ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಮನೆಯ ಸಮೀಪ ಸಂಶಯಾಸ್ಪದವಾಗಿ ಠಳಾಯಿಸುತ್ತಿದ್ದ ನರಹಂತಕ ವೀರಪ್ಪನ್ ಸೋದರಳಿಯನನ್ನು ಪೊಲೀಸರು ಬಂಧಿಸಿದ್ದಾರೆ.
ಡಿಎಂಕೆ ವರಿಷ್ಠನ ಗೋಪಾಲಪುರಂನಲ್ಲಿನ ಮನೆಯ ಸಮೀಪ 24ರ ಹರೆಯದ ಸತೀಶ್ ಕುಮಾರ್ ತಿರುಗಾಡುತ್ತಿದ್ದ. ವಿಚಾರಣೆ ನಡೆಸಿದಾಗ ತಾನು ವೀರಪ್ಪನ್ ಸಹೋದರಿ ಮರಿಯಮ್ಮಳ್ ಪುತ್ರ ಎಂದು ಆತ ಒಪ್ಪಿಕೊಂಡಿದ್ದಾನೆ ಎಂದು ರಾಯ್‌ಪೇಟ್ ಪೊಲೀಸರು ತಿಳಿಸಿದ್ದಾರೆ.
1995ರ ನಂತರ ತನ್ನ ತಂದೆ ಅರ್ಜುನನ್ ನಿಗೂಢವಾಗಿ ಕಾಣೆಯಾಗಿದ್ದು, ಇದಕ್ಕಾಗಿ ಪರಿಹಾರ ಕೇಳಲೆಂದು ಮುಖ್ಯಮಂತ್ರಿಯವರನ್ನು ಭೇಟಿಯಾಗಲು ತಾನು ಬಂದಿದ್ದೇನೆ ಎಂದು ಸತೀಶ್ ಪೊಲೀಸರಿಗೆ ಹೇಳಿದ್ದಾನೆ.
ಬುಧವಾರ ಅಪರಾಹ್ನ ಮುಖ್ಯಮಂತ್ರಿಯವರ ಮನೆಯ ಸುತ್ತ ಓರ್ವ ವ್ಯಕ್ತಿ ಠಳಾಯಿಸುತ್ತಿದ್ದಾನೆ ಎಂದು ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಆತನನ್ನು ಹಿಡಿದು ವಿಚಾರಣೆಗೊಳಪಡಿಸಿದ್ದರು.
ಆತ ಹೇಳಿರುವ ಪ್ರಕಾರ 1995ರಲ್ಲಿ ಕರ್ನಾಟಕ ಪೊಲೀಸರು ವೀರಪ್ಪನ್‌ನನ್ನು ಪತ್ತೆ ಹಚ್ಚುವ ಸಲುವಾಗಿ ಅರ್ಜುನನ್‌ನನ್ನು ವಶಕ್ಕೆ ತೆಗೆದುಕೊಂಡಿದ್ದರು. ಆದರೆ ಅರ್ಜುನನ್ ವಾಪಸ್ ಬರದೇ ಇದ್ದುದರಿಂದ ಆತನ ಪತ್ನಿ ಮರಿಯಮ್ಮಾಳ್ ಆತ್ಮಹತ್ಯೆ ಮಾಡಿಕೊಂಡಿದ್ದಳು.
ತನ್ನ ತಂದೆಯ ಪ್ರಸಕ್ತ ಸ್ಥಿತಿ ಇದುವರೆಗೂ ನಿಗೂಢವಾಗಿಯೇ ಉಳಿದಿದೆ. ಯಾರೊಬ್ಬರೂ ತನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ ಎಂದಿರುವ ಸತೀಶ್ ಕೈಯಿಂದ ಮುಖ್ಯಮಂತ್ರಿಗೆ ಸಲ್ಲಿಸಲೆಂದು ತಂದಿದ್ದ ಪತ್ರವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ತನ್ನ ತಂದೆಯನ್ನು ಪತ್ತೆ ಹಚ್ಚುವುದು ಮತ್ತು ಕುಟುಂಬಕ್ಕೆ ಪರಿಹಾರವನ್ನು ಪಡೆದುಕೊಳ್ಳುವ ಕುರಿತು ಮುಖ್ಯಮಂತ್ರಿಯವರಿಗೆ ಮನವಿ ಮಾಡಿರುವುದು ಪತ್ರದಲ್ಲಿ ನಮೂದಾಗಿದೆ.
ಆತ ನೀಡಿದ ಮಾಹಿತಿಗಳು ನಂಬಲರ್ಹ ಎಂದು ತಿಳಿದು ಬಂದ ನಂತರ ಮುಖ್ಯಮಂತ್ರಿಯವರ ಅಧಿಕೃತ ನಿವಾಸದಲ್ಲಿ ಮನವಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ನಂತರ ತನ್ನೂರು ಕೃಷ್ಣಗಿರಿ ಜಿಲ್ಲೆಯ ಅಟ್ಟಾಪಕ್ಕಂ ಗ್ರಾಮಕ್ಕೆ ತೆರಳಿದ್ದಾನೆ. ಯಾವುದೇ ಪ್ರಕರಣವನ್ನು ದಾಖಲಿಸಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
2000 ಆನೆಗಳು, 120 ಮನುಷ್ಯರನ್ನು ಕೊಂದು ಹಾಕಿದ್ದ ನರಹಂತಕ ವೀರಪ್ಪನ್‌ನನ್ನು 2004ರಲ್ಲಿ ತಮಿಳುನಾಡು ಪೊಲೀಸರು ಕೊಂದು ಹಾಕಿದ್ದರು. ಈತನ ಆಟೋಪಗಳನ್ನು ಕೊನೆಗೊಳಿಸಲು ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ವ್ಯಯಿಸಿದ್ದವು.