ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೋದಿ ಮಾಯೆ; ಗುಜರಾತಿನಲ್ಲೂ ಕಾಂಗ್ರೆಸ್ ಧೂಳೀಪಟ (BJP | Congress | Gujarat | Narendra Modi)
Bookmark and Share Feedback Print
 
ಕರ್ನಾಟಕದಲ್ಲಿ ಮುಖಭಂಗ ಅನುಭವಿಸಿದ ಕಾಂಗ್ರೆಸ್ ಗುಜರಾತ್ ವಿಧಾನಸಭಾ ಉಪಚುನಾವಣೆಯಲ್ಲೂ ಮುಖ-ಮೂತಿ ಜಜ್ಜಿಸಿಕೊಂಡಿದೆ. ಸ್ವಾತಂತ್ರೋತ್ತರದಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕತ್ಲಾಲ್ ಕ್ಷೇತ್ರದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದೆ. ಅದೂ 21,000 ಮತಗಳ ಅಂತರದಲ್ಲಿ!

ಎರಡೆರಡು ಬಿಜೆಪಿ ರಾಜ್ಯಗಳಲ್ಲಿ ನಡೆದ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಾತಾಳಕ್ಕೆ ತಲುಪುವುದರೊಂದಿಗೆ ಪುನಶ್ಚೇತನಕ್ಕೆ ಯತ್ನಿಸುತ್ತಿರುವ 'ಯುವರಾಜ' ರಾಹುಲ್ ಗಾಂಧಿಯವರಿಗೂ ನಿರಾಸೆಯಾಗಿದೆ. ರಾಹುಲ್ ಅವರಿಂದಾಗಿಯೇ ಬಿಜೆಪಿ ಈ ಪರಿಯ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಬಿಜೆಪಿ ನಾಯಕರು ಗೆಲುವನ್ನು ಬಣ್ಣಿಸಿಕೊಂಡಿದ್ದಾರೆ.
PTI

ಕಾಂಗ್ರೆಸ್ ಶಾಸಕರಾಗಿದ್ದ ಗೌತಮ್ ಜಾಲಾ ಅವರ ನಿಧನದ ಹಿನ್ನೆಲೆಯಲ್ಲಿ ಕತ್ಲಾಲ್ ವಿಧಾನಸಭಾ ಕ್ಷೇತ್ರದಲ್ಲಿ ಉಪ ಚುನಾವಣೆ ನಡೆದಿತ್ತು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಗೇಲಾ ಜಾಲಾ ಅವರನ್ನು ಬಿಜೆಪಿಯ ಕಾನು ದಾಬಿ ಎಂಬವರೇ ಇದೀಗ ದಾಖಲೆಯ ಅಂತರದಿಂದ ಮಣಿಸಿ ಶಾಸಕರಾಗಿರುವುದು.

ಮಹಾರಾಷ್ಟ್ರದಿಂದ ಗುಜರಾತನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದ ನಂತರ ಕತ್ಲಾಲ್ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಸಾಧಿಸಲು ಸಾಧ್ಯವಾಗಿರಲಿಲ್ಲ. ಮೊದಲ ಸುತ್ತಿನಿಂದಲೇ ಕಾಂಗ್ರೆಸ್ ಅಭ್ಯರ್ಥಿಯಿಂದ ಅಂತರವನ್ನು ಕಾಯ್ದುಕೊಂಡಿದ್ದ ಬಿಜೆಪಿ ಅಭ್ಯರ್ಥಿ ಕೊನೆಯ ಸುತ್ತಿನಲ್ಲಿ ಗೆದ್ದಾಗ ಉಳಿದ ಅಂತರ 21,547 ಓಟುಗಳು. ಆ ಮೂಲಕ ಮೋದಿಯವರ ಹುಟ್ಟುಹಬ್ಬಕ್ಕೆ ಭರ್ಜರಿ ಕೊಡುಗೆಯೇ ಲಭಿಸಿದೆ.

ಕೈರಾ ಜಿಲ್ಲೆಯಲ್ಲಿರುವ ಈ ಕ್ಷೇತ್ರದಲ್ಲಿ ಬಿಜೆಪಿಯ ದಾಬಿಯವರು 62,120 ಮತಗಳನ್ನು ಪಡೆದರೆ, ಅವರ ಎದುರಾಳಿ ಕಾಂಗ್ರೆಸ್‌ನ ಜಾಲಾ ಅವರು 40,573 ಮತಗಳನ್ನಷ್ಟೇ ಪಡೆಯಲು ಶಕ್ತರಾದರು.

