ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಯೋಧ್ಯೆ ತೀರ್ಪು: ನ್ಯಾಯಪೀಠದ ಜಡ್ಜ್ ಅಪಸ್ವರ
(Allahabad High Court | Ayodhya verdict | Babri Masjid | Ramjanmabhoomi)
ಅಯೋಧ್ಯೆಯ ಒಡೆತನದ ಕುರಿತ ತೀರ್ಪನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳು ನೀಡಿರುವ ತೀರ್ಪಿನ ಬಗ್ಗೆ ಅದೇ ಪೀಠದ ಮತ್ತೊಬ್ಬ ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದು, ತಾನು ಸಂಧಾನದ ಪರವಾಗಿರುವುದಾಗಿ ಹೇಳಿದ್ದಾರೆ.
ಈ ಸಂಬಂಧ ಸೋಮವಾರ ಅಸಮ್ಮತಿ ಟಿಪ್ಪಣಿಯನ್ನು ಬಿಡುಗಡೆ ಮಾಡಿರುವ ನ್ಯಾಯಮೂರ್ತಿ ಧರ್ಮ ವೀರ್ ಶರ್ಮಾ, ರಾಮ ಜನ್ಮಭೂಮಿ - ಬಾಬ್ರಿ ಮಸೀದಿ ವಿವಾದದ ಕುರಿತ ಸುದೀರ್ಘಾವಧಿಯ ಪ್ರಕರಣದ ತೀರ್ಪನ್ನು ಮುಂದೂಡಲು ಅವಕಾಶ ನೀಡದೇ ಇರುವುದು ಸರಿಯಲ್ಲ ಎಂದಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಲಕ್ನೋ ವಿಶೇಷ ಪೀಠದ ನ್ಯಾಯಮೂರ್ತಿಗಳಾದ ಎಸ್.ಯು. ಖಾನ್ ಮತ್ತು ಸುಧೀರ್ ಅಗರ್ವಾಲ್ ಪ್ರಕರಣದ ಕುರಿತು ನ್ಯಾಯಾಲಯದ ಹೊರಗಡೆ ಪರಿಹಾರ ಕಂಡುಕೊಳ್ಳುವುದು ಮತ್ತು ಸಂಧಾನ ಮಾತುಕತೆ ಸಾಧ್ಯವಿಲ್ಲದೇ ಇರುವುದರಿಂದ ತೀರ್ಪನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಹೇಳಿದ್ದರು.
ಈ ಪೀಠವು ತನ್ನ ತೀರ್ಪನ್ನು ಸೆಪ್ಟೆಂಬರ್ 24ರಂದು ಅಪರಾಹ್ನ 3.30ಕ್ಕೆ ನೀಡಲಿದೆ.
ಜತೆಗೆ ತೀರ್ಪನ್ನು ಮುಂದೂಡಬೇಕೆಂದು ಮನವಿ ಮಾಡಿದವರ ಮೇಲೆ ತನ್ನ ಸಹಪಾಠಿ ನ್ಯಾಯಮೂರ್ತಿಗಳು ಭಾರೀ ದಂಡ ಹೇರಿರುವುದನ್ನು ಕೂಡ ನ್ಯಾಯಮೂರ್ತಿ ಶರ್ಮಾ ಒಪ್ಪಿಕೊಂಡಿಲ್ಲ.
ಸೆಪ್ಟೆಂಬರ್ 24ರಂದು ನೀಡಲಿರುವ ತೀರ್ಪನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸಲ್ಲಿಸಿದ್ದ ಅರ್ಜಿಗಳನ್ನು ವಜಾ ಮಾಡುವ ಸಂಬಂಧ ನ್ಯಾಯಪೀಠವು ಸೆಪ್ಟೆಂಬರ್ 17ರಂದು ಹೊರಡಿಸಿದ ಆದೇಶಕ್ಕೆ ಸಹಿ ಮಾಡಿರದ ಜಡ್ಜ್ ಶರ್ಮಾ, ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲಾ ವಾದಿಗಳಿಗೂ ಸೆಪ್ಟೆಂಬರ್ 23ರವರೆಗೆ ಅವಕಾಶ ನೀಡಬೇಕು ಎಂದಿದ್ದಾರೆ.
ನ್ಯಾಯಾಲಯದ ಹೊರಗಡೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳುವುದು ಮತ್ತು ತೀರ್ಪನ್ನು ಮುಂದಕ್ಕೆ ಹಾಕುವುದು ಸಾಧ್ಯವಿಲ್ಲ ಎನ್ನುವ ಪೀಠದ ತೀರ್ಮಾನದ ಕುರಿತು ನನ್ನನ್ನು ಸಂಪರ್ಕಿಸದೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದೂ ಈ ಸಂದರ್ಭದಲ್ಲಿ ತನ್ನ ಸಹಪಾಠಿ ನ್ಯಾಯಮೂರ್ತಿಗಳ ವಿರುದ್ಧ ಶರ್ಮಾ ಭಾಗಶಃ ಆರೋಪವನ್ನೇ ಮಾಡಿದರು.
ಹೀಗೆಂದು ಹೇಳಲು ನನಗೆ ಬೇಸರವಾಗುತ್ತಿದೆ. ಆದರೆ ನನ್ನ ಪೀಠದಲ್ಲಿನ ನ್ಯಾಯಮೂರ್ತಿಗಳು ತಮ್ಮ ಆದೇಶವನ್ನು ಹೊರಡಿಸುವ ಮೊದಲು ನನ್ನನ್ನು ಸಂಪರ್ಕಿಸಿಲ್ಲ. ನನ್ನನ್ನು ಕೇಳಿದ್ದರೆ ನಾನು ನನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದೆ ಎಂದು ತನ್ನ ಆದೇಶದಲ್ಲಿ ತಿಳಿಸಿದ್ದಾರೆ.