ಮಧ್ಯಪ್ರದೇಶದಲ್ಲಿ ಪ್ರವಾಹದಿಂದ ತುಂಬಿ ಹರಿಯುತ್ತಿದ್ದ ನದಿಗೆ 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊಂದಿದ್ದ ಬಸ್ಸೊಂದು ಉರುಳಿ ಬಿದ್ದ ಪರಿಣಾಮ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಗಳು ಹೇಳಿವೆ.
ರಾಜ್ಯದ ದೇವಾಸ್ ಜಿಲ್ಲೆಯಲ್ಲಿನ ಇಂದೋರ್ - ಬೇತುಲ್ ಹೆದ್ದಾರಿಯಲ್ಲಿ ಬರುವ ಬಾಗ್ದಿ ನದಿಯನ್ನು ದಾಟುತ್ತಿರುವ ಹೊತ್ತಿನಲ್ಲಿ ಈ ದುರ್ಘಟನೆ ಸಂಭವಿಸಿದೆ.
ಅಪಘಾತಕ್ಕೆ ನಿರ್ದಿಷ್ಟ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ಆದರೆ ಮೂಲಗಳ ಪ್ರಕಾರ ಸೇತುವೆಯ ಮೇಲೆ ಒಂದು ಅಡಿಗೂ ಹೆಚ್ಚು ನೀರಿದ್ದ ಸಂದರ್ಭದಲ್ಲಿ ಬಸ್ಸನ್ನು ಚಲಾಯಿಸಲಾಗಿತ್ತು. ಈ ಹಂತದಲ್ಲಿ ಚಾಲಕ ನಿಯಂತ್ರಣ ಕಳೆದುಕೊಂಡಿದ್ದರಿಂದ ಬಸ್ ನೀರಿಗೆ ಉರುಳಿತು ಎಂದು ಹೇಳಲಾಗಿದೆ.
ಸೇತುವೆಯ ಬದಿಗಳಲ್ಲಿ ತಡೆಯಿಲ್ಲದಿದ್ದುದರಿಂದ ಚಾಲಕನಿಗೆ ಅಂಚು ತಿಳಿಯದಿರುವ ಸಾಧ್ಯತೆಗಳಿವೆ. ಅಂಚು ಇದ್ದಿದ್ದಿದ್ದರೆ ಬಸ್ಸು ಉರುಳುತ್ತಿರಲಿಲ್ಲ ಎಂದು ವರದಿಗಳು ಹೇಳಿವೆ.
ಬಸ್ ನದಿಗೆ ಬೀಳುತ್ತಿದ್ದಂತೆ ಸುಮಾರು 25 ಮಂದಿ ಅಪಾಯದಿಂದ ಪಾರಾಗಿದ್ದಾರೆ. ಸುಮಾರು 52 ಮಂದಿ ಕಾಣೆಯಾಗಿದ್ದಾರೆ. 16 ಮಂದಿಯ ಶವ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವನ್ನಪ್ಪಿದವರ ಸಂಬಂಧಿಕರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರವನ್ನು ಈಗಾಗಲೇ ಸರಕಾರ ಘೋಷಿಸಿದೆ.