ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತ್ಯೇಕತಾವಾದಿಗಳ ಜತೆಗಿನ ಮಾತುಕತೆ ಸರಿಯಲ್ಲ: ಬಿಜೆಪಿ (BJP | Sushma Swaraj | Jammu and Kashmir | P. Chidambaram)
Bookmark and Share Feedback Print
 
ಸರ್ವಪಕ್ಷ ನಿಯೋಗದ ಕೆಲವು ಸದಸ್ಯರು ಕಾಶ್ಮೀರದ ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್, ಆ ಮಾತುಕತೆಯ ನಿರ್ಧಾರ ಒಕ್ಕೊರಲಿನದ್ದಾಗಿರಲಿಲ್ಲ ಎಂದಿದ್ದಾರೆ.

ಪ್ರತ್ಯೇಕತಾವಾದಿಗಳ ಜತೆ ಮಾತುಕತೆ ನಡೆಸುವ ನಿರ್ಧಾರ ಅವರ ಸ್ವಂತದ್ದು. ಇದು ನಿಯೋಗದ ನಿರ್ಧಾರವಲ್ಲ. ಆ ರೀತಿ ಮಾತುಕತೆ ನಡೆಸಬೇಕು ಎಂದು ಅವರು ಹೊರಟಾಗ ನಾವು ಹೇಗೆ ತಡೆಯಲು ಸಾಧ್ಯ? ಅವರು ಮಾತುಕತೆಗೆ ಹೋಗಿದ್ದಾರೆ, ಆದರೆ ನಮ್ಮ ನಿರ್ಧಾರ ಹೋಗಬಾರದು ಎನ್ನುವುದಾಗಿತ್ತು. ಹಾಗಾಗಿ ನಾವು ಹೋಗಿಲ್ಲ ಎಂದು ಸುಷ್ಮಾ ತಿಳಿಸಿದ್ದಾರೆ.

ಸರ್ವಪಕ್ಷ ನಿಯೋಗದ ಮೂರು ಗುಂಪುಗಳ ಕೆಲವರು ಪ್ರತ್ಯೇಕತಾವಾದಿ ನಾಯಕರನ್ನು ಅವರ ಮನೆಗಳಲ್ಲೇ ಭೇಟಿ ಮಾಡಿರುವುದರ ಕುರಿತು ನಿಮ್ಮ ಪ್ರತಿಕ್ರಿಯೆಯೇನು ಎಂದು ಪತ್ರಕರ್ತರು ಪ್ರಶ್ನಿಸಿದಾಗ ಬಿಜೆಪಿ ನಾಯಕಿ ಮೇಲಿನಂತೆ ಉತ್ತರಿಸಿದರು.

ತೀವ್ರವಾದಿ ಮತ್ತು ಸೌಮ್ಯವಾದಿ ಹುರಿಯತ್ ಸಮೂಹಗಳ ನಾಯಕರಾದ ಸಯ್ಯದ್ ಆಲಿ ಶಾ ಗಿಲಾನಿ, ಮಿರ್ವಾಯಿಜ್ ಉಮರ್ ಫಾರೂಕ್ ಮುಂತಾದವರನ್ನು ನಿಯೋಗದ ಮೂರು ತಂಡಗಳು ಅವರ ಮನೆಗಳಲ್ಲೇ ನಿನ್ನೆ ಭೇಟಿ ಮಾಡಿದ್ದವು. ಜೆಕೆಎಲ್ಎಫ್ ಮುಖ್ಯಸ್ಥ ಯಾಸಿನ್ ಮಲಿಕ್ ಅವರನ್ನು ಅವರ ಕಚೇರಿಯಲ್ಲೇ ಭೇಟಿ ಮಾಡಲಾಗಿತ್ತು.

ಆದರೆ ಪ್ರತ್ಯೇಕತಾವಾದಿಗಳ ಜತೆಗಿನ ಮಾತುಕತೆ ವಿಚಾರದಲ್ಲಿ ನಿಯೋಗದಲ್ಲಿ ವಿಭಜನೆ ಎಂಬ ಪ್ರಶ್ನೆಯೇ ಬರುವುದಿಲ್ಲ ಎಂದು ಸುಷ್ಮಾ ಸ್ಪಷ್ಟನೆಯನ್ನೂ ನೀಡಿದ್ದಾರೆ.

ನಮ್ಮ ನಿಯೋಗದ ಕೆಲವು ವ್ಯಕ್ತಿಗಳು ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದರು. ವೈಯಕ್ತಿಕವಾಗಿ ಯಾರು ಬೇಕಾದರೂ ಹೋಗಬಹುದಾಗಿದೆ. ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕಿ ತಿಳಿಸಿದರು.

ಪ್ರತ್ಯೇಕತಾವಾದಿಗಳನ್ನು ಭೇಟಿ ಮಾಡಬೇಕೆಂಬ ನಿರ್ಧಾರವನ್ನು ಮೊದಲೇ ಮಾಡಲಾಗಿತ್ತೇ ಎಂದು ಮಾಧ್ಯಮದವರು ಕೇಳಿದಾಗ, ಋಣಾತ್ಮಕ ಉತ್ತರ ಸುಷ್ಮಾ ಅವರಿಂದ ಬಂದಿದೆ.

ಇಲ್ಲ, ಅಂತಹ ಯಾವುದೇ ನಿರ್ಣಯಕ್ಕೆ ಬಂದಿರಲಿಲ್ಲ. ನಿಯೋಗದಲ್ಲಿ ಈ ಕುರಿತು ಚರ್ಚೆ ನಡೆಸಲಾಗಿಲ್ಲ. ಕೆಲವು ಸದಸ್ಯರಷ್ಟೇ ಭೇಟಿಯ ಬಯಕೆ ವ್ಯಕ್ತಪಡಿಸಿದ್ದರು. ಇಚ್ಛೆಯಿದ್ದವರು ಮುಂದುವರಿಯಬಹುದು ಎಂದು ಸಹಜವಾಗಿ ನಿಯೋಗದ ನಾಯಕರು ಹೇಳಿದ್ದಾರೆ ಎಂದರು.

ಕೇಂದ್ರ ಗೃಹಸಚಿವ ಪಿ. ಚಿದಂಬರಂ ನೇತೃತ್ವದ 42 ಸದಸ್ಯರ ನಿಯೋಗವು ಕಾಶ್ಮೀರ ಪ್ರವಾಸದಲ್ಲಿದ್ದು, ಎರಡನೇ ದಿನವಾದ ಇಂದು ಕೂಡ ಅಭಿಪ್ರಾಯ ಸಂಗ್ರಹದಲ್ಲಿ ತೊಡಗಿದೆ.
ಸಂಬಂಧಿತ ಮಾಹಿತಿ ಹುಡುಕಿ