ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಜಾಮಿಯಾ'ದಲ್ಲೀಗ ಸೆಕ್ಸ್, ಕಾಂಡೋಮ್ ಮಾತು ನಿಷಿದ್ಧವಲ್ಲ (Condoms | sex | Jamia Millia Islamia | Abid Hussain)
Bookmark and Share Feedback Print
 
ಕಾಂಡೋಮ್, ಸೆಕ್ಸ್ ಮುಂತಾದ ವಿಚಾರಗಳು ಬಂದಾಗ ರಾಷ್ಟ್ರ ರಾಜಧಾನಿಯಲ್ಲಿನ ಒಂಬತ್ತು ದಶಕಗಳ ಇತಿಹಾಸ ಹೊಂದಿರುವ 'ಜಾಮಿಯಾ ಮಿಲಿಯಾ ಇಸ್ಲಾಮಿಯಾ' ವಿಶ್ವವಿದ್ಯಾಲಯದಲ್ಲಿ ಹುಬ್ಬೇರಿಸುತ್ತಿದ್ದ ಪರಿಸ್ಥಿತಿ ಈಗ ನಿಧಾನವಾಗಿ ಮಾಯವಾಗುತ್ತಿದೆ. ಹೌದು, ಇಂತಹ ಬದಲಾವಣೆಗಳಿಗೆ ಯುನಿವರ್ಸಿಟಿ ಮಾರ್ಪಾಡು ಹೊಂದುತ್ತಿದೆ.

ಈಗ ವಿದ್ಯಾರ್ಥಿಗಳು ನೇರವಾಗಿ ವಿಶ್ವವಿದ್ಯಾಲಯದ ಆವರಣದಲ್ಲೇ ಮುಕ್ತವಾಗಿ ಕಾಂಡೋಮ್ ಕೇಳಿ ಪಡೆಯುತ್ತಿದ್ದಾರೆ. ತಮ್ಮ ಸುರಕ್ಷತೆ ಏನೆಂಬುದನ್ನು ವಿದ್ಯಾರ್ಥಿಗಳು ಮನದಟ್ಟು ಮಾಡಿಕೊಂಡಿದ್ದಾರೆ. ಲೈಂಗಿಕ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಲೂ ಅವರು ಹಿಂದೇಟು ಹಾಕುತ್ತಿಲ್ಲ.

ಇಂತಹ ಒಂದು ಸಮಕಾಲೀನ ಬದಲಾವಣೆಗೆ ಕಾರಣವಾಗಿರುವುದು ವಿಶ್ವವಿದ್ಯಾಲಯವು ಆರೋಗ್ಯ ಕೇಂದ್ರವನ್ನು ತೆರೆದಿರುವುದರಿಂದ. ಇಲ್ಲಿ ಎಚ್ಐವಿ ಅಥವಾ ಏಡ್ಸ್ ಮುಂತಾದ ಲೈಂಗಿಕ ಸಂಬಂಧಿ ವಿಚಾರಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾತ್ರ ನಡೆಯುತ್ತಿರುವುದಲ್ಲ, ಜತೆಗೆ ವಿದ್ಯಾರ್ಥಿಗಳಿಗೆ ಖಾಸಗಿ ಆರೋಗ್ಯ ರಕ್ಷಣೆ ಕುರಿತು ಕೂಡ ತಿಳಿ ಹೇಳಲಾಗುತ್ತಿದೆ.

ದೈಹಿಕ ಜಾಗೃತಿ ಅಥವಾ ಲೈಂಗಿಕ ಶಿಕ್ಷಣ ಮುಂತಾದ ವಿಚಾರಗಳು ಬಂದಾಗ ಇಂತಹ ಘಟಕಗಳಿಂದ ವಿದ್ಯಾರ್ಥಿಗಳು ಸಾಮಾನ್ಯವಾಗಿ ದೂರವೇ ಉಳಿದುಕೊಳ್ಳುತ್ತಿದ್ದರು. ಆದರೆ ಪರಿಸ್ಥಿತಿ ಈಗ ಗಮನಾರ್ಹ ಬದಲಾವಣೆ ಕಂಡಿದೆ. ವಿದ್ಯಾರ್ಥಿಗಳು ನೇರವಾಗಿ ಬಂದು ಯಾವುದೇ ಹಿಂಜರಿಕೆಯಿಲ್ಲದೆ ಕಾಂಡೋಮ್ ಬೇಕೆಂದು ಕೇಳುತ್ತಾರೆ. ಅವರ ಸುರಕ್ಷತೆ ಬಗ್ಗೆ ಮುಕ್ತವಾಗಿ ಮಾತನಾಡುತ್ತಾರೆ. ಅಗತ್ಯ ಮುನ್ನೆಚ್ಚೆರಿಕೆಗಳನ್ನು ತೆಗೆದುಕೊಳ್ಳಲು ಅವರು ಮುಂದಾಗುತ್ತಿದ್ದಾರೆ. ಸ್ವಯಂ ಜಾಗೃತಿಯ ಬಗ್ಗೆ ಅವರಲ್ಲೀಗ ಅರಿವು ಮೂಡಿದೆ ಎಂದು ಯುನಿವರ್ಸಿಟಿಯ 'ಯುವ ಸ್ನೇಹಿ ಆರೋಗ್ಯ ಜಾಗೃತಿ' (ವೈಎಫ್ಎಚ್‌ಸಿ) ಕೇಂದ್ರದ ಸಲಹೆಗಾರ ಅಬೀಡ್ ಹುಸೇನ್ ಹೇಳುತ್ತಾರೆ.

ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಅರಿವು ಮೂಡಿಸುವ ವಾರಕ್ಕೊಮ್ಮೆ ನಡೆಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೆವು. ರಾಷ್ಟ್ರೀಯ ಸೇವಾ ದಳದ (ಎನ್‌ಎಸ್ಎಸ್) ಮೂಲಕ ಇದನ್ನು ನಡೆಸಲಾಗುತ್ತಿತ್ತು. ಅದನ್ನೇ ಇದೀಗ ಶಾಶ್ವತ ಘಟಕವನ್ನಾಗಿ ಮಾರ್ಪಡಿಸಲಾಗಿದೆ ಎಂದು ಅವರು ವಿವರಣೆ ನೀಡಿದ್ದಾರೆ.

ಯುವ ಜನತೆಯ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ಎಚ್ಐವಿ, ಏಡ್ಸ್ ತಡೆಗಟ್ಟುವ ಕುರಿತು ಕ್ಯಾಂಪಸ್‌ನಲ್ಲಿ ಜಾಗೃತಿ ಮೂಡಿಸುವುದು ಈ ಕೇಂದ್ರದ ಉದ್ದೇಶ. 2009-10ನೇ ಸಾಲಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ 7,290 ಮಂದಿಗೆ ಏಡ್ಸ್ ಇರುವುದು ಕಂಡು ಬಂದಿದೆ. ಒಟ್ಟಾರೆ ಭಾರತದಲ್ಲಿ ಇದರ ಪ್ರಮಾಣ 25 ಲಕ್ಷ.

ನಾವು ವಿದ್ಯಾರ್ಥಿಗಳ ಜತೆ ಎಚ್ಐವಿ ಮತ್ತು ಏಡ್ಸ್ ಕುರಿತು ಖಾಸಗಿ ಸಂವಾದಗಳನ್ನು ನಡೆಸಿ, ಅವರಿಗೆ ಕಾಂಡೋಮ್ ನೀಡುತ್ತೇವೆ. ಸಾಧ್ಯವಾಗುವ ಎಲ್ಲಾ ರೀತಿಯಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಈ ಕೇಂದ್ರ ಮಾಡುತ್ತಿದೆ. ದಿನಕ್ಕೆ ಸರಾಸರಿ ಇಲ್ಲಿಗೆ ಹತ್ತರಿಂದ ಹದಿನೈದು ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ ಎಂದು ಹುಸೇನ್ ತಿಳಿಸಿದ್ದಾರೆ.

ಅದೇ ಹೊತ್ತಿಗೆ ಯಾವುದೇ ವಿದ್ಯಾರ್ಥಿ/ವಿದ್ಯಾರ್ಥಿನಿಯ ಖಾಸಗಿ ವಿಚಾರಗಳನ್ನು ನಾವು ಬಹಿರಂಗಪಡಿಸುವುದಿಲ್ಲ. ಅವರು ನಮ್ಮಲ್ಲಿ ಹೇಳಿಕೊಳ್ಳುವ ಸಮಸ್ಯೆಗಳಿರಬಹುದು, ನಾವು ಅವರಿಗೆ ಸೂಚಿಸುವ ಪರಿಹಾರಗಳಿರಬಹುದು -- ಎಲ್ಲವನ್ನೂ ಗೌರವಿಸುವ ನಿಟ್ಟಿನಲ್ಲಿ ರಹಸ್ಯವಾಗಿಡುವುದು ನಮ್ಮ ಮೊದಲ ಆದ್ಯತೆ. ಹೀಗೆ ಮಾಡಿದಲ್ಲಿ ವಿದ್ಯಾರ್ಥಿಗಳು ಯಾವುದೇ ಹಿಂಜರಿಕೆಯಿಲ್ಲದೆ ಸಹಕಾರ ಪಡೆದುಕೊಳ್ಳುತ್ತಾರೆ ಎಂದು ಯುನಿವರ್ಸಿಟಿ ಅಧಿಕಾರಿ ಸ್ಪಷ್ಟಪಡಿಸಿದರು.

ನೇರವಾಗಿ ಮಾತುಕತೆ ನಡೆಸಲು ಹಿಂದೇಟು ಹಾಕುವವರಿಗೆ ದೂರವಾಣಿ ವ್ಯವಸ್ಥೆಯನ್ನೂ ಒದಗಿಸಲಾಗಿದೆ. ಉಚಿತ ಸಹಾಯವಾಣಿಯನ್ನು ತೆರೆದಿರುವ ವಿಶ್ವವಿದ್ಯಾಲಯವು ವಿದ್ಯಾರ್ಥಿನಿಯರ ದೇಹದಲ್ಲಾಗುವ ಮೈ ನೆರೆಯುವಿಕೆ ಮತ್ತು ಇತರ ವಿಚಾರಗಳ ಕುರಿತು ಮಾರ್ಗದರ್ಶನ ನೀಡುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