ಮುಸ್ಲಿಂ ಓಟು ಮೋದಿ ಪಕ್ಷಕ್ಕೆ ಹೇಗೆ ಬಿತ್ತು?; ಕಾಂಗ್ರೆಸ್ ಚಿಂತೆ
ನವದೆಹಲಿ, ಮಂಗಳವಾರ, 21 ಸೆಪ್ಟೆಂಬರ್ 2010( 11:52 IST )
ಕಾಂಗ್ರೆಸ್ ಭದ್ರಕೋಟೆಗೆ ಲಗ್ಗೆ ಹಾಕಿ ಚಕ್ರಾಧಿಪತ್ಯವನ್ನು ಮುರಿದು ಹಾಕಿದ ಕೀರ್ತಿಗೆ ಪಾತ್ರರಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರತ್ತ ಮುಸ್ಲಿಮರು ವಾಲುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ 'ಜಾತ್ಯತೀತ' ಕಾಂಗ್ರೆಸ್ ತಪ್ಪಿಗಾಗಿ ಕೇಂದ್ರ ಸಚಿವರುಗಳ ತಲೆದಂಡ ಪಡೆಯಲು ಮುಂದಾಗಿದೆ.
ಇತ್ತೀಚೆಗಷ್ಟೇ ನಡೆದಿದ್ದ ಕತ್ಲಾಲ್ ವಿಧಾನಸಭಾ ಉಪಚುನಾವಣೆಯಲ್ಲಿ 21,000ಕ್ಕೂ ಅಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿ ಎದುರು ಕಾಂಗ್ರೆಸ್ ಸೋತಿರುವುದಕ್ಕೆ ಆತ್ಮಾವಲೋಕನ ಆರಂಭಿಸಿರುವ ಕಾಂಗ್ರೆಸ್, ಇದಕ್ಕೆ ಯಾರು ಹೊಣೆ ಎಂಬುದನ್ನು ಗುರುತಿಸುವ ಕೆಲಸಕ್ಕೆ ಚಾಲನೆ ನೀಡಿದೆ.
ಕತ್ಲಾಲ್ ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ವಶದಲ್ಲಿರುವ ಖೇಡಾ ಮತ್ತು ಆನಂದ್ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿದೆ. ಈ ಕಾರಣದಿಂದಾಗಿ ಸಂಸದರಾದ ದಿನ್ಶಾ ಪಟೇಲ್ ಮತ್ತು ಭರತಸಿನ್ಹ ಸೋಲಂಕಿಯವರ ಮೇಲೆ ಹೈಕಮಾಂಡ್ ಕೆಂಗಣ್ಣು ಬೀರಿದೆ.
ಇವರಿಬ್ಬರೂ ಕೇವಲ ಸಂಸದರಾಗಿ ಉಳಿದಿದ್ದರೆ ಕಾಂಗ್ರೆಸ್ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಅವರಿಬ್ಬರೂ ಕೇಂದ್ರ ಸಚಿವರುಗಳು. ಪಟೇಲ್ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವರಾಗಿದ್ದರೆ, ಸೋಲಂಕಿಯವರು ವಿದ್ಯುತ್ ಖಾತೆ ರಾಜ್ಯ ಸಚಿವರು. ಹಾಗಾಗಿ ಅವರಿಬ್ಬರು ಪಕ್ಷಕ್ಕೆ ಗೆಲುವು ತಂದು ಕೊಡಲು ವಿಫಲರಾಗಿದ್ದಾರೆ ಎಂದೇ ಕಾಂಗ್ರೆಸ್ ಪರಿಗಣಿಸಿದೆ.
ಮತ್ತೊಂದು ಮೂಲದ ಪ್ರಕಾರ ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ ಶಂಕರಸಿನ್ಹ ವಾಘೇಲಾ ಅವರ ನಿಷ್ಠರಿಗೆ ಕತ್ಲಾಲ್ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದ್ದು ಇಬ್ಬರು ಕೇಂದ್ರ ಸಚಿವರಿಗೆ ಅಸಮಾಧಾನವಾಗಿತ್ತು. ಅದೇ ಕಾರಣದಿಂದಾಗಿ ಅವರು ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಕೆಲಸ ಮಾಡಿದ್ದರು ಎಂದೂ ಹೇಳಲಾಗುತ್ತಿದೆ.
ಆದರೆ ಪಟೇಲ್ ಮತ್ತು ಸೋಲಂಕಿಯವರು ಪಕ್ಷ ತಪ್ಪು ಮಾಡಿತ್ತು ಎಂದೇ ವಾದಿಸುತ್ತಿದ್ದಾರೆ. ಗೆಲ್ಲುವ ಕುದುರೆಗೆ ಟಿಕೆಟ್ ನೀಡುವ ಬದಲು ಯಾರದೋ ಮರ್ಜಿಗೆ ಒಳಗಾಗಿ ಪಕ್ಷವು ಸೋಲಬೇಕಾಯಿತು. ಅಷ್ಟಕ್ಕೂ ಕಾಂಗ್ರೆಸ್ ಸೋಲಿಗೆ ಇದೇ ಪ್ರಮುಖ ಕಾರಣವಲ್ಲ, ಮೋದಿಯವರು ಅಧಿಕಾರ ದುರುಪಯೋಗಪಡಿಸಿಕೊಂಡದ್ದೇ ಬಿಜೆಪಿ ಗೆಲುವಿಗೆ ಕಾರಣ ಎಂದು ಹೇಳುತ್ತಾರೆ.
