ನವದೆಹಲಿ, ಶುಕ್ರವಾರ, 17 ಸೆಪ್ಟೆಂಬರ್ 2010( 12:15 IST )
ಕೆಂಪು ಉಗ್ರರ ಹಿಂದಿರುವ ಮೂಲ ಸಿದ್ಧಾಂತವು ವಾಸ್ತವ ಸ್ಥಿತಿಗಿಂತ ಹೆಚ್ಚು ಕಾಲ್ಪನಿಕವಾಗಿದೆ ಎಂದು ಬಣ್ಣಿಸಿರುವ ಕೇಂದ್ರ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಕೆಲವು ಮಂದಿ ನಕ್ಸಲ್‌ವಾದವನ್ನು ಹೆಚ್ಚೆಚ್ಚು ವರ್ಣಮಯವನ್ನಾಗಿಸುತ್ತಿದ್ದಾರೆ; ಇದು ಅಪಾಯಕಾರಿ. ಹೀಗಾಗಬಾರದು ಎಂದು ಕರೆ ನೀಡಿದ್ದಾರೆ.
ನವದೆಹಲಿಯಲ್ಲಿ ಮಾತನಾಡುತ್ತಿದ್ದ ಕಾಂಗ್ರೆಸ್ ಮುಖಂಡ, ನಕ್ಸಲರು ಅಧಿಕಾರ ಪಡೆದುಕೊಳ್ಳಲು ಬಂದೂಕುಗಳ ಮೂಲಕ ರಾಜಕೀಯ ಪ್ರಚಾರ ಮಾಡುತ್ತಿದ್ದಾರೆ. ಅಭಿವೃದ್ಧಿಯಾಗುತ್ತಿಲ್ಲ ಎಂಬ ಸರಳ ಸೂತ್ರವನ್ನು ಹಿಡಿದುಕೊಂಡು ಅವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಎಂದರು.
ಕಾಂಗ್ರೆಸ್‌ನ ಸೈದ್ಧಾಂತಿಕವಾದಿ ಮತ್ತು ಆಪತ್ಬಾಂಧವ ಎಂಬ ಉಭಯ ಪಾತ್ರಗಳನ್ನು ನಿಭಾಯಿಸುತ್ತಿರುವ ಸಚಿವರು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಅಭಿಪ್ರಾಯಗಳನ್ನು ಇತರರೊಂದಿಗೆ ಹಂಚಿಕೊಂಡರು.
ನಕ್ಸಲೀಯರ ಬಗ್ಗೆ ಮತ್ತು ಅವರನ್ನು ಮಟ್ಟ ಹಾಕುವ ಕುರಿತು ಪಕ್ಷದ ವೇದಿಕೆಯೊಳಗೆ ಭಿನ್ನಾಭಿಪ್ರಾಯಗಳಿರುವುದು ಮತ್ತು ಅದು ಓತಪ್ರೋತವಾಗಿ ಇತರ ವೇದಿಕೆಗಳಲ್ಲಿ ಹರಿಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ಈ ಸಂಬಂಧ ಏಕತೆ ಮೂಡಿಸುವ ಕಾರ್ಯದಲ್ಲಿ ಸಕ್ರಿಯವಾಗಿದೆ.
ನಕ್ಸಲರ ವಿರುದ್ಧ ಕೈಗೊಳ್ಳುತ್ತಿರುವ ಪ್ರಸಕ್ತ ಕ್ರಮಗಳ ಬದಲು, ಅಲ್ಲಿ ಪ್ರಗತಿಗೆ ಹೆಚ್ಚು ಒತ್ತು ನೀಡಬೇಕು, ಆದರೆ ಇದನ್ನು ಗೃಹಸಚಿವ ಪಿ. ಚಿದಂಬರಂ ಯೋಚಿಸುತ್ತಿಲ್ಲ, ಅವರ ಹಾದಿಯೇ ಬೇರೆ ಎಂಬ ರೀತಿಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ನೇತೃತ್ವದ ಒಂದು ಗುಂಪು ಟೀಕಿಸುತ್ತಾ ಬಂದಿದೆ.
ನಕ್ಸಲ್‌ವಾದದ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಸಮಸ್ಯೆ ಬಗೆಹರಿಸುವ ಕುರಿತು ಹಲವು ವಿಧಾನಗಳನ್ನು ಸಚಿವ ಮುಖರ್ಜಿ ಪ್ರತಿಪಾದಿಸಿದರು.
ಖಂಡಿತಾ ಪ್ರಗತಿಯ ಅಗತ್ಯವಿದೆ. ಅಭಿವೃದ್ಧಿಯ ಕೊರತೆಯಿಂದಾಗಿಯೂ ನಕ್ಸಲರು ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಲು ಹೇತುವಾಗಬಹುದು. ಆದರೆ ಅವರು ಸೇವಾಸಂಸ್ಥೆಗಳನ್ನು ನಡೆಸಲಾರರು. ರಾಜಕೀಯ ಶಕ್ತಿಗಳಾಗಿರುವ ಮಾವೋಗಳು ಅಧಿಕಾರ ಪಡೆದುಕೊಳ್ಳಲು ಬಯಸುತ್ತಿದ್ದಾರೆ ಎಂದರು.