ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನೇನು ಅಪರೂಪದ ಹೂವಲ್ಲ: ರಾಹುಲ್‌ಗೆ ಮಮತಾ (Rahul Gandhi | Congress | West Bengal | Mamata Banerjee)
Bookmark and Share Feedback Print
 
ತಾನು ಅಪರೂಪಕ್ಕೆ ಅರಳುವ ಪುಷ್ಪವೂ ಅಲ್ಲ ಅಥವಾ ಸ್ವರ್ಣಮಂಚದ ಮೇಲೆ ಪವಡಿಸುವವಳೂ ಅಲ್ಲ -- ಹೀಗೆಂದು ಇತ್ತೀಚೆಗಷ್ಟೇ ಪಶ್ಚಿಮ ಬಂಗಾಲಕ್ಕೆ ಹಲವು ದಿನಗಳ ಪ್ರವಾಸ ಮಾಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯವರತ್ತ ಪರೋಕ್ಷ ವಾಗ್ದಾಳಿ ನಡೆಸಿರುವುದು ರೈಲ್ವೇ ಸಚಿವೆ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ.

ವರ್ಷಕ್ಕೊಮ್ಮೆ ಕಾಣಿಸಿಕೊಂಡು, ನಂತರ ಕಣ್ಮರೆಯಾಗುವ ಅಪರೂಪದ ಹೂವು ನಾನಲ್ಲ. ಇಡೀ ವರ್ಷ ನಾನು ಜನರ ಜತೆಗಿರುತ್ತೇನೆ. ಪ್ರತಿ ದಿನವೂ ಅವರ ನೋವು ಮತ್ತು ಅಳಲುಗಳನ್ನು ಹಂಚಿಕೊಳ್ಳುತ್ತೇನೆ ಎಂದು ರಾಹುಲ್ ಗಾಂಧಿಯವರ ಹೆಸರನ್ನು ಉಲ್ಲೇಖಿಸದೆ ಮಮತಾ ತನ್ನ ವಾದ ಮಂಡಿಸಿದರು.

ಮುಂಬರುವ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 14ರಿಂದ 16ರವರೆಗೆ ರಾಜ್ಯ ಪ್ರವಾಸ ಮಾಡಿದ್ದ ರಾಹುಲ್ ಯುವ ಕಾಂಗ್ರೆಸ್ ಮತ್ತು ಪಕ್ಷಕ್ಕೆ ಪುನಶ್ಚೇತನ ನೀಡುವ ನಿಟ್ಟಿನಲ್ಲಿ ಮಾತನಾಡುತ್ತಾ, ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಜತೆ ಕೈ ಜೋಡಿಸುವ ಮೊದಲು ಅಗತ್ಯ ಗೌರವ ಆ ಪಕ್ಷದಿಂದ ಸಿಗಬೇಕಾಗಿದೆ ಎಂದಿದ್ದರು.

ತಮಗೆ ಸೂಕ್ತ ಗೌರವಗಳನ್ನು ಮೈತ್ರಿಪಕ್ಷ ತೃಣಮೂಲ ಕಾಂಗ್ರೆಸ್ ಮತ್ತು ಮಮತಾ ಅವರು ನೀಡುತ್ತಿಲ್ಲ ಎಂದು ರಾಜ್ಯದ ಕಾಂಗ್ರೆಸ್ಸಿಗರು ರಾಹುಲ್ ಅವರಲ್ಲಿ ದೂರಿಕೊಂಡಿದ್ದ ಹಿನ್ನೆಲೆಯಲ್ಲಿ ಮೇಲಿನಂತೆ ಹೇಳಿದ್ದರು.

ಭಾನುವಾರ ಬಿರ್ಬಮ್ ಜಿಲ್ಲೆಯ ನಾನೂನು ಎಂಬಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಮತಾ ಕಾಂಗ್ರೆಸ್ಸಿಗೆ ತಿರುಗೇಟು ನೀಡುತ್ತಾ, ಸ್ವರ್ಣಮಂಚದಲ್ಲಿ ನಿದ್ದೆ ಮಾಡಿ ಜನತೆಯ ಬಗ್ಗೆ ಮಾತನಾಡುವ ಗುಂಪಿಗೆ ಸೇರಿದವಳು ನಾನಲ್ಲ; ನಾನು ಸಾಗಿಸುತ್ತಿರುವುದು ಜನಸಾಮಾನ್ಯರ ಸರಳ ಜೀವನ ಎಂದರು.

ಪಶ್ಚಿಮ ಬಂಗಾಲದಲ್ಲಿನ ಎಡರಂಗದ ಮೂರು ದಶಕಗಳ ಅಧಿಪತ್ಯವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಕಳೆದ ವರ್ಷದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೈ ಜೋಡಿಸಿದ್ದ ಕಾಂಗ್ರೆಸ್ - ತೃಣಮೂಲ ಪಕ್ಷಗಳು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಲೇ ಬಂದಿದ್ದರೂ, ಮುಂದಿನ ವರ್ಷದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಒಂದೇ ತಕ್ಕಡಿಯಲ್ಲಿ ಮುಂದುವರಿಯುತ್ತಿವೆ.

ಕೆಲ ತಿಂಗಳುಗಳ ಹಿಂದಷ್ಟೇ ನಡೆದ ಸ್ಥಳೀಯ ಚುನಾವಣೆಗಳಲ್ಲಿ ತೃಣಮೂಲವನ್ನು ಹೊರಗಿಟ್ಟು ಕಣಕ್ಕಿಳಿದಿದ್ದ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದ ನಂತರ ಮಮತಾರನ್ನು ಲಘುವಾಗಿ ಪರಿಗಣಿಸಲು ಕೇಂದ್ರದ ಆಡಳಿತ ಪಕ್ಷವೂ ಸಿದ್ಧವಿಲ್ಲ ಎಂದು ಹೇಳಲಾಗುತ್ತಿದೆ.
ಸಂಬಂಧಿತ ಮಾಹಿತಿ ಹುಡುಕಿ