ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೈಎಸ್ಆರ್ ಹೆಸರು ಕೆಡಿಸುವ ಯತ್ನ ಸಫಲವಾಗದು: ಜಗನ್ (YSR | Congress | Jagan Mohan Reddy | Andhra Pradesh)
Bookmark and Share Feedback Print
 
ಮಾಜಿ ಮುಖ್ಯಮಂತ್ರಿ ದಿವಂಗದ ವೈ.ಎಸ್. ರಾಜಶೇಖರ ರೆಡ್ಡಿಯವರ ಹೆಸರು ಕೆಡಿಸುವ ಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಅವರ ಪುತ್ರ ಕಾಂಗ್ರೆಸ್ ಸಂಸದ ವೈ.ಎಸ್. ಜಗನ್ ಮೋಹನ್ ರೆಡ್ಡಿ, ತನ್ನ ತಂದೆಯವರತ್ತ ಜನತೆ ಅಪಾರ ಪ್ರೀತಿ ಹೊಂದಿರುವುದರಿಂದ ಇಂತಹ ಯತ್ನಗಳು ಸಫಲವಾಗಲಾರವು ಎಂದು ಹೇಳಿದ್ದಾರೆ.

ಅವರ ಜನಕಲ್ಯಾಣ ಯೋಜನೆಗಳಿಂದಾಗಿ ರಾಜಶೇಖರ ರೆಡ್ಡಿಯವರು ಜನತೆಯ ಹೃದಯದಲ್ಲಿ ಶಾಶ್ವತ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೊಟ್ಟೆಕಿಚ್ಚು ಮುಂತಾದ ಕಾರಣಗಳಿಂದಾಗಿ ಅವರ ಹೆಸರಿಗೆ ಮಸಿ ಬಳಿಯುವ ಯತ್ನಗಳು ನಡೆಯುತ್ತಿವೆ. ಆದರೆ ಜನರ ಪ್ರೀತಿ ಮತ್ತು ವಿಶ್ವಾಸಗಳೇ ಅಂತಹ ಪ್ರಯತ್ನಗಳನ್ನು ಮಣ್ಣುಪಾಲು ಮಾಡಲಿವೆ ಎಂದು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಸಾಗುತ್ತಿರುವ ತನ್ನ 'ಒದಾರ್ಪು ಯಾತ್ರೆ'ಯಲ್ಲಿ ಮಾತನಾಡುತ್ತಾ ಜಗನ್ ತಿಳಿಸಿದರು.

ವೈಎಸ್ಆರ್ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಭ್ರಷ್ಟಾಚಾರ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗು ದೇಶಂ ಪಕ್ಷ ಮತ್ತು ಇತರ ಪ್ರತಿಪಕ್ಷಗಳು ಮಾಡುತ್ತಿರುವ ಆರೋಪಗಳನ್ನು ಉಲ್ಲೇಖಿಸಿ ಜಗನ್ ತಿರುಗೇಟು ನೀಡುತ್ತಿದ್ದರು.

ನಮ್ಮ ಅಚ್ಚುಮೆಚ್ಚಿನ ನಾಯಕರಾಗಿದ್ದ ವೈ.ಎಸ್. ರಾಜಶೇಖರ ರೆಡ್ಡಿಯವರು ಕೇವಲ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶದಲ್ಲಿ ಮುಖ್ಯಮಂತ್ರಿಯೊಬ್ಬ ಹೇಗಿರಬೇಕು ಎಂಬುದನ್ನು ಎಲ್ಲರಿಗೂ ಕೃತಿಯಲ್ಲಿ ಮಾಡಿ ತೋರಿಸಿದ್ದರು ಎಂದೂ ಪುತ್ರ ಶ್ಲಾಘಿಸಿದರು.

ಆರೋಗ್ಯ ವಿಮಾ ಯೋಜನೆ, ವಿದ್ಯಾರ್ಥಿಗಳಿಗೆ ಟ್ಯೂಷನ್ ಶುಲ್ಕ ಮರುಪಾವತಿ, ಮಹಿಳೆಯರಿಗೆ ಶೇ.3ರ ಬಡ್ಡಿದರದಲ್ಲಿ ಸಾಲ, ಉಚಿತ ವಿದ್ಯುತ್, ಅಲ್ಪಸಂಖ್ಯಾತರಿಗೆ ಮೀಸಲಾತಿ, ಹಿರಿಯ ನಾಗರಿಕರಿಗೆ ಪಿಂಚಣಿ ಮುಂತಾದ ವಿನೂತನ ಯೋಜನೆಗಳನ್ನು ಅವರು ಜಾರಿಗೆ ತಂದಿದ್ದರು ಎಂದು ಜಗನ್ ವಿವರಣೆ ನೀಡಿದರು.

ಕಾಂಗ್ರೆಸ್ ಹೈಕಮಾಂಡ್ ನಿರಂತರ ಎಚ್ಚರಿಕೆಯನ್ನು ನೀಡುತ್ತಾ ಬಂದಿದ್ದರೂ, ಜಗನ್ ತನ್ನ ಸಾಂತ್ವನ ಯಾತ್ರೆಯನ್ನು ಮುಂದುವರಿಸಿದ್ದಾರೆ. ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಐಸಿಸಿ ಎಚ್ಚರಿಕೆ ನೀಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