ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಸೋದರ ಸಂಬಂಧಿಯ ಜತೆ ಮಾಡಿಕೊಂಡಿರುವ ಮದುವೆ ಊರ್ಜಿತವಲ್ಲ ಎಂದಿರುವ ಬಾಂಬೆ ಹೈಕೋರ್ಟ್, ಹರ್ಮಾನ್‌ದೀಪ್ ಕೌರ್ ಎಂಬಾಕೆಯನ್ನು ತನ್ನ ಪತ್ನಿಯೆಂದು ಹೇಳಿಕೊಂಡಿದ್ದ ಇಂದ್ರಪಾಲ್ ವಾಲಿಯಾ ಮನವಿಯನ್ನು ತಿರಸ್ಕರಿಸಿದೆ.
ಈ ಸಂಬಂಧವನ್ನು ಪರಿಗಣಿಸಲು ಮುಂದಾದಲ್ಲಿ ಇಂತಹ ಸಂಬಂಧಗಳಿಗೆ ಅನುಮತಿಯ ಮುದ್ರೆಯನ್ನೊತ್ತಿದಂತಾಗುತ್ತದೆ. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶಗಳಿಲ್ಲ ಎಂದು ವಿಭಾಗೀಯ ಪೀಠದ ನ್ಯಾಯಮೂರ್ತಿ ಎ.ಎಂ. ಖಾನವಿಲ್ಕರ್ ಮತ್ತು ಯು.ಡಿ. ಸಾಲ್ವಿ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.
37ರ ಹರೆಯದ ಇಂದ್ರಪಾಲ್ ವಾಲಿಯಾ 2008ರ ಮಾರ್ಚ್ ತಿಂಗಳಲ್ಲಿ ಅಮೃತಸರದಲ್ಲಿ ತನ್ನ ಚಿಕ್ಕಪ್ಪ/ದೊಡ್ಡಪ್ಪನ ಮಗಳು (ಸಹೋದರಿ, ತಂಗಿ) 19ರ ಹರೆಯದ ಹರ್ಮಾನ್‌ದೀಪ್ ಕೌರ್ ಎಂಬಾಕೆಯನ್ನು ಭೇಟಿ ಮಾಡಿದ್ದ. ನಂತರ ಅವರಿಬ್ಬರ ನಡುವಿನ ಪ್ರೇಮದಿಂದಾಗಿ ಒಂಬತ್ತು ತಿಂಗಳ ಕಾಲ ಗಂಡ-ಹೆಂಡತಿಯಂತೆ ಸಹಜೀವನ ನಡೆಸಿದ್ದರು.
ಇದಾದ ಬಳಿಕ ವಾಲಿಯಾ ಮತ್ತು ಕೌರ್ 2009ರ ಜನವರಿ 21ರಂದು ಮುಂಬೈಯಲ್ಲಿ ಮದುವೆಯಾಗಿದ್ದರು. ಆರಂಭದಲ್ಲಿ ಮದುವೆಗೆ ಒಪ್ಪಿದ್ದ ಕೌರ್ ಮನೆಯವರು ನಂತರ ಆಕೆಯನ್ನು ನಿಷೇಧಿತ ಸಂಬಂಧದ ಹೆಸರಿನಲ್ಲಿ ಬಲವಂತವಾಗಿ ಸೆಪ್ಟೆಂಬರ್ ತಿಂಗಳಲ್ಲಿ ಬೇರ್ಪಡಿಸಿದ್ದರು.
ದಾರಿ ತೋಚದೆ ಕಂಗಾಲಾಗಿದ್ದ ವಾಲಿಯಾ ಕೋರ್ಟ್ ಮೊರೆ ಹೋಗಿ, ತನ್ನ ಪತ್ನಿ ಕೌರ್‌ಳ ಜತೆ ಬಾಳ್ವೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದ.
ಆಧುನಿಕ ಜಗತ್ತಿನಲ್ಲಾಗುತ್ತಿರುವ ಬದಲಾವಣೆಗಳು, ಗೆಳೆತನ ಮತ್ತು ಕೌರ್ ಜತೆಗೆ ತನ್ನ ಸಂಬಂಧದ ಅಗತ್ಯಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ ಈ ರೀತಿ ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಮೂರ್ಖತನ ಎಂದು ವಾಲಿಯಾ ವಾದಿಸಿದ್ದ.
