ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್ ಆರಂಭಕ್ಕೆ ಇನ್ನೇನು ಎರಡೇ ವಾರ ಬಾಕಿ ಇದೆ ಎನ್ನುವಾಗ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಮತ್ತು ಪ್ರವಾಸಿಗರಲ್ಲಿ ಭೀತಿಯನ್ನುಂಟು ಮಾಡುವ ಉದ್ದೇಶದಿಂದ ರಾಷ್ಟ್ರ ರಾಜಧಾನಿಯಲ್ಲಿ ನಡೆಸಲಾಗಿರುವ ಲಘು ಪ್ರಮಾಣದ ವಿಧ್ವಂಸಕ ಕೃತ್ಯಗಳ ಹಿಂದೆ ದೇಸೀ ಉಗ್ರರದ್ದೇ ಕೈವಾಡವಿರುವುದು ಬಹುತೇಕ ಖಚಿತವಾಗಿದೆ.
ಮೂಲಗಳ ಪ್ರಕಾರ ಪಾಕಿಸ್ತಾನ ಮೂಲದ 'ಲಷ್ಕರ್ ಇ ತೋಯ್ಬಾ' ಜತೆ ಆಪ್ತ ನಂಟು ಹೊಂದಿರುವ 'ಸಿಮಿ'ಯ ಹೊಸ ರೂಪ 'ಇಂಡಿಯನ್ ಮುಜಾಹಿದೀನ್' ಉಗ್ರ ಸಂಘಟನೆಯ ಚಿಲ್ಲರೆ ಕಾರ್ಯಕರ್ತರ ಕೃತ್ಯವಿದು. ಆದರೆ ಇದನ್ನು ತನಿಖಾದಳಗಳು ಒಪ್ಪಿಕೊಳ್ಳಲು ಸಿದ್ಧವಿಲ್ಲ. ಭಯೋತ್ಪಾದಕ ಸಂಘಟನೆಗಳಾಗಿದ್ದರೆ ಸುವ್ಯವಸ್ಥಿತ ದಾಳಿ ಸಂಘಟಿಸುತ್ತಿದ್ದವು ಎನ್ನುವುದು ಪೊಲೀಸರ ವಾದ.
ಇಂಡಿಯನ್ ಮುಜಾಹಿದೀನ್ ಬೆದರಿಕೆ... ಭಾನುವಾರ ನವದೆಹಲಿಯಲ್ಲಿ ಮಸೀದಿಯ ಸಮೀಪ ನಡೆದ ದಾಳಿಯ ಸ್ವಲ್ಪವೇ ಹೊತ್ತಿನಲ್ಲಿ ಮಾಧ್ಯಮ ಕಚೇರಿಗಳಿಗೆ ಇಂಡಿಯನ್ ಮುಜಾಹಿದೀನ್ ಹೆಸರಿನಲ್ಲಿ ಇ-ಮೇಲ್ ರವಾನಿಸಲಾಗಿದ್ದು, ಕಾಮನ್‌ವೆಲ್ತ್ ಗೇಮ್ಸ್‌ನ್ನು ಸುಸೂತ್ರವಾಗಿ ನಡೆಯಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಲಾಗಿದೆ. ಆದರೆ ಜಾಮಾ ಮಸೀದಿ ದಾಳಿಯ ಉಲ್ಲೇಖವನ್ನು ಇದರಲ್ಲಿ ಮಾಡಿರಲಿಲ್ಲ.
ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಉಲ್ಲೇಖಿಸಿರುವ ಇ-ಮೇಲ್, ಒಂದು ಕಡೆ ಮುಸ್ಲಿಮರ ರಕ್ತ ನೀರಿನಂತೆ ಹರಿಯುತ್ತಿದ್ದರೆ, ನೀವು ಮತ್ತೊಂದು ಕಡೆ ಕ್ರೀಡಾ ಹಬ್ಬಕ್ಕೆ ತಯಾರಿ ನಡೆಸುತ್ತಿದ್ದೀರಿ. ಆದರೆ ಕಾಮನ್‌ವೆಲ್ತ್ ಗೇಮ್ಸ್‌ಗೆ ನಾವು ಕಠಿಣ ಎಚ್ಚರಿಕೆ ನೀಡುತ್ತಿದ್ದೇವೆ. ಗೇಮ್ಸ್ ತಯಾರಿ ಬಿರುಸಿನಿಂದ ನಡೆಯುತ್ತಿದೆ ಎಂಬುದು ನಮಗೆ ಗೊತ್ತು. ಆದರೆ ನೆನಪಿಡಿ, ನಾವು ಕೂಡ ನಿಮಗೆ ದೊಡ್ಡ ಆಘಾತವನ್ನು ನೀಡಲು ಸಿದ್ಧತೆ ನಡೆಸುತ್ತಿದ್ದೇವೆ ಎಂದಿತ್ತು.
ಗೇಮ್ಸ್ ಮೇಲಿನ ದಾಳಿಯಿಂದಾಗುವ ಹಾನಿಗೆ ಅದರಲ್ಲಿ ಪಾಲ್ಗೊಳ್ಳುವವರೇ ಹೊಣೆಗಾರರಾಗಿರುತ್ತಾರೆ. ನಮ್ಮ ಮುಜಾಹಿದೀನ್‌ಗಳಂತೂ ನೀವು ನಿಮ್ಮ ಜೀವನವನ್ನು ಪ್ರೀತಿಸುವುದಕ್ಕಿಂತ ಸಾವನ್ನೇ ಹೆಚ್ಚು ಇಷ್ಟಪಡುತ್ತಾರೆ. ಕಾಶ್ಮೀರದಲ್ಲಿ ತರಕಾರಿಗಿಂತಲೂ ಅಗ್ಗವಾಗಿ ಹೋಗಿದೆ ಮುಸ್ಲಿಮರ ಜೀವನ. ಇದನ್ನು ಕಂಡು ಸುಮ್ಮನೆ ಕೂರಲು ನಮ್ಮಿಂದ ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿತ್ತು.
