ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೇಜರ್ ವಿಧವಾ ಪತ್ನಿಗೆ 80 ರೂ. ಮಾಸಾಶನ; ಸುಪ್ರೀಂ ತರಾಟೆ
(Apex court | Indian Army | Pushpa Vanti | Major Dharam Chand)
ಎರಡೆರಡು ಯುದ್ಧಗಳಲ್ಲಿ ಭಾರತದ ಪರವಾಗಿ ಹೋರಾಡಿದ್ದ ಯೋಧರೊಬ್ಬರ ವೃದ್ಧ ವಿಧವಾ ಪತ್ನಿಗೆ ಕೇವಲ 80 ರೂಪಾಯಿ ಮಾಸಾಶನ ನೀಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
1962 ಮತ್ತು 1965ರ ಯುದ್ಧಗಳಲ್ಲಿ ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಕಾರ್ಯನಿರ್ವಹಿಸಿದ್ದ ಧರಂಚಂದ್ ಎಂಬವರ ಪತ್ನಿ ಪುಷ್ಪಾವಂತಿ ಎಂಬ 90ರ ಹರೆಯದ ವೃದ್ಧೆ ನ್ಯಾಯಾಲಯ ಮೆಟ್ಟಿಲೇರಿದ್ದರು.
ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಪೀಠವು, ಈಗಿನ ದಿನಗಳಲ್ಲಿ 80 ರೂಪಾಯಿಗೆ ಒಂದು ಕೇಜಿ ಅಕ್ಕಿಯನ್ನು ಖರೀದಿಸುವುದೂ ಕಷ್ಟ. ಅಂತದ್ದರಲ್ಲಿ ಕೇವಲ 80 ರೂಪಾಯಿಗಳ ಮಾಸಾಶನದಲ್ಲಿ ಏನು ಬರುತ್ತದೆ. ಸರಕಾರದಲ್ಲಿ ಏನು ನಡೆಯುತ್ತಿದೆ ಎಂದು ಪ್ರಶ್ನಿಸಿತು.
1937ರಲ್ಲಿ ಬ್ರಿಟೀಷ್ ಇಂಡಿಯಾ ಆರ್ಮಿ ಸೇರಿದ್ದ ಧರಂಚಂದ್, 1946ರಲ್ಲಿ ಜೂನಿಯರ್ ಕಮಿಷನ್ಡ್ ಆಫೀಸರ್ ಆಗಿ ಭಡ್ತಿ ಹೊಂದಿದ್ದರು. 1948ರಲ್ಲಿ ಅವರು ಶಾಶ್ವತ ಆಯೋಗಕ್ಕೆ ನೇಮಕಗೊಂಡಿದ್ದರು.
ಎರಡನೇ ವಿಶ್ವಯುದ್ಧ, 1962 ಮತ್ತು 1965ರ ಚೀನಾ ಮತ್ತು ಪಾಕಿಸ್ತಾನ ವಿರುದ್ಧಗಳ ಯುದ್ಧಗಳಲ್ಲಿ ಪಾಲ್ಗೊಂಡಿದ್ದ ಅವರು 1967ರ ಮಾರ್ಚ್ 1ರಂದು ನಿಧನರಾದ ನಂತರ ಅವರ ಪತ್ನಿಗೆ ಪ್ರತಿ ತಿಂಗಳು ಕೇವಲ 80 ರೂಪಾಯಿಗಳನ್ನು ಮಾಸಾಶನವೆಂದು ನೀಡಲಾಗುತ್ತಿದೆ ಎಂದು ವಕೀಲ ಬಿ.ಬಿ. ಟ್ರಿಕಾ ಹೇಳಿದ್ದರು.
ಸಿಪಾಯಿಗಳ ಕುಟುಂಬಗಳು 150 ರೂಪಾಯಿಗಳಿಗೂ ಹೆಚ್ಚು ಪಿಂಚಣಿ ಪಡೆಯುತ್ತಿವೆ. ಆದರೆ ನನಗೆ ಮಾತ್ರ ಕೇವಲ 80 ರೂಪಾಯಿಗಳನ್ನು ನೀಡಲಾಗುತ್ತಿದೆ. ಇತ್ತೀಚಿನ ವೇತನಾ ಆಯೋಗದ ಶಿಫಾರಸುಗಳ ಪ್ರಕಾರ ನಾನು ಪ್ರತಿ ತಿಂಗಳು 27,000 ರೂಪಾಯಿಗಳನ್ನು ಪಡೆಯಲು ಅರ್ಹಳಾಗಿದ್ದೇನೆ ಎಂದು ಮೇಜರ್ ಪತ್ನಿ ವಾದಿಸಿದ್ದಾರೆ.
ಈ ಬಗ್ಗೆ ನಾನು ಈಗಾಗಲೇ ಸೇನೆ ಮತ್ತು ರಕ್ಷಣಾ ಸಚಿವಾಲಯಗಳ ಗಮನ ಸೆಳೆದಿದ್ದೇನೆ. ಆರಂಭದಲ್ಲಿ ಮನವಿಗಳಿಗೆ ಸ್ಪಂದಿಸುತ್ತಿದ್ದ ಇಲಾಖೆಗಳು ಈಗ ಕಣ್ಣೆತ್ತಿಯೂ ನೋಡುತ್ತಿಲ್ಲ. ನನ್ನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ತನ್ನ ಅಳಲನ್ನು ಪುಷ್ಪಾವಂತಿ ನ್ಯಾಯಾಲಯದಲ್ಲಿ ತೋಡಿಕೊಂಡರು.
ನಿಮಗೆ ಶೀಘ್ರದಲ್ಲೇ ನ್ಯಾಯ ಒದಗಿಸುವ ಭರವಸೆ ನೀಡುತ್ತೇವೆ ಎಂದು ನ್ಯಾಯಾಧೀಶರು ಈ ಸಂದರ್ಭದಲ್ಲಿ ವೃದ್ಧೆಗೆ ಭರವಸೆ ನೀಡಿದ್ದಾರೆ.