ಮದುವೆ ನೋಂದಣಿಯಾಗುವವರೆಗೆ ತಾನು ಸೋದರ ಸಂಬಂಧಿಯನ್ನು ಮದುವೆಯಾಗುತ್ತಿದ್ದೇನೆ ಎಂಬ ವಿಚಾರ ವಾಲಿಯಾನಿಗೆ ತಿಳಿದಿರಲಿಲ್ಲ ಎಂದು ಆತನ ವಕೀಲ ಭಾವೇಶ್ ಪರ್ಮಾರ್ ನ್ಯಾಯಾಲಯಕ್ಕೆ ತಿಳಿಸಿದರೂ ಪ್ರಯೋಜನವಾಗಲಿಲ್ಲ.
ಆದರೆ ತನ್ನ ಕಕ್ಷಿಗಾರನನ್ನು ಸುಪ್ರೀಂ ಕೋರ್ಟಿಗೆ ಹೋಗಿ ಪ್ರಶ್ನಿಸುವಂತೆ ನಾನು ಸಲಹೆ ನೀಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ವಾಲಿಯಾ ಅರ್ಜಿಯನ್ನು ತಳ್ಳಿ ಹಾಕಿದ ನ್ಯಾಯಾಧೀಶರು, ಕೌರ್‌ಳನ್ನು ಆಕೆಯ ಹೆತ್ತವರ ಜತೆ ತೆರಳಲು ಅನುಮತಿ ನೀಡಿದ್ದಾರೆ. ಅಲ್ಲದೆ ಆಕೆ ವಯಸ್ಕಳಾಗಿರುವುದರಿಂದ ತನ್ನ ಜೀವನದ ಕುರಿತು ಸ್ವಂತ ನಿರ್ಧಾರಗಳನ್ನು ಕೈಗೊಳ್ಳಬಹುದಾಗಿದೆ ಎಂದು ಕೋರ್ಟ್ ಹೇಳಿದೆ.
ಹಿಂದೂ ವಿವಾಹ ಕಾಯ್ದೆಯ ನಿಷೇಧಿತ ಮದುವೆಯ ಸೆಕ್ಷನ್ ಐದರ ಪ್ರಕಾರ ಸಹೋದರ ಮತ್ತು ಸಹೋದರಿ, ಮಾವ ಮತ್ತು ಸೊಸೆ, ಅತ್ತೆ ಮತ್ತು ಅಳಿಯ, ದೊಡ್ಡಪ್ಪ/ಚಿಕ್ಕಪ್ಪನ ಮಗಳು ಮತ್ತು ಮಗ, ಮಾವ/ಅತ್ತೆಯ ಮಗ ಮತ್ತು ಮಗಳ ನಡುವಿನ ಮದುವೆ ಊರ್ಜಿತವಲ್ಲ. ಆದರೆ ಸಂಬಂಧಪಟ್ಟ ಸಮುದಾಯವು ಇದಕ್ಕೆ ಅವಕಾಶ ನೀಡಿದ್ದರೆ ಇಂತಹ ಮದುವೆಗಳು ಊರ್ಜಿತವೆನಿಸುತ್ತದೆ.
ಭಾರತೀಯ ಸಂಸ್ಕೃತಿಯಲ್ಲೂ ಈ ಕುರಿತು ಒಮ್ಮತವಿಲ್ಲ. ಕೆಲವು ಸಮುದಾಯಗಳಲ್ಲಿ ಚಿಕ್ಕಪ್ಪ ಅಥವಾ ದೊಡ್ಡಪ್ಪನ ಮಗಳನ್ನು ಮದುವೆಯಾಗಲು ಅವಕಾಶವಿದೆ. ಕೆಲವು ಕಡೆ ಮಾವನ ಅಥವಾ ಅತ್ತೆ ಮಗಳನ್ನು ಮದುವೆಯಾಗಲು ಅವಕಾಶವಿದೆ. ಕೆಲವು ಸಮುದಾಯಗಳಲ್ಲಿ ಈ ಎರಡೂ ಮದುವೆಗಳ ಮೇಲೂ ನಿಷೇಧಗಳಿವೆ. ಹಾಗಾಗಿ ಪ್ರಕರಣಗಳನ್ನು ತೀರ್ಮಾನಿಸುವಾಗ ನ್ಯಾಯಾಲಯವು ಸಂಬಂಧಪಟ್ಟ ಸಮುದಾಯದ ನಿಲುವುಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತದೆ.