ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶುಭಸುದ್ದಿ; ಮಾರಕ ಕ್ಯಾನ್ಸರ್ ರೋಗಕ್ಕೆ ಬರಲಿದೆ ರಾಮಬಾಣ (Drug to cancer | PLX4032 | melanoma | penicillin)
Bookmark and Share Feedback Print
 
ಬ್ರಿಟೀಷ್ ವಿಜ್ಞಾನಿಗಳು ಮಹತ್ತರವಾದ ಔಷಧಿಯೊಂದನ್ನು ಕಂಡು ಹಿಡಿದ ಸಂತಸದಲ್ಲಿದ್ದಾರೆ. ಅರ್ಬುದ ರೋಗಕ್ಕೆ ಇದುವರೆಗೆ ಕಂಡು ಹಿಡಿಯಲಾದ ಎಲ್ಲಾ ಔಷಧಿಗಳಿಗಿಂತ ಹೆಚ್ಚಿನ ಫಲಿತಾಂಶವನ್ನು ನೀಡುವ 'PLX4032' ಎಂಬುದೇ ವಿಜ್ಞಾನಿಗಳ ಸಂಶೋಧನೆ.

ಈ ಹಿಂದೆ ಜೀವರಕ್ಷಕ ಎಂದೇ ಪರಿಗಣಿಸಲಾಗಿದ್ದ ಪೆನಿಸಿಲಿನ್ ಪತ್ತೆಗೆ ಹೋಲಿಸಿದರೆ, ಇದು ಮಹತ್ವದ ವೈಜ್ಞಾನಿಕ ಮುನ್ನಡೆ ಎಂದು ಪರಿಗಣಿಸಲಾಗಿದೆ. ಇದು ನೇರವಾಗಿ ಕ್ಯಾನ್ಸರ್ ಆವರಿಸಿರುವ ದೇಹದ ಭಾಗದ ಮೇಲೆ ತನ್ನ ಪರಿಣಾಮವನ್ನುಂಟು ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ಪಿಎಲ್ಎಕ್ಸ್4032 ಮದ್ದು ಚರ್ಮ ಕ್ಯಾನ್ಸರ್‌ಗೆ ರಾಮಬಾಣವಾಗುವುದು ಖಚಿತವಾಗಿದೆ. ಚರ್ಮದಲ್ಲಿನ ಶೇ.80ರಷ್ಟು ಕ್ಯಾನ್ಸರ್ ಕಾರಕಗಳನ್ನು ಈ ಔಷಧಿ ನಿವಾರಣೆ ಮಾಡುತ್ತದೆ. ಇದೇ ಮದ್ದನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ಮೂಲಕ ಎಲ್ಲಾ ವಿಧದ ಕ್ಯಾನ್ಸರ್ ರೋಗಗಳಿಗೂ ಬಳಸುವ ಕುರಿತು ವಿಜ್ಞಾನಿಗಳು ಸಂಶೋಧನೆ ಮುಂದುವರಿಸಿದ್ದಾರೆ.

