ಜಮ್ಮು-ಕಾಶ್ಮೀರದಲ್ಲಿ ಭಾರೀ ಪ್ರಮಾಣದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ, ಜನತೆಯ ಅಭಿಪ್ರಾಯಕ್ಕೆ ಮನ್ನಣೆ ಕೊಡಲಾಗುತ್ತಿಲ್ಲ ಎಂಬ ಪಾಕಿಸ್ತಾನದ ಅಭಿಪ್ರಾಯವನ್ನು ತಳ್ಳಿ ಹಾಕಿರುವ ಭಾರತ, ತನ್ನ ದೇಶದ ಆಂತರಿಕ ವಿಚಾರಗಳಲ್ಲಿ ಯಾರ ಸಲಹೆಯೂ ಬೇಕಿಲ್ಲ ಎಂದು ತಿರುಗೇಟು ನೀಡಿದೆ.
ಪಾಕಿಸ್ತಾನವು ಭಾರತಕ್ಕೆ ಸಲಹೆಗಳನ್ನು ನೀಡುವ ಬದಲು ತನ್ನಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡುವತ್ತ ಗಮನ ಹರಿಸಲಿ. ತನ್ನ ನೆಲದಿಂದ ಭಾರತದ ನೆಲಕ್ಕೆ ನಿಯಂತ್ರಣ ರೇಖೆಯುದ್ದಕ್ಕೂ ನಡೆಯುತ್ತಿರುವ ಒಳ ನುಸುಳುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲಿ. ತನ್ನ ದೇಶದಿಂದ ನಿಯಂತ್ರಿತವಾಗುತ್ತಿರುವ, ಅಲ್ಲೇ ಮೂಲಭೂತ ಸೌಲಭ್ಯಗಳನ್ನು ಮಾಡಿಕೊಂಡಿರುವ ಭಯೋತ್ಪಾದಕರಿಗೆ ನೆಲೆಯಿಲ್ಲದಂತೆ ಮಾಡಲಿ ಎಂದು ವಿದೇಶಾಂಗ ಇಲಾಖೆಯು ಖಾರವಾಗಿ ಪ್ರತಿಕ್ರಿಯೆ ನೀಡಿದೆ.
ಜಮ್ಮು-ಕಾಶ್ಮೀರದಲ್ಲಿ 'ಅತಿಯಾದ ಹಸ್ತಕ್ಷೇಪ ಬೇಡ' ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಶಾಹ್ ಮೆಹಮೂದ್ ಖುರೇಷಿ ಹೇಳಿರುವುದನ್ನು ಉಲ್ಲೇಖಿಸುತ್ತಾ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ವಿಷ್ಣುಪ್ರಕಾಶ್ ಅವರು, ಪಾಕ್ ಸಲಹೆಯನ್ನು ತಳ್ಳಿ ಹಾಕಿದ್ದಾರೆ. ಅಲ್ಲದೆ ಇದು ನಮ್ಮ ಆಂತರಿಕ ವಿಚಾರವಾಗಿರುವುದರಿಂದ ಪಾಕ್ ನೀಡಿರುವುದು ಅನಪೇಕ್ಷಿತ ಹೇಳಿಕೆ ಎಂದು ಅವರು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣಾ ರೇಖೆಯಲ್ಲಿ ತನ್ನ ದೇಶದಿಂದ ಪ್ರಚೋದಿಸಲ್ಪಡುವ ಭಯೋತ್ಪಾದನೆಯಿಂದ ಜಮ್ಮು-ಕಾಶ್ಮೀರದ ಜನತೆ ನರಳುತ್ತಿದ್ದಾರೆ. ಹಾಗಾಗಿ ತನ್ನ ನೆಲದಲ್ಲಿನ ಉಗ್ರರನ್ನು ಮಟ್ಟ ಹಾಕಿದಲ್ಲಿ ಅದೇ ಕಾಶ್ಮೀರ ಜನತೆಗೆ ಪಾಕ್ ನೀಡುವ ಮಹತ್ವದ ಕೊಡುಗೆಯೆನಿಸುತ್ತದೆ ಎಂದು ವಿಷ್ಣುಪ್ರಕಾಶ್ ತೀಕ್ಷ್ಣವಾಗಿ ನುಡಿದರು.
ತನ್ನ ದೇಶದ ಯಾವುದೇ ಭಾಗದ ನಾಗರಿಕರು ವ್ಯಕ್ತಪಡಿಸುವ ಅಭಿಪ್ರಾಯಗಳನ್ನು ಭಾರತ ಗೌರವಿಸುತ್ತದೆ. ಅವರ ಸಮಸ್ಯೆಗಳನ್ನು ಸಾಂವಿಧಾನಿಕ ಚೌಕಟ್ಟಿನಲ್ಲಿ ಪರಿಹಾರ ಮಾಡಲು ಪ್ರಜಾಪ್ರಭುತ್ವ ನೀತಿ ಹೊಂದಿರುವ ಭಾರತ ಸಮರ್ಥವಾಗಿದೆ ಎಂದಿದ್ದಾರೆ.
ಕಾಶ್ಮೀರದ ಜನತೆಯ ಹಿತಕ್ಕಾಗಿ ಅವರನ್ನು ಬೆಂಬಲಿಸುವುದನ್ನು ಪಾಕಿಸ್ತಾನ ಮುಂದುವರಿಸುತ್ತದೆ ಎಂದು ಸಚಿವ ಖುರೇಷಿ ಹೇಳಿದ್ದರು. ಕಾಶ್ಮೀರದಲ್ಲಿ ಪ್ರಸಕ್ತ ನಡೆಯುತ್ತಿರುವ ಮಾನವ ಹಕ್ಕುಗಳ ಒಟ್ಟಾರೆ ಮತ್ತು ವ್ಯವಸ್ಥಿತ ಉಲ್ಲಂಘನೆಗಳು ಕೊನೆಗೊಳ್ಳಬೇಕು. ಭಾರತ ಸರಕಾರವು ಅಲ್ಲಿ ಅತಿಯಾದ ಹಸ್ತಕ್ಷೇಪ ನಡೆಸಬಾರದು ಎಂದು ಪಾಕಿಸ್ತಾನ ಕರೆ ನೀಡುತ್ತಿದೆ ಎಂದು ಸಚಿವರು ಉದ್ಧಟತನದ ಹೇಳಿಕೆ ನೀಡಿದ್ದುರ.