ಹೈದರಾಬಾದ್, ಶನಿವಾರ, 18 ಸೆಪ್ಟೆಂಬರ್ 2010( 09:28 IST )
ದಿಕ್ಕು-ದೆಸೆಯಿಲ್ಲದವರಿಗೆ ಆಸರೆಯಾಗುತ್ತೇನೆ ಎಂದು ಮುಂದೆ ನಿಂತು ಅನಾಥಾಶ್ರಮವೊಂದನ್ನು ತೆರೆದಿದ್ದ ವ್ಯಕ್ತಿಯೊಬ್ಬ ಅಪ್ರಾಪ್ತ ಬಾಲಕಿಯರನ್ನು ಲೈಂಗಿಕ ಶೋಷಣೆಗೊಳಪಡಿಸಿದ್ದಾನೆ ಎಂದು ಆರೋಪಿಸಿ ಆಂಧ್ರಪ್ರದೇಶ ಪೊಲೀಸರು ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿದ್ದಾರೆ.
ವನಸ್ತಾಲಿಪುರಂನಲ್ಲಿನ ಟಿವಿ ಕಾಲನಿಯಲ್ಲಿದ್ದ 'ಸೊಸೈಟಿ ಫಾರ್ ಇಂಟೆಗ್ರೆಟೆಡ್ ರೂರಲ್ ಇಂಪ್ರೂವ್‌ಮೆಂಟ್ ಆಕ್ಷನ್' (SIRIA- ಸಿರಿಯಾ) ಎಂಬ ಅನಾಥಾಶ್ರಮ ಸಂಸ್ಥೆಯನ್ನು ಹುಟ್ಟು ಹಾಕಿದ್ದ ಎಂ. ಮಲಯಾದ್ರಿ (37) ಎಂಬಾತನೇ ಬಂಧಿತ. ಸ್ಥಳೀಯ ಟಿವಿ ಚಾನೆಲ್‌ವೊಂದು ನಡೆಸಿದ ಅಣಕು ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದ ನಂತರ ಮಲಯಾದ್ರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಐವರು ವಿದ್ಯಾರ್ಥಿಗಳೊಂದಿಗೆ 2006ರಲ್ಲಿ ಆರಂಭವಾಗಿದ್ದ ಈ ಅನಾಥಾಶ್ರಮವು ಪ್ರಸಕ್ತ ಐದರಿಂದ 15 ವರ್ಷಗಳ ನಡುವಿನ 125 ಅನಾಥ ವಿದ್ಯಾರ್ಥಿಗಳನ್ನು ಹೊಂದಿದೆ. ಅವರಲ್ಲಿ 95 ಮಂದಿ ಬಾಲಕಿಯರು.
ಇದನ್ನು ನಡೆಸುತ್ತಿರುವ ಮಲಯಾದ್ರಿ ವಿರುದ್ಧ ಅನೇಕ ಆರೋಪಗಳಿದ್ದ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯೊಂದು ತಂತ್ರ ರೂಪಿಸಿ ಬಲೆಗೆ ಕೆಡವಿತ್ತು. ಗಣ್ಯ ವ್ಯಕ್ತಿಯ ಹುಟ್ಟುಹಬ್ಬಕ್ಕಾಗಿ ಹುಡುಗಿಯರನ್ನು ಕಳುಹಿಸುವ ಕುರಿತು ಪ್ರಸ್ತಾಪಿಸಿ ಒಳಮರ್ಮವನ್ನು ಬಹಿರಂಗಪಡಿಸಲಾಗಿತ್ತು.
