ತನ್ನ ಮಾಜಿ ಆಪ್ತ ಸಹಾಯಕನಿಂದಲೇ ಒರಿಸ್ಸಾ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಮುಖ್ಯಮಂತ್ರಿಯೊಬ್ಬರು ವಿಫಲ ಹತ್ಯಾ ಯತ್ನಕ್ಕೊಳಗಾದ ಘಟನೆ ವರದಿಯಾಗಿದೆ. ವೈಯಕ್ತಿಕ ದ್ವೇಷವೇ ಘಟನೆಗೆ ಕಾರಣ ಎಂದು ಹೇಳಲಾಗಿದೆ.
ಸುಂದರಗಢದ ಸಂಸದ ಹೇಮಾನಂದ್ ಬಿಸ್ವಾಲ್ ಎಂಬವರೇ ಅಪಾಯದಿಂದ ಪಾರಾದವರು. ಪಿಸ್ತೂಲಿನಿಂದ ಗುಂಡಿಕ್ಕಲು ಮಾಜಿ ಆಪ್ತ ಸಹಾಯಕ ಯತ್ನಿಸಿದ್ದಾನೆ ಎಂದು 71ರ ಹರೆಯದ ಸಂಸದರು ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಕೆ. ಕಾಮರಾಜ್ ಲೇನ್‌ನಲ್ಲಿ ನಂ.7 ನಿವಾಸದಲ್ಲಿದ್ದಾಗ ಮುಂಜಾನೆ ನಾಲ್ಕು ಗಂಟೆ ಹೊತ್ತಿಗೆ ಮಾಜಿ ಆಪ್ತ ಸಹಾಯಕ ಪ್ರಭಾತ್ ಕುಮಾರ್ ಶರ್ಮಾ ಹತ್ಯೆಗೆ ಯತ್ನಿಸಿದ್ದಾನೆ. ಪಿಸ್ತೂಲಿನಿಂದ ಗುಂಡು ಹಾರಿಸಲು ಯತ್ನಿಸಿದ್ದರೂ, ಗಾಯವಿಲ್ಲದೆ ಬಿಸ್ವಾಲ್ ಪಾರಾಗಿದ್ದಾರೆ. ಅವರು ಸುರಕ್ಷಿತವಾಗಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೂಲಗಳ ಪ್ರಕಾರ ಶರ್ಮಾ ಗುಂಡು ಹಾರಿಸಲು ಯತ್ನಿಸಿದ್ದರೂ, ಪಿಸ್ತೂಲು ಸಮರ್ಪಕವಾಗಿ ಕಾರ್ಯನಿರ್ವಹಿಸದ ಕಾರಣ ಯತ್ನ ವಿಫಲವಾಗಿತ್ತು. ಈ ಸಂದರ್ಭದಲ್ಲಿ ಮತ್ತೊಂದು ಪಿಸ್ತೂಲನ್ನು ಹೊರತೆಗೆಯಲು ಶರ್ಮಾ ಯತ್ನಿಸಿದಾಗ, ಬಿಸ್ವಾಲ್ ಪ್ರತಿರೋಧ ಒಡ್ಡಿದ್ದರು. ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಸಂಸದರು ತಂಗಿರುವ ಕಟ್ಟಡದ ನವೀಕರಣ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಶರ್ಮಾರನ್ನು ಕೆಲಸಕ್ಕೆ ಸಂಬಂಧಿಸಿದಂತೆ ಅವ್ಯವಹಾರ ಎಸಗಿರುವುದು ಪತ್ತೆಯಾದ ನಂತರ ಕೆಲವು ತಿಂಗಳ ಹಿಂದೆ ಉದ್ಯೋಗದಿಂದ ಕೈ ಬಿಡಲಾಗಿತ್ತು. ಈ ಸಂಬಂಧ ಬಿಸ್ವಾಲ್ ಅವರು ಸಂಬಂಧಪಟ್ಟವರಿಗೆ ದೂರನ್ನೂ ನೀಡಿದ್ದರು.
ದಾಳಿಕೋರ ಶರ್ಮಾನನ್ನು ಇದುವರೆಗೂ ಬಂಧಿಸಲಾಗಿಲ್ಲ. ದಾಳಿಯ ಹಿಂದಿನ ಕಾರಣವೇನೆಂಬುದನ್ನು ಪತ್ತೆ ಹಚ್ಚಲು ಯತ್ನಿಸುತ್ತಿದ್ದೇವೆ. ಅವರಿಬ್ಬರ ನಡುವಿನ ವೈಯಕ್ತಿಕ ದ್ವೇಷವೇ ದಾಳಿಗೆ ಕಾರಣ ಎಂಬುದು ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ. ನಾವೀಗ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಮೂಲಗಳು ಹೇಳಿವೆ.