ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪು ಹಿನ್ನೆಲೆ: ಶಾಲೆಗಳು ಜೈಲುಗಳಾಗುತ್ತಿವೆ!
(Darul Uloom Deoband | Ayodhya verdict | Ram Temple | Babri Masjid)
ಬಹುನಿರೀಕ್ಷಿತ ಅಯೋಧ್ಯೆಯ ಒಡೆತನದ ತೀರ್ಪು ಮುಂದಿನ ಶುಕ್ರವಾರ ಹೊರ ಬರಲಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಭಾರೀ ಭದ್ರತೆಯನ್ನು ನಿಯೋಜಿಸಲಾಗುತ್ತಿದೆ. ಉತ್ತರ ಪ್ರದೇಶ ಸರಕಾರವಂತೂ ಪರಿಸ್ಥಿತಿಯನ್ನು ಎದುರಿಸಲು ಭರದ ಸಿದ್ಧತೆ ನಡೆಸಿದ್ದು, ಹಲವು ಶಾಲೆಗಳನ್ನು ಜೈಲುಗಳನ್ನಾಗಿ ಮಾಡುವ ಯೋಜನೆ ಹಾಕಿಕೊಂಡಿದೆ.
ಅಯೋಧ್ಯೆ ಹಿಂದೂಗಳಿಗೆ ಸೇರಿದ್ದೋ ಅಥವಾ ಮುಸ್ಲಿಮರಿಗೆ ಸೇರಿದ್ದೋ ಎಂಬ ಕುರಿತಾದ ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ತೀರ್ಪನ್ನು ಸೆಪ್ಟೆಂಬರ್ 24ರ ಅಪರಾಹ್ನ 3.30ಕ್ಕೆ ಅಲಹಾಬಾದ್ ಉಚ್ಚ ನ್ಯಾಯಾಲಯದ ಲಕ್ನೋ ವಿಶೇಷ ಪೀಠವು ನೀಡಲಿದೆ.
ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರಕಾರವು ಪ್ರತಿ ಜಿಲ್ಲೆಗಳಲ್ಲಿ ಕನಿಷ್ಠ ಎರಡು ಶಾಲೆಗಳನ್ನು ಜೈಲುಗಳನ್ನಾಗಿ ಮಾರ್ಪಡಿಸುವ ಯೋಚನೆಯಲ್ಲಿದೆ. ಅಗತ್ಯ ಬಿದ್ದರೆ ತಲಾ ಎರಡು ಶಾಲೆಗಳನ್ನು ಬಂಧಿತರನ್ನು ಇಡಲು ಬಳಕೆ ಮಾಡಲಾಗುತ್ತದೆ. ಇದರಲ್ಲಿ ಒಂದು ಮಹಿಳೆಯರಿಗೆ, ಮತ್ತೊಂದು ಪುರುಷರಿಗೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಲ್ಲದೆ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಒಂಬತ್ತಕ್ಕೂ ಹೆಚ್ಚು ತಾತ್ಕಾಲಿಕ ಜೈಲುಗಳನ್ನು ಸೃಷ್ಟಿ ಮಾಡಲಾಗಿದೆ. ಪ್ರಸಕ್ತ ಇರುವ ಜೈಲುಗಳಲ್ಲಿ ಹೆಚ್ಚಿನ ಜನರನ್ನು ಇಡಲು ಸಾಧ್ಯವಾಗದೇ ಇರುವುದರಿಂದ ಈ ಕ್ರಮಕ್ಕೆ ಬರಲಾಗಿದೆ.
