ಬಾತಿಂಡಾ, ಶುಕ್ರವಾರ, 17 ಸೆಪ್ಟೆಂಬರ್ 2010( 18:45 IST )
ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡುವುದು ಸಾಮಾನ್ಯ ತಾನೇ. ಕೆಲವು ಮಕ್ಕಳಂತೂ ಹತ್ತು ವರ್ಷಗಳಾಗುವವರೆಗೂ ಇಂತಹ ಅಭ್ಯಾಸವನ್ನು ಬಿಟ್ಟಿರುವುದಿಲ್ಲ. ಆದರೆ ಪಂಜಾಬ್‌ನ ಧೂರ್ತ ತಂದೆಯೊಬ್ಬ ಮಗನನ್ನು ಅದೇ ಕಾರಣಕ್ಕಾಗಿ ಹೊಡೆದು ಹೊಡೆದು ಕೊಂದು ಹಾಕಿದ್ದಾನೆ.
ಏಳು ವರ್ಷದ ಮಾನಸಿಕ ಮತ್ತು ದೈಹಿಕ ಅಶಕ್ತನಾಗಿರುವ ಬಾಲಕನನ್ನು ಆತನ ತಂದೆ ಗುರ್ಮೀತ್ ಸಿಂಗ್ ಸೆಪ್ಟೆಂಬರ್ 10ರಂದು ಹತ್ಯೆ ಮಾಡಿದ್ದ. ಅಲ್ಲದೆ ಈ ವಿಚಾರವನ್ನು ಯಾರಲ್ಲೂ ಹೇಳಬಾರದು ಎಂದು ತನ್ನ ಪತ್ನಿ ಹಾಗೂ ಬಾಲಕನ ತಾಯಿ ಬಾಬಿ ಕೌರ್‌ಗೆ ಬೆದರಿಕೆ ಹಾಕಿದ್ದ.
ಮಗು ಹಾಸಿಗೆಯಲ್ಲೇ ಮೂತ್ರ ಮಾಡಿದ್ದು ಗಮನಕ್ಕೆ ಬಂದ ನಂತರ ಕೋಪೋದ್ರಿಕ್ತನಾಗಿದ್ದ ಗುರ್ಮೀತ್ ಮನ ಬಂದಂತೆ ಥಳಿಸಿದ್ದ. ಆತನ ರಾಕ್ಷಸೀ ಪ್ರವೃತ್ತಿ ಮಗು ಕೊನೆಯುಸಿರೆಳೆಯುವವರೆಗೂ ಮುಂದುವರಿದಿತ್ತು. ಮಗು ಸಾವನ್ನಪ್ಪಿದ ನಂತರ ಮನೆಯ ಆವರಣದೊಳಗೆ ಗುಂಡಿ ತೆಗೆದು ಹೂತು ಹಾಕಿ, ಪತ್ನಿಯನ್ನು ಬಾಯ್ಮುಚ್ಚಿಕೊಂಡು ಸುಮ್ಮನಿರುವಂತೆ ಆಜ್ಞಾಪಿಸಿದ್ದ.
ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮನೆಗೆ ತೆರಳಿ, ಮಗುವಿನ ಶವ ಹೊರ ತೆಗೆದಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಇಷ್ಟಾಗುತ್ತಿದ್ದಂತೆ ಆರೋಪಿ ತಂದೆ ನಾಪತ್ತೆಯಾಗಿದ್ದಾನೆ. ಆತನ ಪತ್ತೆಗಾಗಿ ಪೊಲೀಸರು ಹಲವು ತಂಡಗಳನ್ನು ರಚಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯೆ ನೀಡಿರುವ ತಾಯಿ, ನನ್ನ ಮಗನನ್ನು ನನ್ನ ಎದುರೇ ನನ್ನ ಗಂಡ ಕ್ರೂರವಾಗಿ ಬಡಿದು ಕೊಂದು ಹಾಕಿದ; ಆ ಪರಿಸ್ಥಿತಿ ಹೇಗಿತ್ತೆಂದರೆ ನನ್ನನ್ನು ಅಳುವುದಕ್ಕೂ ಗಂಡ ಬಿಟ್ಟಿರಲಿಲ್ಲ. ಅಷ್ಟಕ್ಕೂ ನನ್ನ ಮಾಡಿದ್ದ ಏಕೈಕ ತಪ್ಪೆಂದರೆ ಹಾಸಿಗೆ ಮೇಲೆ ಮೂತ್ರ ಮಾಡಿದ್ದು ಎಂದಿದ್ದಾರೆ.