ಆದರೆ ಈ ಬಗ್ಗೆ ಭಾರತೀಯ ವಿಜ್ಞಾನಿಗಳು ಮತ್ತು ತಜ್ಞ ವೈದ್ಯರುಗಳು ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಸಕ್ತ ಕಂಡು ಹಿಡಿಯಲಾಗಿರುವ ಔಷಧಿಯನ್ನು ರೋಗಿಯ ಮೇಲೆ ಪ್ರಯೋಗಿಸಿದ ಸಂದರ್ಭದಲ್ಲಿ ಎದುರಾಗಬಹುದಾದ ಪ್ರತಿಕೂಲ ಪರಿಣಾಮಗಳೇನು? ಇದು ಸುದೀರ್ಘ ಬಳಕೆಗೆ ಅರ್ಹವೇ? ಮದ್ದಿನಿಂದ ದೇಹದಲ್ಲಿ ಯಾವ ರೀತಿಯ ನಿರ್ದಿಷ್ಟ ಮಾರ್ಪಾಡುಗಳು ಕಂಡು ಬರುತ್ತವೆ ಎಂಬುದು ಖಚಿತವಾದ ನಂತರವಷ್ಟೇ ಪಿಎಲ್ಎಕ್ಸ್4032 ಔಷಧಿ ಎಷ್ಟು ಉಪಯೋಗಕಾರಿ ಎಂದು ಹೇಳಬಹುದು ಎಂದು ಚೆನ್ನೈ ಮತ್ತು ಮುಂಬೈಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಆದರೆ ಇದನ್ನು ಸಂಶೋಧನೆ ಮಾಡಿರುವ ತಜ್ಞರ ಪ್ರಕಾರ ತಾವು ಪ್ರಾಯೋಗಿಕವಾಗಿ ಬಳಸಿದ ಸಂದರ್ಭದಲ್ಲಿ ಅದ್ಭುತ ಫಲಿತಾಂಶವನ್ನೇ ಪಡೆದಿದ್ದೇವೆ ಎಂದಿದ್ದಾರೆ. ಇವರು ಪಿಎಲ್ಎಕ್ಸ್4032 ಔಷಧಿಯನ್ನು ಬಳಸಿರುವುದು 32 ಪುರುಷರು ಮತ್ತು ಮಹಿಳೆಯರ ಮೇಲೆ. ಅವರಲ್ಲಿ 24 ಮಂದಿಯ ಕ್ಯಾನ್ಸರ್ ಕೌತುಕ ಹುಟ್ಟಿಸುವ ರೀತಿಯಲ್ಲಿ ಕಡಿಮೆಯಾಗಿದೆ. ಎರಡು ಮಂದಿ ರೋಗಿಗಳಂತೂ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ವಿವರಣೆ ನೀಡಿದ್ದಾರೆ.

ಈಗ ಬ್ರಿಟನ್‌ನಲ್ಲಿ ಮತ್ತೊಂದು ಸುತ್ತಿನ ಬೃಹತ್ ಪ್ರಯೋಗವನ್ನು ಮಾಡಲಾಗುತ್ತಿದೆ. ಇಲ್ಲಿ ಬ್ರಿಟನ್ ಪ್ರಜೆಗಳೂ ಸೇರಿದಂತೆ ಸುಮಾರು 700 ರೋಗಿಗಳ ಮೇಲೆ ಪಿಎಲ್ಎಕ್ಸ್4032 ಔಷಧಿಯನ್ನು ಪ್ರಯೋಗಿಸಲಾಗುತ್ತಿದೆ. ಒಂದು ವೇಳೆ ಇದು ಯಶಸ್ವಿಯಾದಲ್ಲಿ ಮುಂದಿನ ವರ್ಷದ ಹೊತ್ತಿಗೆ ಔಷಧಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಎಂದು ಲಂಡನ್‌ನ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ಪ್ರೊಫೆಸರ್ ಮರಾಯಿಸ್ ತಿಳಿಸಿದ್ದಾರೆ.

ಇದೀಗ ಪಿಎಲ್ಎಕ್ಸ್4032 ಔಷಧಿಯಲ್ಲಿ ವಿಜ್ಞಾನಿಗಳು ಮಹತ್ವದ ಮುನ್ನಡೆ ಸಾಧಿಸಿರುವುದು ಮಾರಣಾಂತಿಕ ಚರ್ಮದ ಕ್ಯಾನ್ಸರ್ ರೋಗದಲ್ಲಿ. ಈ ರೋಗದ ಕೊನೆಯ ಹಂತಕ್ಕೆ ತಲುಪಿದ ಅಂದರೆ ಬಹುತೇಕ ಇಡೀ ದೇಹಕ್ಕೆ ರೋಗ ವ್ಯಾಪಿಸಿರುವಂತಹ ರೋಗಿಗಳನ್ನು ಪ್ರಯೋಗಕ್ಕೆ ಬಳಸಿಕೊಳ್ಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