ಶಾಲೆಗಳಷ್ಟೇ ಅಲ್ಲದೆ ನಗರ ಪ್ರದೇಶಗಳಲ್ಲಿರುವ ಸಭಾಂಗಣಗಳು, ಕಲ್ಯಾಣ ಮಂಟಪಗಳು ಮತ್ತು ಇತರ ಖಾಸಗಿ ವಿದ್ಯಾಸಂಸ್ಥೆಗಳ ಕಟ್ಟಡಗಳನ್ನು ಕೂಡ ಅನಿವಾರ್ಯ ಬಿದ್ದಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೀರ್ಪನ್ನು ಗೌರವಿಸಿ: ದಿಯೋಬಂದ್ ನ್ಯಾಯಾಲಯ ನೀಡುವ ತೀರ್ಪನ್ನು ಜನತೆ ಗೌರವಿಸಬೇಕು ಎಂದು ದಾರುಲ್ ಉಲೂಮ್ ದಿಯೋಬಂದ್ ಇಸ್ಲಾಮಿಕ್ ಧಾರ್ಮಿಕ ಸಂಘಟನೆ ಮನವಿ ಮಾಡಿಕೊಂಡಿದೆ.
ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ನಮಗೆ ಸಂಪೂರ್ಣ ನಂಬಿಕೆಯಿದೆ. ಹಾಗಾಗಿ ಕೋರ್ಟ್ ನೀಡುವ ತೀರ್ಪನ್ನು ಗೌರವಿಸಬೇಕು, ದೇಶದಲ್ಲಿನ ಶಾಂತಿಯ ವಾತಾವರಣವನ್ನು ಕೆಡಿಸದೆ ಕೋಮು ಸಾಮರಸ್ಯವನ್ನು ಮೆರೆಸಬೇಕು ಎಂದು ಜನರಲ್ಲಿ ನಾವು ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ಸಂಸ್ಥೆಯ ಉಪಾಧ್ಯಕ್ಷ ಮೌಲಾನಾ ಅಬ್ದುಲ್ ಖಾಲಿಕ್ ಮದ್ರಾಸಿ ಹೇಳಿದ್ದಾರೆ.
ದಿಯೋಬಂದ್ ನಿಲುವನ್ನು ಉತ್ತರ ಪ್ರದೇಶದ ಇಮಾಮ್‌ಗಳ ಸಂಘಟನೆಯ ಅಧ್ಯಕ್ಷ ಮುಫ್ತಿ ಜುಲ್ಫೀಕರ್ ಆಲಿ ಕೂಡ ಬೆಂಬಲಿಸಿದ್ದಾರೆ. ತೀರ್ಪನ್ನು ನಾವು ಗೌರವಿಸಲೇಬೇಕು. ಹಾಗೊಂದು ವೇಳೆ ಕೋರ್ಟ್ ತೀರ್ಪು ಸಮಾಧಾನ ತರದಿದ್ದರೆ ಸಂಬಂಧಪಟ್ಟವರು ಸುಪ್ರೀಂ ಕೋರ್ಟಿಗೆ ಹೋಗಬಹುದು ಎಂದರು.
ಶಾಂತಿ ಕಾಪಾಡಿ: ಸರಕಾರ ಅಲಹಾಬಾದ್ ಹೈಕೋರ್ಟ್ ತೀರ್ಪಿನ ನಂತರ ಜನತೆ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಮನವಿ ಮಾಡಿಕೊಂಡಿದೆ.
ಹೈಕೋರ್ಟ್ ತೀರ್ಪು ಕಾನೂನು ಪ್ರಕ್ರಿಯೆಯ ಒಂದು ಹಂತವೇ ಹೊರತು ಅದೇ ಅಂತಿಮವಲ್ಲ. ಸರ್ವಸಮ್ಮತವಾಗಿರುವ ಪರಿಹಾರ ಕಂಡುಕೊಳ್ಳದ ಹೊರತು ಪ್ರಕರಣ ಅಂತ್ಯ ಕಾಣದು. ಹಾಗಾಗಿ ಯಾವುದೇ ಸಮುದಾಯದ ಜನ ಪ್ರಚೋದನಾಕಾರಿಯಾಗಿ ವರ್ತಿಸಬಾರದು. ಇತರ ಸಮುದಾಯಗಳ ಜನರ ಭಾವನೆಗಳಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಅಂಬಿಕಾ ಸೋನಿ ವಿನಂತಿಸಿದ್ದಾರೆ.