಸೈರೋ ಮಲಬಾರ್ ಚರ್ಚ್ ಹೇಳಿದೆ.
PR
ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಪ್ರಶ್ನೆಪತ್ರಿಕೆಯನ್ನು ತಯಾರಿಸಿದ ಪ್ರೊಫೆಸರ್ ಜೋಸೆಫ್ ಅವರದ್ದು ಬೇಜವಾಬ್ದಾರಿಯುತ ನಡೆ ಎಂದು ಬಣ್ಣಿಸಿರುವ ಚರ್ಚ್ ಪತ್ರವನ್ನು ಎರ್ನಾಕುಲಂ ಜಿಲ್ಲೆಯ ಕೋತಮಂಗಲಂ ಬಿಷಪ್ ವ್ಯಾಪ್ತಿಯ 120 ಚರ್ಚುಗಳಲ್ಲಿ ಕಳೆದ ಭಾನುವಾರ ಓದಿ ಹೇಳಲಾಗಿದೆ.
ಮುಸ್ಲಿಂ ಮೂಲಭೂತವಾದಿ ಸಂಘಟನೆ 'ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ'ದ ಕಾರ್ಯಕರ್ತರು ಜೋಸೆಫ್ ಅವರ ಕೈಕತ್ತರಿಸಿರುವ ಕ್ರಮವನ್ನೂ ಚರ್ಚುಗಳು ಖಂಡಿಸಿಲ್ಲ. ಬದಲಿಗೆ, ಉಪನ್ಯಾಸಕ ಮಾಡಿರುವ ಅಪರಾಧವನ್ನು ಯಾರೊಬ್ಬರು ಮಾಡಿದ ದಾಳಿಯಿಂದ ಸರಿಪಡಿಸಲಾಗದು; ಓರ್ವ ಉಪನ್ಯಾಸಕನಿಂದ ಇಂತಹ ಬೇಜವಾಬ್ದಾರಿಯುತ ನಡೆ ಬಂದಿರುವುದು ಅನಿರೀಕ್ಷಿತ ಎಂದಿದೆ.
ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿ ಮೊಹಮ್ಮದ್ ಎಂದು ನಮೂದಿಸದೆ ಕೇವಲ ಮೊಹಮ್ಮದ್ ಎಂಬ ಪಾತ್ರವನ್ನು ಸೃಷ್ಟಿಸಿ ಸಂಭಾಷಣೆ ನಡೆಸುವ ಚಿತ್ರಣ ಮಾಡಿದ್ದ ಜೋಸೆಫ್, ಇಸ್ಲಾಂಗೆ ಅಪಮಾನ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಇದೇ ಹಿನ್ನೆಲೆಯಲ್ಲಿ ಅವರ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಬಿಡುಗಡೆಯಾದ ನಂತರ ಪಿಎಫ್ಐ ಕಾರ್ಯಕರ್ತರು ಉಪನ್ಯಾಸಕನ ಬಲಗೈಯನ್ನು ಕತ್ತರಿಸಿ ಹಾಕಿದ್ದರು. ಇದಾಗ ಕೆಲವೇ ತಿಂಗಳುಗಳಲ್ಲಿ ಜೋಸೆಫ್ ಕೆಲಸ ಮಾಡುತ್ತಿದ್ದ ಕಾಲೇಜು ಕೂಡ ಅವರನ್ನು ವಜಾಗೊಳಿಸಿ ಅನ್ಯಾಯವೆಸಗಿತ್ತು.
ನ್ಯೂಮನ್ ಕಾಲೇಜು ಜೋಸೆಫ್ ಅವರನ್ನು ವಜಾಗೊಳಿಸಿರುವ ಕ್ರಮವನ್ನೂ ಚರ್ಚುಗಳು ಬೆಂಬಲಿಸಿವೆ. ಉಪನ್ಯಾಸಕರು ಮಾಡಿರುವ ಮನವಿಗಳನ್ನು ಪರಿಗಣಿಸದೇ ಇರುವ ಕಾಲೇಜಿನ ನಿರ್ಧಾರವನ್ನೂ ಸಮರ್ಥಿಸಿಕೊಳ್ಳಲಾಗಿದೆ.