ಈ ಕುರಿತು ವಿವರಣೆ ನೀಡಿರುವ ಇಲ್ಲಿನ ಎಸಿಪಿ ಬಿ. ಶ್ರೀನಿವಾಸ ರೆಡ್ಡಿ, 'ಮಾಧ್ಯಮ ಪ್ರತಿನಿಧಿಗಳ ಪ್ರಕಾರ ಆರೋಪಿ ಮಲಯಾದ್ರಿ 11 ಹುಡುಗಿಯರನ್ನು ಅಪರಾಹ್ನ 3.30ಕ್ಕೆ ಕಳುಹಿಸಿ, ಅವರನ್ನು ಸಂಜೆ ಆರು ಗಂಟೆಯೊಳಗೆ ವಾಪಸ್ ಕಳುಹಿಸುವಂತೆ ಸೂಚಿಸಿ 2,000 ರೂಪಾಯಿ ವಸೂಲಿ ಮಾಡಿದ್ದ. ಬಾಲಕಿಯರನ್ನು ನೋಡಿಕೊಳ್ಳಲು ತನ್ನ ನೌಕರ ಪ್ರವೀಣ್ ಎಂಬಾತನನ್ನೂ ಜತೆಗೆ ಕಳುಹಿಸಿದ್ದ' ಎಂದಿದ್ದಾರೆ.
ಹಲವು ಶ್ರೀಮಂತ ವ್ಯಕ್ತಿಗಳು ತಮ್ಮ ಮಕ್ಕಳ ಹುಟ್ಟುಹಬ್ಬಗಳನ್ನು ಆಚರಿಸಿಕೊಳ್ಳುವ ಸಂದರ್ಭದಲ್ಲಿ ತಮ್ಮ ಮನೆಗಳಿಗೆ ಅನಾಥಾಶ್ರಮಗಳಿಂದ ಮಕ್ಕಳನ್ನು ಕರೆಸಿಕೊಳ್ಳುತ್ತಾರೆ. ಇಂತಹ ಸಂದರ್ಭಗಳಲ್ಲಿ ಅನಾಥಾಶ್ರಮಗಳು, ಹುಟ್ಟುಹಬ್ಬ ಆಚರಿಸುವ ಕುಟುಂಬಗಳ ಹಿನ್ನೆಲೆ ಮತ್ತಿತರ ವಿಚಾರಗಳನ್ನು ಪರಿಶೀಲನೆ ನಡೆಸಿದ ನಂತರವಷ್ಟೇ ಮಕ್ಕಳನ್ನು ಕಳುಹಿಸುತ್ತವೆ. ಆದರೆ ಮಲಯಾದ್ರಿ ಇದ್ಯಾವುದನ್ನೂ ಮಾಡಿಲ್ಲ ಎಂದು ವರದಿಗಳು ಹೇಳಿವೆ.
ಅನಾಥಾಶ್ರಮದಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಚಾನೆಲ್ ವರದಿ ಮಾಡಿದ ಬೆನ್ನಿಗೆ ಸ್ಥಳಕ್ಕೆ ತೆರಳಿದ ಪೊಲೀಸರು, ಎಂಟು ವಿದ್ಯಾರ್ಥಿನಿಯರಿಂದ ಹೇಳಿಕೆಗಳನ್ನು ಪಡೆದುಕೊಂಡು ಆರೋಪಿಯನ್ನು ಬಂಧಿಸಿದರು.
ಈ ಬಾಲಕಿಯರು ನೀಡಿರುವ ಮಾಹಿತಿಗಳ ಪ್ರಕಾರ, ಮಲಯಾದ್ರಿ ತನ್ನ ಕೊಠಡಿಗೆ ವಿದ್ಯಾರ್ಥಿನಿಯರನ್ನು ಕರೆಸಿಕೊಂಡು ಮುಟ್ಟಬಾರದ ಜಾಗಗಳಲ್ಲಿ ತಡಕಾಡುತ್ತಾನೆ. ಹಾಗೊಂದು ವೇಳೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದಲ್ಲಿ ಮುಖಕ್ಕೆ ನೇರವಾಗಿ ಉಗಿಯುತ್ತಾನೆ. ಕೆಲವೊಂದು ಬಾರಿ ಥಳಿಸಿದ್ದು ಕೂಡ ಇದೆಯಂತೆ.
ಆರೋಪಿಯ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು, ವಿದ್ಯಾರ್ಥಿನಿಯರನ್ನು ಇಲ್ಲಿನ ಸರಕಾರಿ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ.