ಕೊಲ್ಕತ್ತಾ, ಬುಧವಾರ, 15 ಸೆಪ್ಟೆಂಬರ್ 2010( 13:50 IST )
ನಕ್ಸಲರಿಗೆ ಮಾಧ್ಯಮದ ಒಂದು ದೊಡ್ಡ ಭಾಗವು ಬೆಂಬಲ ನೀಡುತ್ತಿದೆ ಎಂದು ಆರೋಪಿಸಿರುವ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ, ಬಂಡುಕೋರರ ಸಿದ್ಧಾಂತಗಳ ಕುರಿತು ಅರಿವಿಲ್ಲದೆ ಕೆಲವು ಪತ್ರಕರ್ತರು ಅನುಕಂಪ ಮೆರೆಯುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಮಾವೋವಾದಿಗಳಿಗೆ ಮಾಧ್ಯಮದ ಒಂದು ಭಾಗದ ದೊಡ್ಡ ಸಮೂಹ ಬೆಂಬಲ ನೀಡುತ್ತಾ ಬಂದಿದೆ. ನಕ್ಸಲ್ ಸಿದ್ದಾಂತಗಳ ಕುರಿತು ನಿರ್ದಿಷ್ಟ ಯೋಚನೆಯಿಲ್ಲದೆ ಅವರತ್ತ ಕೆಲವು ಪತ್ರಕರ್ತರು ಅನುಕಂಪ ತೋರಿಸುತ್ತಿರಬಹುದು ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷದ (ಸಿಪಿಐ-ಎಂ) ರಾಜ್ಯ ಘಟಕದ ನೂತನ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಎಡಪಕ್ಷಗಳ ನೆಲೆಗಟ್ಟಿನ ಮೇಲೆ ದಾಳಿ ನಡೆಸಲು ದೊಡ್ಡ ಮಾಧ್ಯಮಗಳ ಮಾಲಕರು ಬಂಡುಕೋರರನ್ನು ಬಳಸುವ ಕುರಿತು ಆಸಕ್ತರಾಗಿದ್ದಾರೆ ಎಂದೂ ಭಟ್ಟಾಚಾರ್ಯ ಆರೋಪಿಸಿದ್ದಾರೆ.
ದೇಶದಲ್ಲಿನ ಎಡಪಕ್ಷಗಳ ವಿರುದ್ಧದ ಕಾರ್ಯಾಚರಣೆಗಾಗಿ ಬಲಪಂಥೀಯ ರಾಜಕೀಯ ಕ್ಷೇತ್ರವನ್ನು ಬಂಡುಕೋರರು ಬೆಂಬಲಿಸುತ್ತಾರೆ ಎಂಬ ವಿಚಾರ ಮಾಧ್ಯಮದ ಕೆಲ ಗುಂಪುಗಳ ಮಾಲಕರಿಗೆ ಚೆನ್ನಾಗಿ ತಿಳಿದಿದೆ. ಅದನ್ನೇ ಅವರು ದುರುಪಯೋಗಪಡಿಸಿಕೊಳ್ಳಲು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ನೇರ ಚಿಂತನೆಯುಳ್ಳ ಎಲ್ಲಾ ನಾಗರಿಕರಿಗೂ ಮಾವೋವಾದಿಗಳು ಬೆದರಿಕೆ ಎಂದಿರುವ ಅವರು, ಭಾರತ ಮತ್ತು ಅದರ ಸಂವಿಧಾನ, ಇಲ್ಲಿನ ಪ್ರಜಾಪ್ರಭುತ್ವ ವಿಧಾನವನ್ನು ನಾಶ ಮಾಡುವುದೇ ನಕ್ಸಲರ ಉದ್ದೇಶ ಎಂದರು.
ಬಡ ಜನರು, ಅದರಲ್ಲೂ ಬುಡಕಟ್ಟು ಜನರ ಕಾರಣಗಳಿಂದಾಗಿ ಮಾವೋವಾದಿಗಳು ದುರ್ಗಮ ಭೂ ಪ್ರದೇಶಗಳಲ್ಲಿ ತಮ್ಮ ಕಾರ್ಯಾಚರಣೆಗಳನ್ನು ನಡೆಸುತ್ತಾರೆ. ಇಲ್ಲಿ ತಮ್ಮ ಭಯೋತ್ಪಾದನೆಯ ರಾಜಕೀಯವನ್ನು ಜಾರಿಗೆ ತರಲು ಸೂಕ್ತವಾದ ಪ್ರದೇಶ ಮತ್ತು ವಾತಾವರಣವಿರುವುದರಿಂದ ಅದನ್ನು ಅವರು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾವೋವಾದಿಗಳಿಗೆ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿರುವುದು ಕೂಡ ಒಂದು ಕಾರಣ ಎಂಬುದನ್ನು ಇದೇ ಸಂದರ್ಭದಲ್ಲಿ ಭಟ್ಟಾಚಾರ್ಯ ಒಪ್ಪಿಕೊಂಡಿದ್ದಾರೆ. ಆದರೆ ಅಭಿವೃದ್ಧಿಯಾಗದಿರುವುದೇ ಪ್ರಮುಖ ಸಮಸ್ಯೆಯಲ್ಲ ಎಂದೂ ಹೇಳಿದ್ದಾರೆ.