ಹಿಂದೂಗಳು ಅಥವಾ ಮುಸ್ಲಿಮರು ಒಪ್ಪಿಗೆ ಸೂಚಿಸದ ಹೊರತು ಅಯೋಧ್ಯೆಯ ಒಡೆತನದ ಕುರಿತು ಸೌಹಾರ್ದಯುತ ಪರಿಹಾರವನ್ನು ಕಂಡುಕೊಳ್ಳುವುದು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವ ಕುರಿತು ಹಿಂದೂಗಳು ಬದ್ಧರಾಗಿದ್ದಾರೆ. ಈ ಹಂತದಲ್ಲಿ ವಿವಾದವನ್ನು ಸೌಹಾರ್ದಯುತವಾಗಿ ಪರಿಹರಿಸಲು ಯಾವುದೇ ಅವಕಾಶಗಳಿಲ್ಲ ಎಂದು ಅಯೋಧ್ಯೆಯತ್ತ ಪ್ರಯಾಣ ಬೆಳೆಸಿರುವ ನೂತನ 'ಜನಶಕ್ತಿ ಪಕ್ಷ'ದ ನಾಯಕ ಹೇಳಿದರು.
ಈಗ ಪರಿಸ್ಥಿತಿ ಸೂಕ್ಷ್ಮವಾಗಿರುವ ಹೊತ್ತಿನಲ್ಲಿ ಅಯೋಧ್ಯೆಗೆ ಭೇಟಿ ನೀಡುವ ಅಗತ್ಯವೇನಿದೆ ಎಂಬ ಪ್ರಶ್ನೆಗೆ ಅವರು, ತಾನು ಶ್ರೀರಾಮನಲ್ಲಿ ಪ್ರಾರ್ಥನೆ ಸಲ್ಲಿಸಲು ಹೋಗುತ್ತಿದ್ದೇನೆಯೇ ಹೊರತು ಶಾಂತಿ ಕದಡಲು ಅಲ್ಲ. ಪಕ್ಷದ ಕಾರ್ಯಕರ್ತರು ಕೂಡ ಶಾಂತ ರೀತಿಯಿಂದ ನನ್ನ ಜತೆ ಪ್ರಯಾಣಿಸಲಿದ್ದಾರೆ ಎಂದರು.
ನಮ್ಮನ್ನು ಒಂದು ವೇಳೆ ಸರಕಾರ ತಡೆಯುವುದಾದರೆ, ಅದಕ್ಕೆ ನಾವು ವಿಧೇಯರಾಗಿರುತ್ತೇವೆ. ಇಡೀ ದೇಶಕ್ಕೆ ಸೂಕ್ತ ಸಂದೇಶ ನೀಡುವ ನಿಟ್ಟಿನಲ್ಲಿ ನಾವು ಶಾಂತಿಯುತ ಯಾತ್ರೆ ಮಾಡುತ್ತಿದ್ದೇವೆ ಎಂದು ಬಿಜೆಪಿಯ ಮಾಜಿ ಮುಖಂಡ ತಿಳಿಸಿದ್ದಾರೆ.
ಕೇಸರಿ ಪಕ್ಷದ ಜತೆಗಿನ ಸಂಬಂಧ ಕಡಿದುಕೊಂಡ ನಂತರ ಜನಶಕ್ತಿ ಪಕ್ಷ ಎಂಬ ರಾಜಕೀಯ ಸಂಘಟನೆಯನ್ನು ಹುಟ್ಟು ಹಾಕಿರುವ ಕಲ್ಯಾಣ್, ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದವರು ಎಂದು ಆರೋಪಿಸುತ್ತಾ ಬರಲಾಗುತ್ತಿದೆ.
ಅಯೋಧ್ಯೆಯಲ್ಲಿ ನಾನು ಸಾಧು-ಸಂತರನ್ನು ಭೇಟಿಯಾಗಲಿದ್ದೇನೆ. ಹಾಗಾಗಿ ಮಾಯಾವತಿ ಸರಕಾರವು ನನ್ನನ್ನು ತಡೆಯುವುದಿಲ್ಲ ಎಂಬ ಭರವಸೆ ನನ್ನದು ಎಂದಿರುವ ಕಲ್ಯಾಣ್, ರಾಮಮಂದಿರ ನಿರ್ಮಾಣಕ್ಕಾಗಿ ಕಾನೂನು ರೂಪಿಸಬೇಕೆಂಬ ತನ್ನ ಹಿಂದಿನ ಮಾತನ್ನು ಪುನರುಚ್ಛರಿಸಿದ್ದಾರೆ.
ಲಕ್ಷಾಂತರ ಹಿಂದೂಗಳ ನಂಬಿಕೆಯ ಪ್ರಶ್ನೆ ಇದಾಗಿರುವ ಕಾರಣ ಸಂಸತ್ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಅಯೋಧ್ಯೆಯ ಒಡೆತನದ ಕುರಿತು ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ಪೀಠವು ಸೆಪ್ಟೆಂಬರ್ 24ರಂದು ಅಪರಾಹ್ನ 3.30ಕ್ಕೆ ತನ್ನ ಮಹತ್ವದ ತೀರ್ಪನ್ನು ನೀಡಲಿದೆ.