ಮುಸ್ಲಿಮರಿಗೆ ಸೇರಿದ ಆಡೊಂದು ಆಕಸ್ಮಿಕವಾಗಿ ದೇವಳದೊಳಗೆ ನುಗ್ಗಿ ಕಾಳಿ ದೇವಿಯ ಮೂರ್ತಿಯನ್ನು ಭಗ್ನಗೊಳಿಸಿದ ಪ್ರಕರಣ ಕೋಮುಗಲಭೆಗೆ ವೇದಿಕೆ ಸೃಷ್ಟಿಯಾಗುತ್ತಿದೆ ಎಂದು ನಿರೀಕ್ಷೆ ಹೊತ್ತವರಿಗೆ ಇದ್ದಕ್ಕಿದ್ದಂತೆ ನಿರಾಸೆ. ಮುಸ್ಲಿಂ ಸಮುದಾಯದವರು ತಾವೇ ಸ್ವತಃ ಮುಂದೆ ಬಂದು ನೂತನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದಾಗಿ ಭರವಸೆ ನೀಡಿದ್ದೇ ಇದಕ್ಕೆ ಕಾರಣ.
ಉತ್ತರ ಪ್ರದೇಶದ ಮಣಿಪುರಿ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದು. ಇನ್ನೇನು ಹೊರ ಬರಲಿರುವ ಅಯೋಧ್ಯೆಯಲ್ಲಿನ ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದದ ತೀರ್ಪು ತೀವ್ರ ಕುತೂಹಲ ಕೆರಳಿಸಿರುವ ಹೊತ್ತಿನಲ್ಲೇ ಇಂತದ್ದೊಂದು ಸೌಹಾರ್ದಯುತ ಪ್ರಸಂಗ ವರದಿಯಾಗಿದೆ.
ಲಕ್ನೋದಿಂದ 300 ಕಿಲೋ ಮೀಟರ್ ದೂರದಲ್ಲಿರುವ 'ಮಾ ಶೀತ್ಲಾ ದೇವಿ' ಎಂಬ ಕಾಳಿ ಮಾತೆಯ ದೇಗುಲಕ್ಕೆ ಮುಸ್ಲಿಂ ಮಹಿಳೆಯೊಬ್ಬರಿಗೆ ಸೇರಿದ ಆಡು ನುಗ್ಗಿ ನಾಲ್ಕು ಅಡಿ ಎತ್ತರದ ಮೂರ್ತಿಯನ್ನು ಧ್ವಂಸಗೊಳಿಸಿತ್ತು.
ಇಷ್ಟಾಗುತ್ತಿದ್ದಂತೆ ವದಂತಿಗಳು ತನ್ನ ಕಾರುಬಾರು ಆರಂಭಿಸಿದ್ದವು. ಮುಸ್ಲಿಮರು ಉದ್ದೇಶಪೂರ್ವಕವಾಗಿಯೇ ಈ ರೀತಿಯಾಗಿ ಆಡನ್ನು ಒಳಗೆ ಬಿಟ್ಟಿದ್ದಾರೆ ಎಂಬ ಮಾತುಗಳೂ ಹುಟ್ಟಿಕೊಂಡಿದ್ದವು.
ಸುದ್ದಿ ಬಾಯಿಯಿಂದ ಬಾಯಿಗೆ ಹರಡಿ ದೊಡ್ಡ ಜನಸಮೂಹವೇ ಗುಡಿಯ ಸುತ್ತ ನೆರೆಯಿತು. ಕೆಲವರಂತೂ ಮುಸ್ಲಿಮರ ವಿರುದ್ಧ ಘೋಷಣೆಗಳನ್ನೂ ಕೂಗತೊಡಗಿದರು. ಉದ್ವಿಗ್ನತೆ ದೇಗುಲವಿರುವ ಗ್ರಾಮವಲ್ಲದೆ ಪಕ್ಕದ ಗ್ರಾಮಗಳಿಗೂ ಹರಡತೊಡಗಿತು.
ಆದರೆ ಈ ಹೊತ್ತಿನಲ್ಲಿ ಸಭೆ ಸೇರಿದ ಮುಸ್ಲಿಂ ಮುಖಂಡರು, ತಾವೇ ನೂತನ ಮೂರ್ತಿಯನ್ನು ನಿರ್ಮಿಸಿಕೊಡುವ ನಿರ್ಧಾರಕ್ಕೆ ಬರುವ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಂಡರು.
ಮುಸ್ಲಿಮರಿಗೆ ಸೇರಿದ ಆಡು ದೇವಿಯ ಮೂರ್ತಿಯನ್ನು ಭಗ್ನಗೊಳಿಸಿರುವುದರಿಂದ ನಾವೇ ನೂತನ ವಿಗ್ರಹವನ್ನು ನಿರ್ಮಿಸಿಕೊಡುವುದು ನ್ಯಾಯ ಎಂದು ತೀರ್ಮಾನಿಸಿದೆವು ಎಂದು ಈ ಬಗ್ಗೆ ಬರ್ನಾಲ್ ಗ್ರಾಮದ ನಿವಾಸಿ ಅನೀಸ್ ಅನ್ಸಾರಿ ಪ್ರತಿಕ್ರಿಯಿಸಿದ್ದಾರೆ.
ಅದಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವ ನಿರ್ಧಾರಕ್ಕೆ ಬರಲಾಯಿತು. ಮುಖಂಡರು ಕೈಗೊಂಡ ನಿರ್ಧಾರದಂತೆ ಮುಸ್ಲಿಂ ಯುವಕರು ಗ್ರಾಮದ ಮನೆಗಳಲ್ಲಿ ನಿಧಿ ಸಂಗ್ರಹದಲ್ಲಿ ತೊಡಗಿದ್ದಾರೆ. ಆ ಮೂಲಕ ಪ್ರಕರಣಕ್ಕೆ ಕೋಮು ಬಣ್ಣ ಬಳಿಯುವುದನ್ನು ತಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೀಘ್ರದಲ್ಲೇ ನಾವು ದೇವಿಯ ವಿಗ್ರಹವನ್ನು ತಯಾರಿಸುತ್ತೇವೆ. ಅದಕ್ಕಾಗಿ ಈಗಾಗಲೇ ಕೆಲವಾರು ಸಾವಿರ ರೂಪಾಯಿಗಳನ್ನು ಸಂಗ್ರಹಿಸಿದ್ದೇವೆ. ನಮ್ಮ ಸಮುದಾಯದವರಲ್ಲದೆ ಹಿಂದೂಗಳು ಕೂಡ ನಮಗೆ ಆರ್ಥಿಕ ಸಹಕಾರ ನೀಡುತ್ತಿದ್ದಾರೆ. ಒಟ್ಟು ಸುಮಾರು ಆರೇಳು ಸಾವಿರ ರೂಪಾಯಿಗಳು ಬೇಕಾಗಬಹುದು ಎಂದು ಮುಸ್ಲಿಂ ಮುಖಂಡರು ವಿವರಣೆ ನೀಡಿದ್ದಾರೆ.