ಹೈದರಾಬಾದ್, ಶುಕ್ರವಾರ, 17 ಸೆಪ್ಟೆಂಬರ್ 2010( 11:14 IST )
ತಮ್ಮ ಗಂಡಂದಿರು ಅಕಾಲಿಕವಾಗಿ ಸಾವನ್ನಪ್ಪುತ್ತಿರುವುದಕ್ಕೆ ಸ್ಥಳೀಯ ಮಾಟಗಾರರೇ ಕಾರಣ ಎಂದು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ವಿಧವೆಯರು ಮತ್ತಿತರ ಮಹಿಳೆಯರು ಸೇರಿಕೊಂಡು ಇಬ್ಬರನ್ನು ಜೀವಂತ ಸುಟ್ಟು ಹಾಕಿದ ಹೃದಯ ವಿದ್ರಾವಕ ಘಟನೆಯೊಂದು ಪಕ್ಕದ ಆಂಧ್ರದಲ್ಲಿ ನಡೆದಿದೆ.
ತಮ್ಮ ಗಂಡಂದಿರು, ಕುಟುಂಬದ ಸದಸ್ಯರು ಅನಾರೋಗ್ಯಕ್ಕೀಡಾಗಿ ಅಕಾಲಿಕವಾಗಿ ಸಾವನ್ನಪ್ಪುತ್ತಿರುವುದರ ಹಿಂದೆ ಮಾಟಗಾರರ ಕೈವಾಡವಿದೆ. ಅವರು ತಮ್ಮ ಮೇಲೆ ಅಧಿಪತ್ಯ ಸಾಧಿಸಲು ಈ ಮೂಲಕ ಯತ್ನಿಸುತ್ತಿದ್ದಾರೆ ಎಂದು ಆಕ್ರೋಶಗೊಂಡ ಮಹಿಳೆಯರ ಗುಂಪು ಇಬ್ಬರು ಮಾಟಗಾರರನ್ನು ಕಟ್ಟಿಗೆಯ ಮೇಲೆ ತಳ್ಳಿ ಕೆರೊಸಿನ್ ಸುರಿದು ಬೆಂಕಿ ಹಚ್ಚಿದ್ದರು.
ಮುನಿದಿದ್ದ ನಾರೀಮಣಿಯರಿಗೆ ಬಲಿಯಾದ 'ಮಾಟಗಾರ'ರನ್ನು ನರಸಿಂಹ (65) ಮತ್ತು ಜಿ. ಎಲ್ಲಯ್ಯ (70) ಎಂದು ಗುರುತಿಸಲಾಗಿದೆ.
PR
ಆಂಧ್ರಪ್ರದೇಶದ ನಲ್ಗೊಂಡಾ ಜಿಲ್ಲೆಯ ಕೈತಾಪುರ್ ಗ್ರಾಮದಲ್ಲಿ ಇಂತಹ ಘಟನೆ ನಡೆದಿದೆ. ಇತ್ತೀಚೆಗಷ್ಟೇ ವ್ಯಕ್ತಿಯೊಬ್ಬ ಬೈಕ್ ಅಪಘಾತದಲ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಅದಕ್ಕೂ ಮೊದಲು ಹಲವು ಮಂದಿ ಶಂಕಾಸ್ಪದ ರೀತಿಯಲ್ಲಿ ಕೊನೆಯುಸಿರೆಳೆದ ಪ್ರಕರಣಗಳಿದ್ದುದರಿಂದ ತಾಳ್ಮೆ ಕಳೆದುಕೊಂಡ ಮಹಿಳೆಯರು ಈ ಕೃತ್ಯ ನಡೆಸಿದ್ದಾರೆ.
ಆರಂಭದಲ್ಲಿ 'ಮಾಟಗಾರ'ರನ್ನು ಹಿಡಿದ ಕೆಲವು ವಿಧವೆಯರು ಥಳಿಸಲಾರಂಭಿಸಿದರು. ಅಷ್ಟು ಹೊತ್ತಿಗೆ ಇತರ ಮಹಿಳೆಯರು ಕೂಡ ತಮ್ಮ ಗಂಡಂದಿರಿಗೆ ಅಪಾಯವಾಗಬಾರದೆಂಬ ಹಿನ್ನೆಲೆಯಲ್ಲಿ ಸ್ಮಶಾನಕ್ಕೆ ಎಳೆದುಕೊಂಡು ಹೋಗಿ, ಅಲ್ಲಿದ್ದ ಕಟ್ಟಿಗೆಯ ರಾಶಿ ಮೇಲೆ ತಳ್ಳಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದರು ಎಂದು ವರದಿಗಳು ಹೇಳಿವೆ.
ಇಬ್ಬರು ವ್ಯಕ್ತಿಗಳು ಗ್ರಾಮದ ಹೊರ ವಲಯದಲ್ಲಿ ಬೆತ್ತಲೆಯಾಗಿ ವಾಮಾಚಾರ ಕ್ರಿಯೆಗಳನ್ನು ನಡೆಸುತ್ತಿದ್ದುದನ್ನು ನಾವು ನೋಡಿದ್ದೇವೆ. ಅವರು ನಿಂಬೆ ಮತ್ತು ಕುಂಕುಮ ಮತ್ತಿತರ ವಸ್ತುಗಳನ್ನು ತಮ್ಮ ಕೃತ್ಯಗಳಿಗಾಗಿ ಬಳಸಿದ್ದರು ಎಂದು ಅವರನ್ನು ಕೊಂದು ಹಾಕಿದ ಸುಮಾರು 50ರಷ್ಟು ಮಹಿಳೆಯರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಲೀಲಾ ಎಂಬ ಮಹಿಳೆ, ಅವರು ಗ್ರಾಮದಲ್ಲಿ ಮಾಟ ನಡೆಸುತ್ತಾ ಬಂದಿದ್ದರು; ನಾವು ಸಾಕಷ್ಟು ಎಚ್ಚರಿಕೆ ನೀಡಿದ್ದರೂ ಕಿವಿಗೊಟ್ಟಿರಲಿಲ್ಲ. ಈಗಾಗಲೇ ಸಾಕಷ್ಟು ಮಂದಿ ಅವರಿಂದಾಗಿ ಸತ್ತಿದ್ದಾರೆ. ಇನ್ನಷ್ಟು ಕಂಟಕ ಬರಬಾರದೆಂಬ ನಿಟ್ಟಿನಲ್ಲಿ ನಾವು ಈ ರೀತಿ ಮಾಡಿದ್ದೇವೆ ಎಂದಿದ್ದಾಳೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು 50 ಮಹಿಳೆಯರು ಸೇರಿದಂತೆ ಒಟ್ಟು 62 ಮಂದಿಯನ್ನು ಬಂಧಿಸಿದ್ದಾರೆ.