ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅರ್ಧಕ್ಕರ್ಧ ನ್ಯಾಯಾಧೀಶರು ಭ್ರಷ್ಟರು; ಸುಪ್ರೀಂಗೆ ಸವಾಲ್
(Chief Justice of India | Shanti Bhushan | Morarji Desai | Supreme Court)
ಭಾರತದ 16 ಮಾಜಿ ಮುಖ್ಯ ನ್ಯಾಯಮೂರ್ತಿಗಳಲ್ಲಿ ಎಂಟು ಮಂದಿ ಖಚಿತವಾಗಿ ಭ್ರಷ್ಟಾಚಾರಿಗಳಾಗಿದ್ದರು ಎಂದು ಆರೋಪಿಸಿರುವ ಕೇಂದ್ರದ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್, ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ನನ್ನನ್ನು ಜೈಲಿಗೆ ತಳ್ಳುವಂತೆ ಸುಪ್ರೀಂ ಕೋರ್ಟಿಗೆ ಸವಾಲು ಹಾಕಿದ್ದಾರೆ.
ಮೊರಾರ್ಜಿ ದೇಸಾಯಿಯವರ ಸರಕಾರದಲ್ಲಿ ಕಾನೂನೂ ಸಚಿವರಾಗಿದ್ದ ಭೂಷಣ್ ಅವರ ಪ್ರಕಾರ, ಆರು ಮಂದಿ ಮಾಜಿ ಮುಖ್ಯ ನ್ಯಾಯಮೂರ್ತಿಗಳು ಪ್ರಾಮಾಣಿಕರು; ಇತರ ಇಬ್ಬರ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದಿದ್ದಾರೆ. ಅಲ್ಲದೆ ಈ ಎಂಟು ಮಂದಿ 'ಭ್ರಷ್ಟ ನ್ಯಾಯಮೂರ್ತಿ'ಗಳ ಪಟ್ಟಿಯನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಿದ್ದಾರೆ.
ಭ್ರಷ್ಟ ನ್ಯಾಯಮೂರ್ತಿಗಳ ಬಗ್ಗೆ 'ಟೆಹೆಲ್ಕಾ' ನಿಯತಕಾಲಿಕದಲ್ಲಿ ಲೇಖನ ಬರೆದಿರುವ ಭೂಷಣ್ ವಿರುದ್ಧ ಸುಪ್ರೀಂ ಕೋರ್ಟ್ ಈಗಾಗಲೇ ನ್ಯಾಯಾಂಗ ನಿಂದನೆಗೆ ಚಾಲನೆ ನೀಡಿದೆ.
ತನ್ನ ಮಗ ಪ್ರಶಾಂತ್ ಭೂಷಣ್ ಎದುರಿಸುತ್ತಿರುವ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ನನ್ನನ್ನೂ ಕಕ್ಷಿಗಾರನನ್ನಾಗಿ ಸೇರಿಸುವಂತೆ ಈ ಸಂದರ್ಭದಲ್ಲಿ ಮಾಜಿ ಸಚಿವರು ಮನವಿ ಮಾಡಿದ್ದಾರೆ.
ಶಾಂತಿ ಭೂಷಣ್ ಅವರು ತನ್ನ ಅಫಿದವಿತ್‌ನಲ್ಲಿ ಹೆಸರಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು: ರಂಗನಾಥ್ ಮಿಶ್ರಾ, ಕೆ.ಎನ್. ಸಿಂಗ್, ಎಂ.ಎಚ್. ಕೈನಾ, ಎಲ್.ಎಂ. ಶರ್ಮಾ, ಎಂ.ಎನ್. ವೆಂಕಟಾಚಲಯ್ಯ, ಎ.ಎಂ. ಅಹೆಮದಿ, ಜೆ.ಎಸ್. ವರ್ಮಾ, ಎಂ.ಎಂ. ಪುಂಚಿ, ಎ.ಎಸ್. ಆನಂದ್, ಎಸ್.ಪಿ. ಬರೂಚಾ, ಬಿ.ಎನ್. ಕೃಪಾಲ್, ಜಿ.ಬಿ. ಪಾಠಕ್, ರಾಜೇಂದ್ರ ಬಾಬು, ಆರ್.ಸಿ. ಲೊಹಾಟಿ, ವಿ.ಎನ್. ಖರೆ ಮತ್ತು ವೈ.ಕೆ. ಸಬರ್ವಾಲ್.
ತಾವು ಅಧಿಕಾರಕ್ಕೆ ಬರುವ ಮುಂಚಿನ ಮತ್ತು ನಂತರದ ಕೆಲವು ಮುಖ್ಯನ್ಯಾಯಮೂರ್ತಿಗಳು ಭ್ರಷ್ಟರಾಗಿದ್ದರು ಎಂದು ಇಬ್ಬರು ಮಾಜಿ ಮುಖ್ಯ ನ್ಯಾಯಮೂರ್ತಿಗಳು ವೈಯಕ್ತಿಕವಾಗಿ ನನಗೆ ಮಾಹಿತಿ ನೀಡಿದ್ದಾರೆ. ನಾನು ನೀಡಿರುವ ಎಂಟು ಭ್ರಷ್ಟ ಜಡ್ಜ್‌ಗಳ ಪಟ್ಟಿಯಲ್ಲಿ ಇರುವ ನಾಲ್ವರು ಅವರೇ ಎಂದೂ ಭೂಷಣ್ ಕೋರ್ಟಿಗೆ ತಿಳಿಸಿದ್ದಾರೆ.
ಭೂಷಣ್ ಅವರ ಪುತ್ರ ಪ್ರಶಾಂತ್ ಅವರು ಈಗಿನ ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ಮತ್ತು ಮಾಜಿ ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ವಿರುದ್ಧ ಆರೋಪಗಳನ್ನು ಮಾಡುವ ಮೂಲಕ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸುತ್ತಿದ್ದಾರೆ. ಅದೇ ಸಾಲಿಗೆ ತನ್ನನ್ನೂ ಸೇರಿಸುವಂತೆ ಮಾಜಿ ಸಚಿವರು ಕೇಳಿಕೊಂಡಿದ್ದಾರೆ.
ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸುತ್ತಾ ಬಂದಿರುವ ಈ ಅಪ್ಪ-ಮಗ ಇದೀಗ ತಮ್ಮನ್ನು ಜೈಲಿಗೆ ಹಾಕುವಂತೆ ಸುಪ್ರೀಂ ಕೋರ್ಟಿಗೆ ಸವಾಲು ಹಾಕಿದ್ದಾರೆ.