ಕೊಲ್ಕತ್ತಾ, ಗುರುವಾರ, 16 ಸೆಪ್ಟೆಂಬರ್ 2010( 13:31 IST )
ಪಿಡಿಪಿ ನಾಯಕಿ ಮುಫ್ತಿ ಮೊಹಮ್ಮದ್ ಸಯೀದ್ ಅವರು ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರನ್ನು ರಾತೋರಾತ್ರಿ ಭೇಟಿ ಮಾಡಿ ಜಮ್ಮು-ಕಾಶ್ಮೀರದಲ್ಲಿ ನೂತನ ರಾಜಕೀಯ ಸಮೀಕರಣದ ವಾತಾವರಣ ಸೃಷ್ಟಿಸಿದ ಬೆನ್ನಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ಇನ್ನೂ ಯುವಕ, ಅವರಿಗೆ ಇನ್ನಷ್ಟು ಕಾಲಾವಕಾಶ ನೀಡುವ ಅಗತ್ಯವಿದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಹುಲ್, ಜಮ್ಮು-ಕಾಶ್ಮೀರದ ವ್ಯವಹಾರಗಳಲ್ಲಿ ಮಧ್ಯ ಪ್ರವೇಶಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವ ಜತೆಗೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯಡಿಯಲ್ಲಿ ಸೇನೆಯನ್ನು ರಾಜ್ಯದಿಂದ ಹಿಂದಕ್ಕೆ ಪಡೆಯುವ ಬೇಡಿಕೆಗಳ ಕುರಿತು ಕೂಡ ಪ್ರತಿಕ್ರಿಯೆಗೆ ನಿರಾಕರಿಸಿದರು.
ಒಮರ್ ಅಬ್ದುಲ್ಲಾ ಅವರನ್ನು ಸರಕಾರವು ಬೆಂಬಲಿಸಿದ್ದು, ನ್ಯಾಷನಲ್ ಕಾನ್ಫರೆನ್ಸ್ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಅವರಿನ್ನೂ ಯುವಕ. ಅಲ್ಲದೆ ಕಾಶ್ಮೀರ ಎನ್ನುವುದು ಕಠಿಣ ರಾಜಕೀಯ ಸ್ಥಿತಿಯನ್ನು ಹೊಂದಿರುವ ರಾಜ್ಯ. ಆದರೂ ಪರಿಸ್ಥಿತಿಯನ್ನು ನಿಭಾಯಿಸಲು ಒಮರ್ ಕಠಿಣ ಶ್ರಮವಹಿಸುತ್ತಿದ್ದಾರೆ. ಇಂತಹ ಹೊತ್ತಿನಲ್ಲಿ ಅವರಿಗೆ ಬೆಂಬಲ ಮತ್ತು ಕಾಲಾವಕಾಶ ನೀಡುವ ಅಗತ್ಯವಿದೆ ಎಂದರು.
ಒಮರ್ ಆಡಳಿತದಲ್ಲಿ ವಿಫಲರಾಗಿದ್ದಾರೆಯೇ ಎಂದು ಪ್ರಶ್ನಿಸಿದಾಗ ಮೇಲಿನಂತೆ ಉತ್ತರಿಸಿದ ಅವರು, ಕಾಂಗ್ರೆಸ್ ಪಕ್ಷವು ಮುಖ್ಯಮಂತ್ರಿಯನ್ನು ಬೆಂಬಲಿಸುತ್ತಿದೆ. ಅಲ್ಲಿನ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಅವರಿಗೆ ಬಿಟ್ಟದ್ದು. ನಾವು ಪಾಲುದಾರರು ಮಾತ್ರ. ನನ್ನ ಪ್ರಕಾರ ಹೇಳುವುದಾದರೆ ಒಮರ್ ಅವರಿಗೆ ಬೆಂಬಲ ನೀಡುವ ಅಗತ್ಯವಿದೆ ಎಂದು ರಾಹುಲ್ ತಿಳಿಸಿದರು.
ಅದೇ ಹೊತ್ತಿಗೆ ಕಾಶ್ಮೀರದ ಪರಿಸ್ಥಿತಿ ಗಂಭೀರವಾಗಿದೆ ಎಂದು ತಾನು ಹೇಳಿರುವುದನ್ನು ಸರಿಪಡಿಸುತ್ತಾ, ನಾನು ಹಾಗೆ ಹೇಳಿಲ್ಲ ಎಂದರು.
ಪ್ರಸಕ್ತ ನ್ಯಾಷನಲ್ ಕಾನ್ಫರೆನ್ಸ್‌ಗೆ ಬೆಂಬಲ ನೀಡಿರುವ ಕಾಂಗ್ರೆಸ್, ತನ್ನ ನಿಲುವನ್ನು ಪಿಡಿಪಿಯತ್ತ ಚಾಚುತ್ತಿದೆ ಎಂಬ ಶಂಕೆಗಳು ಈ ನಡುವೆ ಮೂಡಿವೆ. ಇದಕ್ಕೆ ಕಾರಣವಾಗಿರುವುದು ಮುಫ್ತಿ ಮತ್ತು ಕಾಂಗ್ರೆಸ್ ನಾಯಕರು ಮಂಗಳವಾರ ರಾತೋರಾತ್ರಿ ಭೇಟಿಯಾಗಿರುವುದು.
ಆದರೆ ಈ ಕುರಿತು ಕಾಂಗ್ರೆಸ್ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.