ಜಮ್ಮು-ಕಾಶ್ಮೀರದಲ್ಲಿನ ಶಾಂತಿ ಮತ್ತು ಸಮೃದ್ಧಿಗಾಗಿ ನಮ್ಮ ಮುಂದಿರುವ ಏಕೈಕ ಹಾದಿ ಮಾತುಕತೆ ಮತ್ತು ಸಮಾಲೋಚನೆ ಎಂದಿರುವ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಯಾವುದೇ ವ್ಯಕ್ತಿ ಅಥವಾ ಸಂಘಟನೆಗಳ ಜತೆ ಮಾತುಕತೆಗೆ ಸರಕಾರ ಸಿದ್ಧವಿದೆ ಎಂದು ಸರ್ವಪಕ್ಷಗಳ ಸಭೆಯಲ್ಲಿ ಹೇಳಿದ್ದಾರೆ.
ಹಿಂಸಾಚಾರವನ್ನು ಸಮರ್ಥಿಸಿಕೊಳ್ಳದ ಅಥವಾ ಅದರಲ್ಲಿ ತೊಡಗಿಸಿಕೊಳ್ಳದ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಜತೆ ಮಾತುಕತೆ ನಡೆಸಲು ನಾವು ಸಿದ್ಧ ಎಂದು ಪ್ರಧಾನಿಯವರು ತಿಳಿಸಿದರು.
ಕಣಿವೆ ರಾಜ್ಯದಲ್ಲಿ ಅಶಾಂತಿಯುತ ಪರಿಸ್ಥಿತಿ ಮುಂದುವರಿಯುತ್ತಿರುವ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಅವರ ವಿವಿಧ ರಾಜಕೀಯ ಪಕ್ಷಗಳ ನಾಯಕರುಗಳ ಜತೆ ಸಮಾಲೋಚನೆ ನಡೆಸಲು ಸಭೆ ಕರೆದಿದ್ದು, ಈ ಸಂದರ್ಭದಲ್ಲಿ ಪರಿಸ್ಥಿತಿ ನಿಯಂತ್ರಿಸುವ ಕಾರ್ಯತಂತ್ರದ ಕುರಿತು ಚರ್ಚೆ ನಡೆಸಲಾಯಿತು. ಆದರೆ ಸೇನೆಯನ್ನು ಹಿಂದಕ್ಕೆ ಪಡೆಯುವ ಪ್ರಸ್ತಾಪದ ಕುರಿತು ಸಾಮರಸ್ಯ ಕಂಡು ಬಂದಿಲ್ಲ.
ಕಳೆದ ಮೂರು ತಿಂಗಳುಗಳಿಂದ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸುವ ಕುರಿತು ಈ ಹಿಂದೆ ಕರೆದಿದ್ದ ಸಭೆಗಳಿಗೆ ಗೈರು ಹಾಜರಾಗುತ್ತಿದ್ದ ರಾಜ್ಯದ ಪ್ರಮುಖ ಪ್ರತಿಪಕ್ಷವಾಗಿರುವ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿಯವರ ನೇತೃತ್ವ ನಿಯೋಗವೂ ಇಂದು ಸರ್ವಪಕ್ಷದ ಪ್ರಮುಖ ಸಭೆಗೆ ಹಾಜರಾಗಿತ್ತು.
ರೇಸ್ ಕೋರ್ಸ್ ರಸ್ತೆಯಲ್ಲಿನ ಪ್ರಧಾನ ಮಂತ್ರಿಯವರ ನಿವಾಸದಲ್ಲಿ ಈ ಪ್ರಮುಖ ಸಭೆ ನಡೆಸುತ್ತಿರುವುದರ ಪ್ರಮುಖ ಉದ್ದೇಶ ಯಾವ ಪ್ರಮಾಣದಲ್ಲಿ ಒಮ್ಮತವನ್ನು ಕಂಡುಕೊಳ್ಳಲು ಸಾಧ್ಯವಿದೆ ಮತ್ತು ವಿವಿಧ ವರ್ಗಗಳ ಜನರ ಜತೆ ಮಾತುಕತೆ ಹೇಗೆ ಪುನರಾರಂಭಿಸಬಹುದು ಎಂಬುದಾಗಿದೆ ಎಂದು ಪ್ರಧಾನ ಮಂತ್ರಿಯವರ ಕಚೇರಿ ಮೂಲಗಳು ಹೇಳಿವೆ.
ಕಾಂಗ್ರೆಸ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕೇಂದ್ರ ಸಚಿವ ಗುಲಾಂ ನಬೀ ಆಜಾದ್, ಬಿಜೆಪಿ ನಾಯಕರಾದ ಎಲ್.ಕೆ. ಅಡ್ವಾಣಿ, ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ, ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಸಿಪಿಐ ಡಿ. ರಾಜಾ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್, ಆರ್‌ಜೆಡಿಯ ಲಾಲೂ ಪ್ರಸಾದ್ ಯಾದವ್ ಮತ್ತು ಜೆಡಿಯುವಿನ ಶರದ್ ಯಾದವ್ ಮುಂತಾದವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.