ನವದೆಹಲಿಯ ಜಾಮಾ ಮಸೀದಿಯ ಸಮೀಪ ಟೂರಿಸ್ಟ್ ಬಸ್‌ವೊಂದಕ್ಕೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ವರದಿಯಾಗಿದೆ. ಘಟನೆಯಲ್ಲಿ ಇಬ್ಬರು ವಿದೇಶಿ ಪ್ರಜೆಗಳಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಬೈಕ್‌ನಿಂದ ಬಂದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಜಾಮಾ ಮಸೀದಿಯ ಗೇಟ್ ನಂಬರ್ 3ರ ಬಳಿ ಘಟನೆ ನಡೆದಿದೆ.
ಇಬ್ಬರು ತೈವಾನ್‌ನ ಪ್ರಜೆಗಳಿಗೆ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಎಲ್ಲಾ ಯಾತ್ರಿಕರನ್ನು ಸುರಕ್ಷಿತ ಪ್ರದೇಶಕ್ಕೆ ರವಾನಿಸಲಾಗಿದೆ. ಆದರೆ ದಾಳಿ ಹಿಂದಿನ ನಿಖರ ಕಾರಣವೇನೆಂಬುದು ತಿಳಿದು ಬಂದಿಲ್ಲ.
ವರದಿಗಳ ಪ್ರಕಾರ ಪ್ರವಾಸಿಗರ ಸಂಖ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಅಥವಾ ಭದ್ರತಾ ಲೋಪವೆಸಗಲು ಟೂರಿಸ್ಟ್ ಬಸ್‌ನ ಮೇಲೆ ಗುಂಡಿನ ದಾಳಿ ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಇದೀಗ ಪ್ರದೇಶದಲ್ಲಿ ಪ್ರವಾಸಿಗರು ಬರುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಮುಂದಿನ ತಿಂಗಳು ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ನಡೆಯುತ್ತಿರುವಂತೆಯೇ ದುಷ್ಕರ್ಮಿಗಳ ಈ ದಾಳಿ ರಾಷ್ಟ್ರ ರಾಜಧಾನಿಯಲ್ಲಿ ಬಿರುಗಾಳಿಯನ್ನೇ ಎಬ್ಬಿಸುವ ಸಾಧ್ಯತೆಯಿದೆಯೆಂದು ವರದಿಗಳು ಹೇಳಿವೆ.