ಇ-ಮೇಲ್ ಭಾರತದ್ದು... ಪತ್ರಿಕಾ ಕಚೇರಿಗಳಿಗೆ ಇ-ಮೇಲ್ ರವಾನೆಯಾದ ನಂತರ ಅದರ ಮೂಲವನ್ನು ಪತ್ತೆ ಹಚ್ಚುವ ಕಾರ್ಯ ಭರದಿಂದ ಸಾಗಿದೆ. ತನಿಖಾ ದಳಗಳ ಪ್ರಕಾರ ಬೆದರಿಕೆ ಇ-ಮೇಲ್ ಭಾರತದ ಒಳಗೇ ಸೃಷ್ಟಿಯಾಗಿ, ರವಾನೆಯಾಗಿದೆ.
ಜಾಮಾ ಮಸೀದಿ ಸಮೀಪದ ದಾಳಿ ನಡೆದದ್ದು ಭಾನುವಾರ ಬೆಳಿಗ್ಗೆ 11.22ಕ್ಕೆ. ಬೆದರಿಕೆ ಪತ್ರಗಳು ರವಾನೆಯಾಗಿರುವುದು [email protected] ಎಂಬ ಖಾತೆಯಿಂದ. ಈ ಖಾತೆಯನ್ನು ಸೃಷ್ಟಿ ಮಾಡಿರುವುದು 11.30ಕ್ಕೆ. ತಕ್ಷಣವೇ ಇದರಿಂದ ಪತ್ರಿಕಾ ಕಚೇರಿಗಳು ಮತ್ತು ಸುದ್ದಿ ವಾಹಿನಿಗಳ ಕಚೇರಿಗಳಿಗೆ ಮೇಲ್ ಮಾಡಲಾಗಿತ್ತು.
ಬೆದರಿಕೆ ಹಾಕಲು ಜಿಮೇಲ್ ಖಾತೆಯನ್ನು ಸೃಷ್ಟಿಸಿರುವ ವ್ಯಕ್ತಿ ರೀಡಿಫ್ ಮೇಲ್‌ನಲ್ಲೂ ಖಾತೆ ಹೊಂದಿದ್ದಾನೆ. ರೀಡಿಫ್ ಮೇಲ್ ಖಾತೆ ಕೂಡ ಜಿಮೇಲ್ ಖಾತೆಯ ಹೆಸರನ್ನೇ ಹೊಂದಿದೆ. ಈ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಉಗ್ರರ ಕೃತ್ಯವಲ್ಲ: ಪೊಲೀಸ್ ಜಾಮಾ ಮಸೀದಿಯ ಹೊರಗಡೆ ಕೆಸ್‌ವಿನ್ (27) ಮತ್ತು ಸಿಂಗ್ಲೋ (28) ಎಂಬ ಇಬ್ಬರು ತೈವಾನ್ ಪ್ರವಾಸಿಗರ ಮೇಲೆ ನಡೆದ ಗುಂಡಿನ ದಾಳಿಯ ಹಿಂದೆ ಭಯೋತ್ಪಾದಕರ ಕೈವಾಡಗಳಿರುವ ಸಾಧ್ಯತೆಗಳು ಕಡಿಮೆ ಎಂದು ದೆಹಲಿ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.
ಇದು ಸುಸಂಘಟಿತ ಭಯೋತ್ಪಾದನಾ ಸಂಘಟನೆಯ ಕೃತ್ಯವಾಗಿರದು. ಬಹುಶಃ ಸಂಘಟನೆಯ ಕೆಲವು ಚಿಲ್ಲರೆ ಕಾರ್ಯಕರ್ತರು ನಡೆಸಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
ರೈನ್‌ಕೋಟ್ ಮತ್ತು ಹೆಲ್ಮೆಟ್ ಧರಿಸಿಕೊಂಡು ಜಾಮಾ ಮಸೀದಿಯ ಮೂರನೇ ಗೇಟಿನ ಬಳಿ ಬೈಕುಗಳಲ್ಲಿ ಬಂದಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದರು.
ಇದಾದ ಎರಡು ಗಂಟೆಗಳ ನಂತರ ಇಲ್ಲೇ ಸಮೀಪ ಅಂದರೆ 50 ಮೀಟರ್ ದೂರದಲ್ಲಿ ಪ್ರೆಶರ್ ಕುಕ್ಕರ್ ಬಾಂಬ್ ಸ್ಫೋಟಗೊಂಡಿತ್ತು. ಬಾಂಬ್ ಕಾರಿನಲ್ಲಿಟ್ಟಿದ್ದರಿಂದ ಕಾರು ಸುಟ್ಟು ಹೋಗಿತ್ತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿರಲಿಲ್ಲ. ದುಷ್ಕರ್ಮಿಗಳ ಉದ್ದೇಶ ಭೀತಿ ಸೃಷ್ಟಿಸುವುದು ಎಂದು ಈ ಎರಡು ಘಟನೆಗಳ ಬಗ್ಗೆ ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.