ಕಾಂಗ್ರೆಸ್-ಸಿಬಿಐಗೆ ಸೋಲು...
ಈ ಕ್ಷೇತ್ರದಲ್ಲಿ ಭಾರೀ ಅಂತರದಿಂದ ಬಿಜೆಪಿ ಜಯ ದಾಖಲಿಸುವುದರೊಂದಿಗೆ ಕಾಂಗ್ರೆಸ್ ಮತ್ತು ಸಿಬಿಐಗೆ ಮಹತ್ವದ ಸೋಲಾಗಿದೆ ಎಂದು ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಹತ್ಯಾ ಪ್ರಕರಣಕ್ಕೆ ಬಂಧಿಸಿದ್ದನ್ನು ಉದಾಹರಿಸುತ್ತಾ ಮೋದಿ ತಿವಿದಿದ್ದಾರೆ.

ಈ ಚುನಾವಣೆಯ ಫಲಿತಾಂಶ ಇದಕ್ಕಿಂತಲೂ ಮೊದಲೇ ಘೋಷಣೆಯಾಗಬೇಕಿತ್ತು. ಆದರೆ ಚುನಾವಣಾ ಆಯೋಗದಲ್ಲಿ ಪಿತೂರಿ ನಡೆಸುವ ಮೂಲಕ ಕಾಂಗ್ರೆಸ್ ಏಳು ಬೂತ್‌ಗಳಲ್ಲಿ ಮರು ಚುನಾವಣೆಯ ತಂತ್ರ ಹೆಣೆಯಿತು. ಆದರೆ ಇದನ್ನು ಮನಗಂಡ ಮತದಾರರು ತಕ್ಕ ಶಾಸ್ತಿಯನ್ನೇ ಮಾಡಿದ್ದಾರೆ ಎಂದರು.

ಆದರೆ ಇದನ್ನು ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಮಸಿಂಹ ಪಾರ್ಮರ್ ತಳ್ಳಿ ಹಾಕಿದ್ದಾರೆ. ಆಡಳಿತ ಪಕ್ಷ ಬಿಜೆಪಿಯ ವಿಜಯಕ್ಕೆ ಅಧಿಕಾರದ ದುರುಪಯೋಗವೇ ಕಾರಣ ಎಂದು ಅವರು ಬಣ್ಣಿಸಿದ್ದಾರೆ.

ಇದು ಮೋದಿಗೆ ಉಡುಗೊರೆ...
ಭಾರತವು ಗಣರಾಜ್ಯವಾದ ವರ್ಷ 1950ರ ಸೆಪ್ಟೆಂಬರ್ 17ರಂದು ಜನಿಸಿದ್ದ ನರೇಂದ್ರ ದಾಮೋದರದಾಸ್ ಮೋದಿಗೆ ಇಂದು 60ನೇ ಹುಟ್ಟುಹಬ್ಬ. ಹಾಗಾಗಿ ಇಂದು ಕಾಂಗ್ರೆಸ್ ಭದ್ರಕೋಟೆಯನ್ನು ಭೇದಿಸುವುದರೊಂದಿಗೆ ಹುಟ್ಟುಹಬ್ಬವನ್ನು ಅವರು ಸಂಭ್ರಮದಿಂದ ಆಚರಿಸಲಿದ್ದಾರೆ ಎಂದು ಬಿಜೆಪಿಯ ಮೂಲಗಳು ಹೇಳಿವೆ.

ಇಂದು ಸಂಜೆ ಕತ್ಲಾಲ್‌ಗೆ ಆಗಮಿಸಲಿರುವ ಮೋದಿಯವರು ತನ್ನ ಹುಟ್ಟುಹಬ್ಬವನ್ನು ಗೆಲುವಿನ ಸವಿಯೊಂದಿಗೆ ಜನತೆಯ ಜತೆ ಹಂಚಿಕೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಗುಜರಾತಿನ ಬಿಜೆಪಿಯ ಜನಪ್ರಿಯ ಸರಕಾರವನ್ನು ಉರುಳಿಸುವ ಅಥವಾ ಅದಕ್ಕೆ ಮಸಿ ಬಳಿಯುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ಯಾವುದೇ ಯತ್ನವನ್ನೂ ಜನತೆ ಸಹಿಸುವುದಿಲ್ಲ ಎಂಬ ಸ್ಪಷ್ಟ ತೀರ್ಪನ್ನು ಮತದಾರರು ನೀಡಿದ್ದಾರೆ ಎಂದು ಬಿಜೆಪಿ ಮುಖಂಡ ಪಂಕಜ್ ದೇಸಾಯಿ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