ಶಂಕಿತ ಉಗ್ರ ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಗುಜರಾತ್ ಮಾಜಿ ಗೃಹಸಚಿವ ಅಮಿತ್ ಶಾ ಅವರನ್ನು ಬಂಧಿಸಿದ ನಂತರ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿರುವ ಮೋದಿ, ಕಾಂಗ್ರೆಸ್-ಸಿಬಿಐ ಮೈತ್ರಿಕೂಟಕ್ಕೆ ಉಪ ಚುನಾವಣೆಯಲ್ಲಿ ಗುಜರಾತ್ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ ಎಂದೇ ಹೇಳುತ್ತಾ ಬಂದಿದ್ದರು. ಅದರಂತೆ ಬಿಜೆಪಿ ಜಯಭೇರಿ ಬಾರಿಸುವುದರೊಂದಿಗೆ ಕಾಂಗ್ರೆಸ್ ನಾಯಕತ್ವವು ತೀವ್ರ ಮುಜುಗರಕ್ಕೊಳಗಾಗಿತ್ತು.
ಮೋದಿಗೆ ಮುಸ್ಲಿಮರ ಮೆಚ್ಚುಗೆ... ಕಾಂಗ್ರೆಸ್ ಭದ್ರಕೋಟೆಯನ್ನು ಛಿದ್ರ ಮಾಡಲು ಬಿಜೆಪಿಗೆ ಪ್ರಮುಖವಾಗಿ ಸಹಕರಿಸಿದವರು ಮುಸ್ಲಿಮರು. ಕತ್ಲಾಲ್ ವಿಧಾನಸಭಾ ಕ್ಷೇತ್ರದ 1.75 ಲಕ್ಷ ಮುಸ್ಲಿಂ ಮತದಾರರಲ್ಲಿ ಶೇ.65ರಷ್ಟು ಮತಗಳು ಮೋದಿ ನಾಯಕತ್ವಕ್ಕೆ ಬಿದ್ದಿದ್ದವು.
ಕಾಂಗ್ರೆಸ್ ನಮ್ಮ ಪಕ್ಷ ಎಂದು ಯೋಚಿಸುತ್ತಾ ಬಂದವರು ನಾವು. ಅದೇ ರೀತಿ ಓಟು ಹಾಕುತ್ತಾ ಬಂದಿದ್ದೆವು. ಆದರೆ ಗುಜರಾತಿನಲ್ಲಿ ಬಿಜೆಪಿ ಅಧಿಕಾರದಲ್ಲಿದೆ, ಪ್ರತಿಯೊಬ್ಬರೂ ಅದರ ಸವಿಯನ್ನು ಅನುಭವಿಸುತ್ತಿದ್ದಾರೆ. ನಾವೂ ಯಾಕೆ ಕೈ ಜೋಡಿಸಬಾರದು ಎಂದು ಯೋಚಿಸಿ ನಿಲುವು ಬದಲಾಯಿಸಿದೆವು ಎಂದು ಆಯೂಬ್ ಚೌಹಾನ್ ಹೇಳುತ್ತಾರೆ.
ಆಯೂಬ್ ಅವರಂತೆ ಇತರ ಮುಸ್ಲಿಮರೂ ಅದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಕಳೆದ 50 ವರ್ಷಗಳಿಂದ ಕಾಂಗ್ರೆಸ್ ತಮ್ಮ ಅಭಿವೃದ್ಧಿಗಾಗಿ ಹೆಚ್ಚಿನ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿತ್ತು. ಹಾಗಾಗಿ ನಾವು ಬಿಜೆಪಿಯನ್ನು ಅಪ್ಪಿಕೊಂಡೆವು ಎನ್ನುತ್ತಾರೆ.
ನಮಗೆ ಇದ್ದದ್ದು ಎರಡೇ ಆಯ್ಕೆ. ಒಂದು ಹಿಂದಕ್ಕೆ ಹೋಗುವ ರಸ್ತೆ, ಮತ್ತೊಂದು ಮುಂದಕ್ಕೆ ಹೋಗುವ ರಸ್ತೆ. ನಾವು ಮುನ್ನಡೆಯಲು ಬಯಸಿದ್ದರಿಂದ ಬಿಜೆಪಿಗೆ ಮತ ಚಲಾಯಿಸಿದೆವು ಎಂದು ಇರ್ಫಾನ್ ಮಲಿಕ್ ಎಂಬವರು ಹೇಳಿಕೊಂಡಿದ್ದಾರೆ.