ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸರ್ವಪಕ್ಷದ ಕಾಶ್ಮೀರ ಪ್ರವಾಸ ಆರಂಭ; ಯಶಸ್ಸಿನ ಭರವಸೆ
(all-party delegation | P Chidambaram | Jammu and Kashmir | Mehbooba Mufti)
ಜಮ್ಮು-ಕಾಶ್ಮೀರದ ಪರಿಸ್ಥಿತಿ ಪರಿಶೀಲನೆಗಾಗಿ ಗೃಹಸಚಿವ ಪಿ. ಚಿದಂಬರಂ ನೇತೃತ್ವದ ಸರ್ವಪಕ್ಷ ನಿಯೋಗವು ತನ್ನ ಎರಡು ದಿನಗಳ ಪ್ರವಾಸಕ್ಕೆ ಚಾಲನೆ ನೀಡಿದ್ದು, ಸಭೆಯಿಂದ ಪ್ರತ್ಯೇಕತಾವಾದಿಗಳು ಹೊರಗುಳಿಯಲು ನಿರ್ಧರಿಸಿದ್ದಾರೆ.
ಕಳೆದ ಮೂರು ತಿಂಗಳುಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ನಾಗರಿಕರನ್ನು ಬಲಿ ತೆಗೆದುಕೊಂಡಿರುವ ರಾಜಕೀಯ ಪ್ರಕ್ಷುಬ್ಧತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಎರಡು ದಶಕಗಳ ನಂತರ ಮೊತ್ತ ಮೊದಲ ಬಾರಿ ಭೇಟಿ ನೀಡುತ್ತಿರುವ ಸರ್ವಪಕ್ಷಗಳ ನಿಯೋಗವು ಯಶಸ್ವಿಯಾಗುವ ಭರವಸೆಯಲ್ಲಿದೆ.
ಹುರಿಯತ್ ಕಾನ್ಫರೆನ್ಸ್ ನಾಯಕ ಮಿರ್ವಾಯಿಜ್ ಉಮರ್ ಫಾರೂಕ್ ಮತ್ತು ಜಮ್ಮು-ಕಾಶ್ಮೀರ ಲಿಬರೇಷನ್ ಫ್ರಂಟ್ ನಾಯಕ ಯಾಸಿನ್ ಮಲಿಕ್ ಸರ್ವಪಕ್ಷಗಳ ಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಪ್ರಕಟಿಸಿದ್ದಾರೆ. ಆದರೆ ನಿಯೋಗಕ್ಕೆ ಜಂಟಿ ಮನವಿಯೊಂದನ್ನು ತಾವು ರವಾನಿಸುವುದಾಗಿ ಹೇಳಿದ್ದಾರೆ.
ಅತ್ತ ರಾಜ್ಯದ ಪ್ರಮುಖ ಪ್ರತಿಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕತ್ವ ಕೂಡ ನಿಯೋಗದಿಂದ ಹೊರಗುಳಿಯುವುದಾಗಿ ಪ್ರಕಟಿಸಿದೆ. ಪಕ್ಷದ ನಾಯಕಿ ಮೆಹಬೂಬಾ ಮುಫ್ತಿ ತಾನು ಸರ್ವಪಕ್ಷಗಳ ಸಭೆಯನ್ನು ಬಹಿಷ್ಕರಿಸುತ್ತಿದ್ದೇನೆ, ಆದರೆ ಪ್ರಧಾನ ಕಾರ್ಯದರ್ಶಿ ದಿಲಾವರ್ ಮೀರ್ ನೇತೃತ್ವದ 15 ಸದಸ್ಯರ ತಂಡವು ನಿಯೋಗವನ್ನು ಭೇಟಿಯಾಗಲಿದೆ ಎಂದು ತಿಳಿಸಿದ್ದಾರೆ.
ನಾಗರಿಕ ಸಮಾಜದ ಸದಸ್ಯರು ಮತ್ತು ಜನ ಸಾಮಾನ್ಯರು ಭಾಗವಹಿಸದೇ ಇರುವ ಸರ್ವ ಪಕ್ಷದ ನಿಯೋಗದ ಸಭೆ ನಿರರ್ಥಕ ಎಂದು ಮುಫ್ತಿ ಅಭಿಪ್ರಾಯಪಟ್ಟಿದ್ದಾರೆ.
ಸರ್ವಪಕ್ಷಗಳ ಸದಸ್ಯರನ್ನೊಳಗೊಂಡ ನಿಯೋಗದಲ್ಲಿ 38 ಸದಸ್ಯರಿದ್ದು, ಶ್ರೀನಗರ ಮತ್ತು ಜಮ್ಮುಗಳಿಗೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಲಿದೆ.
ಬಿಜೆಪಿ ನಾಯಕರಾದ ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಸಮಾಜವಾದಿ ವರಿಷ್ಠ ಮುಲಾಯಂ ಸಿಂಗ್ ಯಾದವ್, ಡಿಎಂಕೆ ನಾಯಕ ಟಿ.ಆರ್. ಬಾಲು, ಎಲ್‌ಜೆಪಿ ಅಧ್ಯಕ್ಷ ರಾಮ್ ವಿಲಾಸ್ ಪಾಸ್ವಾನ್, ಜೆಡಿಯು ಮುಖ್ಯಸ್ಥ ಶರದ್ ಯಾದವ್, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮುಖಂಡ ಇ. ಅಹ್ಮದ್ ಮುಂತಾದವರು ಈ ನಿಯೋಗದಲ್ಲಿ ಪಾಲ್ಗೊಂಡಿರುವ ಪ್ರಮುಖರು.
ಈ ನಡುವೆ ಪ್ರತಿಕ್ರಿಯೆ ನೀಡಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಸಾಧ್ಯತೆಗಳನ್ನು ತಳ್ಳಿ ಹಾಕಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಚಿದಂಬರಂ ಕಾಶ್ಮೀರ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿದ್ದಾರೆ. ಸಮಸ್ಯೆಗಳು ಇದ್ದಾಗ ಹಿಂದಕ್ಕೆ ಹೆಜ್ಜೆಯಿಡುವ ವ್ಯಕ್ತಿ ನಾನಲ್ಲ. ನಾನೊಬ್ಬ ಹೋರಾಟಗಾರ. ಸಮಸ್ಯೆಗಳನ್ನು ಮೆಟ್ಟಿ ನಿಲ್ಲುತ್ತೇನೆ ಎಂದವರು ತಿಳಿಸಿದ್ದಾರೆ.